April 27, 2024

Bhavana Tv

Its Your Channel

‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಐದನೇ ದಿನದ ಸಭಾ ಕಾರ್ಯಕ್ರಮ

ಹೊನ್ನಾವರ ; ಗ್ರಾಮೀಣ ಪ್ರದೇಶವಾದ ಗುಣವಂತೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಆಗುತ್ತಿರುವುದು ಸಂಸ್ಕೃತಿಕ ಅನನ್ಯತೆಯ ಅಪರೂಪದ ಅಪೂರ್ವ ಕಾರ್ಯಕ್ರಮವೆಂದು ಭಾವಿಸುತ್ತೇನೆ ಎಂದು ರಾಷ್ಟ್ರೀಯ ನಾಟ್ಯೋತ್ಸವದ ಐದನೇ ದಿನದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಖ್ಯಾತ ಸಾಹಿತಿಗಳಾದ ಶ್ರೀ ಜಿ. ಎಸ್. ಭಟ್ಟ ಮೈಸೂರುರವರು ಅಭಿಪ್ರಾಯ ಪಟ್ಟರು.
ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸರ್ಕಾರ ಗುರುತಿಸಿ ಸ್ಥಿರ ಅನುದಾನವನ್ನು ನೀಡುವಂತೆ ಆಗ್ರಹಿಸಿದರು. ನಿರಂತರ ಯಕ್ಷಗಾನ ಚಿಂತನೆಯ ಈ ಕೆರೆಮನೆಯ ನೆಲದಲ್ಲಿ “ಯಕ್ಷಗಾನ ವಿಶ್ವವಿದ್ಯಾಲಯ” ಸ್ಥಾಪನೆಯಾಗಬೇಕು, ತನ್ಮೂಲಕ ಸಂಶೋಧನೆಗಳು ನಡೆದು ಯಕ್ಷಗಾನದ ವಿಸ್ತಾರ ಸಮಾಜಕ್ಕೆ ತಲುಪಬೇಕು ಎಂದರು. ಯಕ್ಷಗಾನ ಅಕಾಡೆಮಿಯಲ್ಲಿ ಉತ್ತರ ಕನ್ನಡದವರನ್ನು ನಿರ್ಲಕ್ಷಿಸಿದ್ದನ್ನ ಕೂಡಲೇ ಸರಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯಮಾನ್ಯರಿಂದ ದೀಪ ಪ್ರಜ್ವಲನದ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಸಾಗರದ ಕಲಾಸಂಘಟಕರಾದ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟ, ಜಾನಪದ ತಜ್ಞರು, ಸಂಶೋಧಕರು ಆದ ಡಾ. ಮೋಹನ ಕುಂಟಾರ್ ,ಕಣಿಪುರ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ನಾರಾಯಣ ಚಂಬಲ್ತಿಮಾರ ಇವರಿಗೆ ಪುರಸ್ಕರಿಸಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರವರು ಮಾತನಾಡಿ ಸಂಘಟನೆಯು ಅತಿ ದುಸ್ತರವಾದ ಕೆಲಸ, ಅದರಲ್ಲಿಯೂ ಯಕ್ಷಗಾನ ಸಂಘಟನೆ ಕಷ್ಟ ಸಾಧ್ಯ. ಪ್ರಸ್ತುತ ಈ ಕಾಲದಲ್ಲಿ ದೇಶದ ವಿವಿಧ ಪ್ರಾಕಾರಗಳ ಕಲೆಯನ್ನ ಈ ನೆಲದಲ್ಲಿ ಪ್ರದರ್ಶಿಸುವಂತಹ ಅತ್ಯುತ್ತಮ ಗಾಯಕ ಮಾಡುತ್ತಿರುವ ಶ್ರೀ ಶಿವಾನಂದ ಹೆಗಡೆಯವರನ್ನು ಶ್ಲಾಘಿಸಿದರು.
ಶ್ರೀ ಮೋಹನ ಕುಂಟಾರ್ ರವರು ಮಾತನಾಡುತ್ತಾ ವೇದ, ಪುರಾಣ, ಉಪನಿಷತ್ತುಗಳನ್ನು ಯಕ್ಷಗಾನ ಕಲೆಯ ಮೂಲಕ ಸಮಾಜದ ಎಲ್ಲ ಸ್ತರದ ವ್ಯಕ್ತಿಗಳಿಗೆ ಸರಳವಾಗಿ ಮುಟ್ಟಿಸಬಹುದಾಗಿದೆ. ಕಲಾವಿದನಾದವನಿಗೆ ತಾಳ್ಮೆ, ಸಿದ್ಧತೆ, ಬದ್ಧತೆ ,ಮಾನವೀಯ ಸಂವೇದನೆ, ಅಭಿಪ್ರಾಯ ಕೇಳುವ ಗುಣ ಮತ್ತು ಭಾವನೆಗಳು ಇದ್ದಲ್ಲಿ ,’ಮನುಷ್ಯ ಸಂವೇದನೆಯ ಸಂವರ್ಧನೆ ಭಾವ’ಮೂಡಿಸಲು ಸಾಧ್ಯ ಎಂದರು.
ಶ್ರೀ ನಾರಾಯಣ ಚಂಬಲ್ತಿಮಾರ್ ರವರು ಮಾತನಾಡುತ್ತಾ ನಾಟ್ಯೋತ್ಸವ ರಾಷ್ಟ್ರಮಟ್ಟದ ಕಲಾಪ್ರಕಾರವನ್ನು ವೈಭವಿಕರಿಸುವ ಉತ್ಸವವಾಗಿದೆ. ಪ್ರಭುದ್ಧ ಪ್ರೇಕ್ಷಕರನ್ನ ನಿರ್ಮಿಸುವ, ಸಾಂಸ್ಕೃತಿಕ ಕಲ್ಪನೆಯ ಬೀಜವನ್ನು ವೃಕ್ಷ ವನ್ನಾಗಿಸುವ, ಭಾರತವನ್ನು ಅರಿಯುವ, ರಾಷ್ಟ್ರೀಯ ಕಲಾವಿದರನ್ನ ಹುಟ್ಟಿಸುವ ‘ಧ್ಯೇಯ’ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಗಮನಿಸಬಹುದಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್. ಎಸ್. ಹೆಗಡೆ ಅವರು ಮಾತನಾಡುತ್ತಾ ಸಮಾಜದಲ್ಲಿ ಭಾವೈಕ್ಯತೆ ಮೂಡಿಸುವ, ಸಂಸ್ಕೃತಿಯನ್ನು ಬೆಳೆಸುವ ಮತ್ತು ಪರಂಪರೆಯನ್ನು ಮುಂದುವರಿಸುವ ಮಾಧ್ಯಮ ನಾಟ್ಯೋತ್ಸವದ ಉದ್ದೇಶ ಆಗಿದೆ ಎಂದರು. ಕಲಾವಿದನ ಸಾರ್ಥಕ್ಯದ ಹಿಂದಿರುವ ಶ್ರಮ, ಆರಾಧನೆ, ನಿರಂತರ ತುಡಿತ, ಮತ್ತು ಕಲಾವಿದನಲ್ಲಿರುವ ಆಸಕ್ತಿಯನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಧರ ಹೆಗಡೆ, ಪ್ರಾಧ್ಯಾಪಕರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಯಕ್ಷಗಾನದ ವಾತಾವರಣದಲ್ಲಿ ಬೆಳೆದಾಗ ತನ್ನ ಜೀವನ ಪಥದಲ್ಲಿ ಸಾಂಸ್ಕೃತಿಕ ಸಂವೇದನೆ ಪಡೆದು ಉತ್ತಮ ವ್ಯಕ್ತಿಯಾಗಲು ಸಾಧ್ಯ ಎನ್ನುವುದನ್ನು ತನ್ನ ಜೀವನದ ಉದಾಹರಣೆಗಳನ್ನ ಉಲ್ಲೇಖಿಸಿ ತಿಳಿಸಿದರು.
ಊರಿನ ಮುಖಂಡರಾದ ಶ್ರೀ ಗಣಪಯ್ಯ ಗೌಡರವರು ಮಾತನಾಡಿ ನಾಟ್ಯೋತ್ಸವದಿಂದ ‘ಕೆರೆಮನೆ’ ಎಂಬ ಗ್ರಾಮೀಣ ಪ್ರದೇಶ ದೇಶದ ನಕಾಶೆಯಲ್ಲಿ ಗುರುತಿಸುವಂಥಾಗಿದೆ,ಈ ಪರಂಪರೆ ಮುಂದುವರಿದು ಸುಧೀರ್ಘ ವಸಂತಗಳ ಸಾರ್ಥಕತೆ ಪಡೆಯಲಿ ಎಂದು ಹಾರೈಸಿದರು.
ಯಕ್ಷಗಾನ ಶೈಲಿಯಲ್ಲಿ ಶ್ರೀ ಅನಂತ ಹೆಗಡೆ ದಂತಳಿಕೆ ಗಣಪತಿ ಸ್ತುತಿ ಗೈದರು. ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ಶ್ರೀ ಶ್ರೀಧರ್ ಗೌಡ ಮತ್ತು ಚಂಡೆಯಲ್ಲಿ ಶ್ರೀಧರ ಮರಾಠೆ ಸಾತ್ ನೀಡಿದರು.
ಕೆರೆಮನೆ ಶಿವಾನಂದ ಹೆಗಡೆ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆರಮನೆ ಶ್ರೀಧರ ಹೆಗಡೆ ಸರ್ವರಿಗೂ ಕಸೆ ಶಾಲು ಹಾಕಿ ಗೌರವಿಸಿ ವಂದನೆಗಳನ್ನು ಸಮರ್ಪಿಸಿದರು.
ಶ್ರೀ ಪ್ರದೀಪ್ ಖರ್ವಾ ಮತ್ತು ಶ್ರೀ ಜಿ. ಆರ್. ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರದಲ್ಲಿ ಸಂಸ್ಕೃತಿಕ ಸಿಂಚನವಾಗಿ ಹೈದರಾಬಾದದಿಂದ ಆಗಮಿಸಿದ ಮುಕ್ತಿ ಶ್ರೀ ಇವರಿಂದ ಖತಕ್ ನೃತ್ಯ ಪ್ರಸ್ತುತಗೊಂಡಿತು. ಗಾಯಕರಾಗಿ ನಾಗೇಶ್ ಅಡಗಾಂವ್ಕರ್, ತಬಲಾದಲ್ಲಿ ಆಶಯ ಕುಲಕರ್ಣಿ, ಹಾರ್ಮೋನಿಯಂ ದಲ್ಲಿ ಅಭಿಷೇಕ ಕುಲಕರ್ಣಿ, ಪಕಾವಾಜ್ ದಲ್ಲಿ ಕೃಷ್ಣಸಾಲುಂಬೆ ನಿರ್ವಹಿಸಿದರು.
ನಂತರದಲ್ಲಿ “ನಾಟ್ಯ ಶ್ರೀ ಕಲಾತಂಡ” ಶಿವಮೊಗ್ಗ ಇವರಿಂದ ಶರಸೇತು ಬಂಧ ಯಕ್ಷಗಾನ ವಿದ್ವಾನ್ ದತ್ ಮೂರ್ತಿಯವರ ಸಂಚಾಲಕತ್ವದಲ್ಲಿ ಸುಂದರವಾಗಿ ಮೂಡಿಬಂದಿತು.

error: