ಕುಮಟಾ: ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಕಸದ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕರೆ ನೀಡಿದರು.
ಅವರು ಶುಕ್ರವಾರ ಕುಮಟಾ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ೧೫ ನೆಯ ಹಣಕಾಸು ಯೋಜನೆಯಲ್ಲಿ ೪.೯ ಕೋಟಿ ರೂ. ವೆಚ್ಚದಲ್ಲಿ ಮಂಜೂರಾದ ಹಸಿ-ಒಣ ಕಸ ಟ್ವಿನ್‌ಬಿನ್ ಇರಿಸುವಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಕೇಂದ್ರ, ರಾಜ್ಯ ಸರ್ಕಾರ ಹಾಗೂ ನ್ಯಾಯಾಲಯ ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅದರಂತೆ ಕುಮಟಾ ಪಟ್ಟಣ ವ್ಯಾಪ್ತಿಯ ವಾಣಿಜ್ಯ ಹಾಗೂ ಪ್ರಮುಖ ಸ್ಥಳಗಳಲ್ಲಿ ಘನತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀಸಾಡುವುದನ್ನು ತಡೆಗಟ್ಟಲು ಟ್ವಿನ್‌ಬಿನ್ ಇಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಂಡಕAಡಲ್ಲಿ ಕಸ ಒಗೆಯದೇ ಈ ತೊಟ್ಟಿಯಲ್ಲಿಯೇ ಹಾಕಬೇಕು ಎಂದರು.
ಘನತ್ಯಾಜ್ಯ ಘಟಕಗಳನ್ನು ಪ್ರತಿ ಗ್ರಾಮದಲ್ಲಿಯೂ ನಿರ್ಮಾಣವಾಗಬೇಕೆಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಆದೇಶ ನೀಡಿದ್ದಾರೆ. ಇದಕ್ಕೆ ಜನರ ಸಹಕಾರವೂ ಅತ್ಯಗತ್ಯವಾಗಿದೆ. ಕುಮಟಾ ಪಟ್ಟಣವನ್ನು ಸ್ವಚ್ಛ ಪಟ್ಟಣ ಎಂದು ಘೋಷಣೆ ಮಾಡಲು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಸುರೇಶ.ಎಂ.ಕೆ ಮಾತನಾಡಿ, ಪುರಸಭೆಯ ೧೫ ನೆಯ ಹಣಕಾಸು ಯೋಜನೆಯಲ್ಲಿ ಪಟ್ಟಣ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸುಮಾರು ೪.೯ ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮತ್ತು ಪ್ರಮುಖ ಸ್ಥಳಗಳಲ್ಲಿ ಸೇರಿದಂತೆ ಒಟ್ಟೂ ೫೦ ಕಡೆಗಳಲ್ಲಿ ಟ್ವಿನ್‌ಬಿನ್ ಇಡಲಾಗಿದೆ. ಸಾರ್ವಜನಿಕರು ಹಸಿ-ಒಣ ಕಸ ಪ್ರತ್ಯೇಕಗೊಳಿಸಿ, ಹಾಕಬೇಕು ಎಂದರು.
ಪ್ರಮುಖ ಸ್ಥಳ ಮತ್ತು ವಾಣಿಜ್ಯ ಪ್ರದೇಶಗಳನ್ನು ಗುರುತಿಸಿ, ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ. ಅಂಗಡಿಕಾರರು ಮತ್ತು ಸಾರ್ವಜನಿಕರು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನು ನಿಲ್ಲಿಸಿ, ಈ ಟ್ವಿನ್‌ಬಿನ್‌ನಲ್ಲಿಯೇ ಕಸ ಹಾಕಬೇಕು ಎಂದ ಅವರು, ಮನೆಯ ಕಸಗಳನ್ನು ತಂದು ಇದರಲ್ಲಿ ಸುರಿಯಲು ಅವಕಾಶವಿಲ್ಲ. ಈ ಕಸ ಸಂಗ್ರಹಿಸಲು ಪ್ರತ್ಯೇಕ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಹರ್ಮಲಕರ್, ಸದಸ್ಯರಾದ ತುಳುಸು ಗೌಡ, ಅನುರಾಧಾ ಬಾಳೇರಿ, ಮಹೇಶ ನಾಯ್ಕ ವನ್ನಳ್ಳಿ, ಟೋನಿ ರೋಡ್ರಿಗಿಸ್, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ, ಪ್ರಮುಖರಾದ ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ, ಜಯಾ ಶೇಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ