May 18, 2024

Bhavana Tv

Its Your Channel

ಹೆಬೈಲ್ ಕೆಂಚಗಾರ್ ನಾಮಧಾರಿ ಸುಗ್ಗಿಮೇಳ, ಸುಗ್ಗಿ ಮೇಳದ ಪಾರಂಪರಿಕ ಸುಗ್ಗಿ ಕುಣಿತದ ಕುರಿತಾಗಿ ಒಂದು ವಿಶೇಷ ವರದಿ.

ಹೊನ್ನಾವರ ತಾಲೂಕಿನಲ್ಲಿ ನಾಮಧಾರಿ ಸಮಾಜದ ಸುಗ್ಗಿ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿ, ಆಚರಿಸಿಕೊಂಡು ಬರುತ್ತಿರುವ ಮೇಳವೆಂದರೆ ಹೆಬೈಲ್ ಕೆಂಚಗಾರ್ ನಾಮಧಾರಿ ಸುಗ್ಗಿಮೇಳ. ಈ ಸುಗ್ಗಿ ಮೇಳದ ಪಾರಂಪರಿಕ ಸುಗ್ಗಿ ಕುಣಿತದ ಕುರಿತಾಗಿ ಒಂದು ವಿಶೇಷ ವರದಿ.

ಹೊನ್ನಾವರ ತಾಲೂಕಿನಲ್ಲಿ ನಾಮಧಾರಿ ಸಮಾಜದ ಸುಗ್ಗಿ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿ ಆಚರಿಸಿಕೊಂಡು ಬರುತ್ತಿರುವ ಮೇಳವೆಂದರೆ ಹೆಬೈಲ್ ಕೆಂಚಗಾರ್ ನಾಮಧಾರಿ ಸುಗ್ಗಿಮೇಳವಾಗಿದೆ. ಗ್ರಾಮದ ನಾಮಧಾರಿ ಸಮಾಜದ 76 ಮನೆಯವರು ಈ ಸುಗ್ಗಿಮೇಳದಲ್ಲಿ ಸಕ್ರಿಯವಾಗಿದ್ದಾರೆ. ಪ್ರತಿ ವರ್ಷ ಪಾಲ್ಗುಣ ಶುಕ್ಲ ದಶಮಿಯಂದು ಸುಗ್ಗಿ ತಂಡವನ್ನು ಸಿದ್ದವಾಗಿಸಿಕೊಂಡು, ಶ್ರೀ ಕ್ಷೇತ್ರ ಗುಂಡಬಾಳದ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಪ್ರಥಮ ಸುಗ್ಗಿ ಕುಣಿತ ಮಾಡುವ ಮೂಲಕ ಕಲಾ ಪ್ರದರ್ಶನಕೆ ಚಾಲನೆ ನೀಡುತ್ತಾರೆ. ನಂತರದ ನಾಲ್ಕು ದಿನಗಳ ಕಾಲ ಅಂದರೆ ಹೋಳಿ ಹುಣ್ಣಿಮೆಯ ವರೆಗೆ ಗ್ರಾಮದ ವಿವಿಧ ಮನೆಗಳಲ್ಲಿ, ನೆರೆಯ ಗ್ರಾಮ ಹಾಡಗೇರಿಯ ವಿವಿಧ ಕಡೆಗಳಲ್ಲಿ ಕಲಾ ಪ್ರದರ್ಶನ ನೀಡುತ್ತಾರೆ.

ಈ ಸುಗ್ಗಿ ಮೇಳದಲ್ಲಿ 8 ಜನ ಕಲಾವಿದರು ಪಗಡೆ, ತುರಾಯಿ, ಗೆಜ್ಜೆ ಕಟ್ಟಿಕೊಂಡು, ಸುಗ್ಗಿಯ ವೇಷ ಭೂಷಣ ಧರಿಸಿ ಕೋಲು ಹಿಡಿದು ಪದ್ಯ ಹಾಡುತ್ತಾ, ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಕುಣಿಯುತ್ತಾರೆ. ಡೋಲು, ತಾಳ, ಗುಮ್ಮಟೆ ವಾದನದ ಲಯಕ್ಕೆ ಅನುಗುಣವಾಗಿ ಕುಣಿತ ಹಾಗೂ ಅಂಗಾAಗ ವಿನ್ಯಾಸವೂ ಬದಲಾಗುತ್ತಿರುತ್ತದೆ. ಒಬ್ಬ ವಿದೂಷಕನ ವೇಷದಲ್ಲಿ ಆಗಾಗ ಕಲಾಭಿಮಾನಿಗಳನ್ನು ರಂಜಿಸುತ್ತಿರುತ್ತಾನೆ. ಪದ್ಯದ ಮೊದಲ ಸೊಲ್ಲು ಕುಣಿತದ ಹೆಸರಾಗಿದ್ದು, ಸುಮಾರು 25 ಬಗೆಯಲ್ಲಿ ಕುಣಿಯುವ ರೂಢಿಯನ್ನು ಈ ಸುಗ್ಗಿಮೇಳದವರು ಇರಿಸಿಕೊಂಡಿದ್ದಾರೆ.

ಕಲಾ ಪ್ರದರ್ಶನದಲ್ಲಿ ಸಿಗುವ ಸಂಭಾವನೆ ಕಡಿಮೆಯೇ ಆಗಿದ್ದರೂ, ಸಾಂಪ್ರದಾಯಿಕ ಕಲೆಯನ್ನು ಶೃದ್ಧೆಯಿಂದ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಪ್ರಶಂಸನೀಯವಾಗಿದೆ.
ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡಿ, ಪಾಡ್ಯದ ದಿನ ಬೂದಿ ಹಚ್ಚಿಕೊಂಡು ಸ್ನಾನ ಮಾಡಿ, ಕಾಮನ ಕಟ್ಟೆಗೆ ಪೂಜೆ ಸಲ್ಲಿಸುವ ಮೂಲಕ ವರ್ಷದ ಸುಗ್ಗಿ ಹಬ್ಬದ ಸಂಭ್ರಮವನ್ನು ಸಂಪನ್ನಗೊಳಿಸಲಾಗುತ್ತದೆ.

ವರದಿ: ನರಸಿಂಹ ನಾಯ್ಕ್ ಹರಡಸೆ

error: