May 19, 2024

Bhavana Tv

Its Your Channel

ಬೀಜ ಬಿತ್ತೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮ

ಹೊನ್ನಾವರ ; ತಾಲೂಕಿನ ಹಿರೇಬೈಲ್ ಗ್ರಾಮದ ಚಿಕ್ಕೊಳ್ಳಿಯಲ್ಲಿ, ಅರಣ್ಯ ಇಲಾಖೆಯ ವತಿಯಿಂದ ಪರಿಸರ ದಿನಾಚರಣೆಯ ಪ್ರಯುಕ್ತ ಬೀಜ ಬಿತ್ತೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಮಳೆಗಾಲಕ್ಕೆ ಮುನ್ನ ಹೇರಳವಾಗಿ ದೊರೆಯುವ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಕಾಡು ಹಾಗೂ ಕಾಡಿನಂಚು, ಸಾರ್ವಜನಿಕ ಪ್ರದೇಶಗಳಲ್ಲಿ ಬಿತ್ತಿ ಪೋಷಿಸುವುದು ಅರಣ್ಯ ಇಲಾಖೆಯ ಬೀಜ ಬಿತ್ತೋತ್ಸವ ಕಾರ್ಯಕ್ರಮವಾಗಿದೆ.
ಜೂನ್‌ನಲ್ಲಿ ಮಳೆಗಾಲದೊಂದಿಗೆ ಶಾಲೆಗಳು ಆರಂಭವಾಗಿದ್ದರಿ0ದ, ತಾಲೂಕು, ಹೋಬಳಿ ಮಟ್ಟದ ಆಯ್ದ ಶಾಲೆಗಳ ಮಕ್ಕಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡು, ಅರಣ್ಯ ಇಲಾಖೆಯಿಂದ ಗುರುತಿಸಲಾದ ಪ್ರದೇಶಗಳಲ್ಲಿ, ಸಂಗ್ರಹಿಸಲಾದ ಸ್ಥಳೀಯ ವಿಶೇಷತೆಯ ಬೀಜಗಳನ್ನು ಮಕ್ಕಳಿಂದ ಬಿತ್ತನೆ ಮಾಡಿಸಿ, ಅವರಲ್ಲಿ ಪರಿಸರದ ಬಗ್ಗೆ ಜಾಗೃತಿ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿದೆ.

ಅದರಂತೆ ಚಿಕ್ಕೊಳ್ಳಿಯಲ್ಲಿ ಈ ಬೀಜ ಬಿತ್ತೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯ ವಿ.ಡಿ. ನಾಯ್ಕ್ ಸಸಿ ನೆಡುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು.
ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ. ಎಂಬ ಘೋಷದೊಂದಿಗೆ ಚಿಕ್ಕೊಳ್ಳಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಶಾಲೆಗೆ ಹತ್ತಿರದ ಅರಣ್ಯದಲ್ಲಿ ಹಲಸು, ಮತ್ತಿ, ಬೆಟ್ಟಹೊನ್ನೆ, ತಾರೆ, ಮುರುಗಲು ಮುಂತಾದ ಬೀಜಗಳನ್ನು ಉತ್ಸಾಹದಿಂದ ಬಿತ್ತಿ ಸಂಭ್ರಮಿಸಿದರು. ಇನ್ನು ಪಾಲಕರು, ಶಿಕ್ಷಕರು, ಊರ ನಾಗರಿಕರು, ಅರಣ್ಯಾಧಿಕಾರಿಗಳು ಸೇರಿ ಅವಪತ್ಯ, ನೆಲ್ಲಿ, ಕಹಿಬೇವು, ಬಿಲ್ವಪತ್ರೆ ಮುಂತಾದ ಉಪಯುಕ್ತ ಸಸಿಗಳನ್ನು ನೆಟ್ಟು ನೀರೆರದರು. “ಹಸಿರು ಕರ್ನಾಟಕದ” ಅಂಗವಾಗಿ ಆಚರಿಸಿದ ಈ ಕಾರ್ಯಕ್ರಮದಲ್ಲಿ ಬೀಜಗಳನ್ನು ಅರಣ್ಯದೊಳಗೆ ಒಯ್ಯಲು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಚೀಲ, ಬುಟ್ಟಿಗಳನ್ನು ಬಳಸದೆ, ನೈಸರ್ಗಿಕವಾಗಿ ಸಿಗುವ ತಾಳೆ ಎಲೆ ಬಳಸಿ ಬುಟ್ಟಿ ತಯಾರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಹೊನ್ನಾವರ ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ ಮಾತನಾಡಿ “ಪರಿಸರ ಸಂರಕ್ಷಣೆಯಲ್ಲಿ ಸ್ವಾರ್ಥ ಇರಬಾರದು. ಈ ಪ್ರಕೃತಿಯಲ್ಲಿನ ಸಕಲ ಜೀವರಾಶಿಗಳೂ ಅನುಕೂಲ ಆಗಲೆಂದು ಪರಿಸರ ಸಂರಕ್ಷಣೆ ಮಾಡಬೇಕು. ನೆಟ್ಟ ಸಸಿಗಳನ್ನು ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಪೋಷಿಸಬೇಕು. ಅತ್ಯುತ್ತಮವಾಗಿ ಗಿಡಗಳನ್ನು ಆರೈಕೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು.” ಎಂದರು.

ಉಪವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಗೌಡ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಕರ್ತವ್ಯ ಹಾಗೂ ಜನಸ್ನೇಹಿ ವ್ಯಕ್ತಿತ್ವಕ್ಕೆ ಸಾಕ್ಷಿಯೆಂಬAತೆ ಶಾಲಾ ಮಕ್ಕಳು, ಶಿಕ್ಷಕ ವೃಂದ, ಎಸ್‌ಡಿಎಂಸಿ, ಗ್ರಾಮ ಪಂಚಾಯತ್ ಸದಸ್ಯರು, ಊರ ನಾಗರಿಕರೆಲ್ಲ ಸೇರಿ ಉತ್ಸಾಹದಿಂದ ಬೀಜ ಬಿತ್ತೋತ್ಸವದಲ್ಲಿ ಪಾಲ್ಗೊಂಡು, ಪರಿಸರ ಪ್ರೇಮ ಮೆರೆದರು.
ವರದಿ:ನರಸಿಂಹ ನಾಯ್ಕ್ ಹರಡಸೆ.

error: