December 22, 2024

Bhavana Tv

Its Your Channel

ಮೀನುಗಾರಿಕೆ ರಕ್ಷಿಸಿ ಎಂಬ’ ಘೋಷ ವಾಕ್ಯದೊಂದಿಗೆ ಪತ್ರ ಚಳವಳಿಗೆ ಚಾಲನೆ

ಹೊನ್ನಾವರ: ವಾಣಿಜ್ಯ ಬಂದರು ತೊಲಗಿಸಿ,ಸುಂದರ ಕಡಲತೀರವನ್ನು ಉಳಿಸಿ, ಮೀನುಗಾರಿಕೆ ರಕ್ಷಿಸಿ ಎಂಬ’ ಘೋಷ ವಾಕ್ಯದೊಂದಿಗೆ ಇಲ್ಲಿನ ಕಾಸರಕೋಡ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯು ರಾಷ್ಟ್ರೀಯ ಮೀನುಗಾರರ ಸಂಘಟನೆಯ ಸಹಯೋಗದೊಂದಿಗೆ ಇಂದು ಪತ್ರ ಚಳವಳಿಗೆ ಚಾಲನೆ ನೀಡಿದ್ದು ಸಂಘಟಿತ ಹೋರಾಟವನ್ನು ತೀವ್ರಗೊಳಿಸುವದಾಗಿ ಪ್ರಕಟಿಸಿದೆ.

ಈ ಸಂಬಂಧ ಇಲ್ಲಿನ ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮೀನುಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿ ಪತ್ರ ಚಳವಳಿಗೆ ಚಾಲನೆ ನೀಡಿದರು. ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಸರ್ಕಾರಕ್ಕೆ ಬರೆದ ಪತ್ರವನ್ನು ಸಭೆಯಲ್ಲಿ ವಾಚಿಸಿ ಮೀನುಗಾರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿದರು

. ಕಡಲಾಮೆಗಳು ಮೊಟ್ಟೆ ಇಡುವ ಪರಿಸರ ಸೂಕ್ಷ್ಮ ಕಾಸರಕೋಡ ಕಡಲ ತೀರದಲ್ಲಿ ಚತುಷ್ಪಥ ರಸ್ತೆ ಮತ್ತು ಖಾಸಗಿ ವಾಣಿಜ್ಯ ಬಂದರು ನಿರ್ಮಿಸುವ ಉದ್ದೇಶಿತ ಎರಡೂ ಯೋಜನೆಗಳನ್ನು ಸರ್ಕಾರ ಕೈಬಿಡಬೇಕು, ಕಾಸರಕೋಡ ಮತ್ತು ಜಿಲ್ಲೆಯ ಇತರ ಪ್ರಮುಖ ಮೀನುಗಾರಿಕೆ ಬಂದರುಗಳ ಅಳಿವೆಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹ ಪಡಿಸಲಾಗಿದೆ . ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಆದಷ್ಟು ಶೀಘ್ರ ಈಡೇರಿಸಬೇಕು.ಇದಕ್ಕಾಗಿ ಇಂದಿನಿಂದ ನಾವು ವಿನೂತನ ಮಾದರಿಯ ಶಾಂತಿಯುತ ಹೋರಾಟವನ್ನು ಚಾಲನೆ ನೀಡಿದ್ದೇವೆ. ಮುಂದಿನ ಎರಡುವಾರ ಕಾಲ ಈ ಭಾಗದ ಪ್ರತಿಯೊಬ್ಬ ಮೀನುಗಾರನು ಕೂಡ ಸರ್ಕಾರಕ್ಕೆ ಪತ್ರಬರೆದು ಮೀನುಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಮೀನುಗಾರರ ಬೇಡಿಕೆಗಳಿಗೆ ಸರ್ಕಾರ ಆಗಲೂ ಸ್ಪಂದಿಸದಿದ್ದರೆ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವದು ಸೇರಿದಂತೆ ವಿವಿಧ ಬಗೆಯ ಶಾಂತಿಯುತ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಸರ್ಕಾರದ ನಿಲುವನ್ನು ಗಮನಿಸಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟದ ಬಗ್ಗೆ ತಿರ್ಮಾನಿಸಲಾಗುವುದು ಎಂದು ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.ಕಡಲವಿಜ್ನಾನಿ ಡಾ. ಪ್ರಕಾಶ ಮೇಸ್ತ ಮಾತನಾಡಿ ಕಾಸರಕೋಡ ಟೊಂಕದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡುವದು ಮತ್ತು ಕಡಲ ತೀರದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದು ಈ ಭಾಗದ ಪರಿಸರ,ಜೀವ ವೈವಿಧ್ಯತೆ, ಮೀನುಗಾರಿಕೆ ಮತ್ತು ಜನರ ಆರೋಗ್ಯದ ಹಿತದೃಷ್ಟಿಯಿಂದ ತೀರಾ ಅಪಾಯಕಾರಿ.ಒಂದು ವೇಳೆ ಈ ಕಾಮಗಾರಿಯೂ ಸೇರಿದಂತೆ ಮುಂದಿನ ದಿನಗಳಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ ಕಡಲ ತೀರದಲ್ಲಿ ಬೀಸುವ ವೇಗವಾಗಿ ಬೀಸುವ ಗಾಳಿಯ ರಭಸಕ್ಕೆ ಸರಕುಗಳ ಸಾಗಣೆ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆ ಗಳಿಂದಾಗಿ ಕಬ್ಬಿಣದ ಅದಿರಿನ ಧೂಳು ಮತ್ತು ರಾಸಾಯನಿಕಗಳು ವಾತಾವರಣ ಮತ್ತು ನದಿ ನೀರಿಗೆ ಸೇರುವ ಅಪಾಯವಿದ್ದು, ಹೊನ್ನಾವರ ಪಟ್ಟಣ ಸಹಿತ ಈ ಭಾಗದ ಪರಿಸರ ಮತ್ತು ಜೀವವೈವಿಧ್ಯತೆಗಳಿಗೆ ಹಾಗೂ ಪರಂಪರಾಗತ ಮೀನುಗಾರರ ನೆಲೆಗಳಿಗೆ, ವಸತಿ ಮತ್ತು ಜೀವನೋಪಾಯಕ್ಕೆ ಹಾಗೂ ಜನರ ಆರೋಗ್ಯದ ಮೇಲೆ ಗಂಭೀರ ಆತಂಕ ಉಂಟಾಗುತ್ತದೆ. ಈ ಭಾಗದ ಜನರ ಪ್ರಮುಖ ಆಹಾರವಾಗಿರುವ ಹಸಿಮೀನು ಮತ್ತು ಒಣ ಮೀನು ಉದ್ಯಮಕ್ಕೆ ಭಾರಿ ಹಿನ್ನಡೆ ಉಂಟಾಗುತ್ತದೆ ಎಂದರು. ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ್ ತಾಂಡೇಲ್ ಮಾತನಾಡಿ ಈ ಉದ್ದೇಶಿತ ಯೋಜನೆಯಿಂದ ಸಾವಿರಾರು ಮೀನುಗಾರರು ತಮ್ಮ ಪರಂಪರಾಗತ ನೆಲೆಯನ್ನು ಕಳೆದುಕೊಂಡು ಬೀದಿಗೆ ಬರುವ ಆತಂಕ ಇದೆ.ನಮ್ಮ ಬೇಡಿಕೆಗೆ ಸರ್ಕಾರ ಈಗಲೂ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವದು ಎಂದು ಅವರು ಇಂದು ಸರ್ಕಾರಕ್ಕೆ ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಮೀನುಗಾರ ಪ್ರಮುಖರಾದ ಗಣಪತಿ ತಾಂಡೇಲ,, ಪಾರ್ವತಿ ತಾಂಡೇಲ, ರೇಖಾ ಆರ್ ತಾಂಡೇಲ, ಭಾಷ್ಕರ ತಾಂಡೇಲ್ ಇನ್ನಿತರರು ಉಪಸ್ಥಿತರಿದ್ದರು.

error: