July 26, 2024

Bhavana Tv

Its Your Channel

ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,

ಹೊನ್ನಾವರ ; ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ನೇತ್ರದಾನವೂ ಒಂದು. ಹುಟ್ಟಿನಿಂದಲೋ, ಅಪಘಾತದಿಂದಲೋ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ, ಸತ್ತ ನಂತರ ಮನುಷ್ಯ ಮಾಡುವ ನೇತ್ರದಾನವು ದೃಷ್ಟಿಯ ಭಾಗ್ಯವನ್ನು ಒದಗಿಸುತ್ತದೆ.

ಅಂತೆಯೇ ಕುಮಟಾ ತಾಲೂಕಿನ ಕೂಜಳ್ಳಿ ಕೆಳಗಿನಕೇರಿ  ಭಟ್ಟರಮನೆಯ ಅನಸೂಯ ಗಣಪತಿ ಹೆಗಡೆ  ಅವರು, ತಮ್ಮ 84 ನೇ ವಯಸ್ಸಿನಲ್ಲಿ  ವಯೋಸಹಜ ಕಾಯಿಲೆಯಿಂದ  ನಿಧನರಾಗಿದ್ದರು. ಬದುಕಿನಲ್ಲಿ ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನು ಕಾಣುವ ಉದ್ದೇಶವನ್ನು ಅನಸೂಯ ಹೆಗಡೆ ಹೊಂದಿದ್ದರು. ಅವರು  ಜೀವಿತಾವಧಿಯಲ್ಲಿ ವ್ಯಕ್ತಪಡಿಸಿದ ಇಚ್ಛೆಯ ಪ್ರಕಾರ ಅವರ ಕುಟುಂಬದವರು, ಮೃತರ ಕಣ್ಣುಗಳನ್ನು  ದಾನ ಮಾಡುವ ಬಗ್ಗೆ ಕುಮಟಾದ ಲಯನ್ಸ್ ರೇವಣ್ಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ"ಯ  ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ  ವಿಷಯ ತಿಳಿಸಿದರು.  ಕೂಡಲೇ ನೇತ್ರತಜ್ಞ ಡಾಕ್ಟರ್ ರಾಜಶೇಖರ್ ತಂಡವು ಕೂಜಳ್ಳಿಯಲ್ಲಿನ ಮನೆಗೆ ಭೇಟಿ ನೀಡಿ ಮೃತರ ಎರಡೂ ಕಣ್ಣುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸಂರಕ್ಷಿಸಿ ಆಸ್ಪತ್ರೆಯ ವತಿಯಿಂದ ದಾನವಾಗಿ ಪಡೆದರು.

ಸಾಮಾಜಿಕ ಕಳಕಳಿ ಹೊಂದಿದ ಸದ್ ಗೃಹಿಣಿಯಾಗಿದ್ದ ಅನುಸೂಯ ಹೆಗಡೆಯವರು ಹಲವು ವರ್ಷಗಳ ಹಿಂದೆಯೇ ಪತಿಯನ್ನು ಸಹ ಕಳೆದುಕೊಂಡಿದ್ದರು.  ಮಕ್ಕಳಿರದ ಇವರ ಅಂತ್ಯಕ್ರಿಯೆ ಮತ್ತು ವಿಧಿ ವಿಧಾನಗಳನ್ನು ಕುಟುಂಬಸ್ಥರು ನೆರವೇರಿಸಿದರು.
ವರದಿ: ನರಸಿಂಹ ನಾಯ್ಕ್ ಹರಡಸೆ.
error: