April 27, 2024

Bhavana Tv

Its Your Channel

ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್.

ಹೊನ್ನಾವರ : ತಾಲ್ಲೂಕಿನ ಕಾಸರಕೋಡ ಟೊಂಕಾ ಮೀನುಗಾರು ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರಿಸುವುದಾಗಿ ಒಕ್ಕೊರಲಿನಿಂದ ನಿರ್ಧರಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಗುರುವಾರ ಕಾಸರಕೋಡ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು.
ಇಲ್ಲಿನ ಮಲ್ಲುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಮತ್ತು ಮೀನುಗಾರರ ಜೊತೆ ಡಿಸಿಯವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರಿಗೆ ಮೀನುಗಾರರು ಬಂದರು ಕಾಮಗಾರಿ ಕೈ ಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಈವೇಳೆ ಮಾತನಾಡಿದ ಡಿಸಿಯವರು ಈಗಾಗಲೇ ಈ ಸಮಸ್ಯೆ ಬಗೆಹರಿಯಬೇಕಿತ್ತು. ನೀವು ನಿಮ್ಮ ಹೋರಾಟ ಮಾಡಿರುವಿರಿ.ನಾವು ನಿಮ್ಮ ಮೇಲೆ ದಬ್ಬಾಳಿಕೆ ಮಾಡುವುದಾಗಲಿ,ಒತ್ತಡ ಹೇರುವುದಾಗಲಿ ಮಾಡಿಲ್ಲ.ಆದರೆ ನಮಗೆ ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ.ನಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಸಹಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಅತ್ಯಮೂಲ್ಯವಾದದು ಯಾವುದೇ ಕಾರಣಕ್ಕು ಮತದಾನದಿಂದ ವಂಚಿತರಾಗಬೇಡಿ ಎಂದು ಕರೆನೀಡಿದರು. ಮುಂದೆ ಮೀನುಗಾರರಿಗೆ ಮತ್ತು ಸ್ಥಳೀಯರಿಗೆ ಅನ್ಯಾಯವಾಗದಂತೆ ಯಾವ ರೀತಿ ಮುಂದುವರಿಯಬೇಕು ಎನ್ನುವ ಕುರಿತು ಸಧ್ಯದಲ್ಲೇ ಜಂಟಿ ಮಾತುಕತೆಯನ್ನು ನಡೆಸೋಣ. ಅಲ್ಲಿಯವರೆಗೆ ಬಂದರು ನಿರ್ಮಾಣ ಕಂಪನಿಯವರು ಯಾವುದೇ ಕಾಮಗಾರಿ ನಡೆಸದಂತೆ ಕ್ರಮ ವಹಿಸಲಾಗುವದು ಎಂದು ಡಿಸಿಯವರು ಭರವಸೆ ನೀಡಿದರು.
ಇದಕ್ಕೆ ಮೀನುಗಾರರಾದ ರಾಜೇಶ್ ತಾಂಡೇಲ್ ,ಜಗ್ಗು ತಾಂಡೇಲ್ ,ರಾಜು ತಾಂಡೇಲ್,ಹಮ್ಜಾ ಸಾಬ್ ಮತ್ತಿತರರು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿ ಮೀನುಗಾರರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಮತ್ತು ವಾಣಿಜ್ಯ ಬಂದರು ಯೋಜನೆಯನ್ನು ಕೈ ಬಿಡಬೇಕು. ಮೀನುಗಾರರು ಈಗ ವಾಸವಿರುವ ಮತ್ತು ಹಿಂದೆ ತಮ್ಮ ಪೂರ್ವಜರು ವಾಸವಾಗಿದ್ದ ಸ್ಥಳದ ಜಮೀನಿಯ ಹಕ್ಕುಗಳನ್ನು ಗ್ರಾಮ ನಕ್ಷೆ ಮತ್ತು ದಾಖಲೆಗಳಲ್ಲಿ ಅಡಕಗೊಳಿಸುವುದು ಕೆಲಸಗಳನ್ನು ಜಿಲ್ಲಾಡಳಿತದಿಂದ ಆಗಬೇಕು ಎಂದು ಆಗ್ರಹಿಸದರು .ಯಾರೊಬ್ಬರು ನಮ್ಮ ಅಳಲು ಕೇಳುತ್ತಿಲ್ಲ,ಮತದಾನ ಬಹಿಷ್ಕರಿಸುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲಕಾಲ ಸರ್ವೆ ದಾಖಲಾತಿ ಹಾಗೂ ಬಂದರು ಸ್ಥಳದ ವಿಚಾರವಾಗಿ ಅಧಿಕಾರಿಗಳು ಹಾಗೂ ಮೀನುಗಾರರ ಮದ್ಯೆ ವಾಗ್ವಾದ ನಡೆಯಿತು. ಮಲ್ಲುಕುರ್ವಾ ಶಾಲೆಯ ಇರುವ ಸ್ಥಳಕ್ಕು ಯಾವುದೇ ಆರ್ ಟಿಸಿ ದಾಖಲಾತಿ ಇರುವುದಿಲ್ಲ,ಕಂಪನಿಗೆ ಆರ್ ಟಿಸಿ ಕೊಡಲು ತಿಳಿಯುತ್ತದೆ,ಕೊನೆಪಕ್ಷ ಈ ಶಾಲೆಗಾದರು ದಾಖಲಾತಿ ನೀಡಿ ಎಂದು ಮಹಮದ್ ಕೋಯಾ ಸಭೆಯಲ್ಲಿ ಗಮನಸೆಳೆದರು. ಕೊನೆಗೆ ಡಿಸಿ ಗಂಗೂಬಾಯಿ ಮಾನಕರ್ ಅವರು ನಿಮ್ಮ ಬೇಡಿಕೆಗಳನ್ನು ಟಿಪ್ಪಣಿ ಮಾಡಿ ತಹಶಿಲ್ದಾರರಿಗೆ ಹಾಗೂ ತಮ್ಮ ಕಚೇರಿಗೆ ನೀಡಿ ಎಂದು ಮೀನುಗಾರರಿಗೆ ಹೇಳಿದರು.ಮೀನುಗಾರರಿಂದ ಮತದಾನ ಬಹಿಷ್ಕಾರ ಹಿಂಪಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಯಿತು.
ವರದಿ : ವಿಶ್ವನಾಥ ಸಾಲಕೋಡ್, ಹೊನ್ನಾವರ

error: