December 28, 2024

Bhavana Tv

Its Your Channel

ಕಿಂಡಿ ಆಣೆಕಟ್ಟು ಯೋಜನೆ ಅವೈಜ್ಞಾನಿಕ ಸ್ಥಳ ಬದಲಿಸುವಂತೆ ಗ್ರಾಮಸ್ಥರಿಂದ ಶಾಸಕರಿಗೆ ಮನವಿ

ಕುಮಟಾ : ತಾಲೂಕಿನ ಅಳಕೋಡನ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾದ ಕಿಂಡಿ ಆಣೆಕಟ್ಟು ಯೋಜನೆ ಅವೈಜ್ಞಾನಿಕವಾಗಿದ್ದು, ಕಾಮಗಾರಿಯ ಸ್ಥಳ ಬದಲಾಯಿಸುವಂತೆ ಒತ್ತಾಯಿಸಿ ಆ ಭಾಗದ ಗ್ರಾಮಸ್ಥರು ಪಕ್ಷಾತೀತವಾಗಿ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಮಾಡಿದರು.

ಶಾಸಕ ದಿನಕರ ಶೆಟ್ಟಿ ಅವರ ನಿವಾಸದಲ್ಲಿ ಶಾಸಕರನ್ನು ಭೇಟಿ ಮಾಡಿದ ಕುಮಟಾ ತಾಲೂಕಿನ ಅಳಕೋಡ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಅಲ್ಲಿನ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾದ ಕಿಂಡಿ ಆಣೆಕಟ್ಟು ಯೋಜನೆ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದರು. ಈ ಕಿಂಡಿ ಆಣೆಕಟ್ಟಿನ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಆದರೆ ಈ ಅವೈಜ್ಞಾನಿಕ ಕಾಮಗಾರಿಯಿಂದ ಮಲವಳ್ಳಿ, ಶಿರಗುಂಜಿ, ಉಪ್ಪಿನಪಟ್ಟಣ, ತಪ್ಪಲಗುತ್ತಾ, ಚಂಡಿಹಿತ್ತಲ್ ಗ್ರಾಮಗಳು ಮಳೆಗಾಲದಲ್ಲಿ ಜಲಾವೃತಗೊಳ್ಳಲಿದೆ. ನದಿ ಸಂಗಮ ಸ್ಥಳದಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸುವುದರಿಂದ ಆ ಎಲ್ಲ ಗ್ರಾಮಗಳು ನೆರೆಯಿಂದ ಮುಳುಗಡೆಯಾಗುವ ಸಾಧ್ಯತೆ ಅಧಿಕವಾಗಿದೆ. ಸುಮಾರು ೫೦೦ ಎಕರೆಗೂ ಅಧಿಕ ಕೃಷಿ ಪ್ರದೇಶ ಮುಳುಗಡೆಯಾಗುವುದರಿಂದ ಬೆಳೆಗಳು ನಾಶವಾಗಿ, ರೈತರ ಬದುಕು ದುಸ್ತರಗೊಳ್ಳಲಿದೆ. ನೆರೆ ಬರುವ ಪ್ರದೇಶದಲ್ಲಿ ಆಣೆಕಟ್ಟು ನಿರ್ಮಿಸಿದರೆ ಪ್ರವಾಹದ ತೀವ್ರತೆ ಇನ್ನು ಹೆಚ್ಚಾಗಿ ಇಡೀ ಊರೇ ಮುಳುಗಡೆಯಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಉಪ್ಪಿನಪಟ್ಟಣ, ಹಡಿನಗದ್ದೆ, ಮುಕ್ರಿಕೇರಿಯ ಭಾಗಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಸಿಹಿ ನೀರು ಮತ್ತು ಉಪ್ಪು ನೀರು ಸಂಗಮಿಸುವ ಸ್ಥಳದಲ್ಲಿ ವ್ಯತ್ಯಾಸವಾದರೆ ಮೀನಿನ ಸಂತತಿಗೆ ಮಾರಕವಾಗಲಿದೆ. ಆಣೆಕಟ್ಟು ನಿರ್ಮಾಣಕ್ಕಾಗಿ ಮಣ್ಣು ಸುರಿದಿದ್ದರಿಂದ ದೋಣಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೃಷಿ ಕಾರ್ಯಕ್ಕಾಗಿ ದೋಣಿಯ ಮೇಲೆ ಸಾಗಿಸಲಾಗುತ್ತಿರುವ ಸೊಪ್ಪು, ತರಕು, ಹುಲ್ಲು, ಕಟ್ಟಿಗೆ ಸಾಗಣಿಕೆಗೆ ತೊಂದರೆಯಾಗಿದೆ.
ಶಿರಗುಂಜಿ ನಡುಗಡ್ಡೆಯಲ್ಲಿರುವ ಐತಿಹಾಸಿಕ ಪಾಂಡವರ ಕಲ್ಲು ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳದಂತಾಗಿದೆ. ಬೊಗರಿಬೈಲ್ ಸೇತುವೆ ನಿರ್ಮಿಸುವಾಗ ನದಿ ಪಾತ್ರದಲ್ಲಿ ಮಣ್ಣು ಮತ್ತು ಕಾಂಕ್ರೀಟ್ ತುಂಬಿ ಈಗಾಗಲೇ ನದಿ ಪಾತ್ರದ ಆಳ ಕಡಿಮೆಯಾಗಿ, ಮುಳುಗಡೆ ಪ್ರದೇಶ ಹೆಚ್ಚಾಗಿದೆ. ಈಗ ಉದ್ದೇಶಿತ ಸ್ಥಳದಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸಿದರೆ, ಮುಂಬರುವ ಮಳೆಗಾಲದಲ್ಲಿ ನೆರೆಯ ತೀವ್ರತೆ ಜಾಸ್ತಿಯಾಗಿ, ಇನ್ನಷ್ಟು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಈ ಆಣೆಕಟ್ಟು ಯೋಜನೆಯನ್ನು ನದಿ ಪಾತ್ರದಿಂದ ಮೇಲ್ಭಾಗದ ಪ್ರದೇಶಕ್ಕೆ ಸ್ಥಳಾಂತರಿಸಿ, ಗ್ರಾಮಸ್ಥರಿಗಾಗುವವ ತೊಂದರೆಯನ್ನು ತಪ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಅವರು, ಈ ಭಾಗದಲ್ಲಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂಬ ಆಶ್ವಾಸನೆ ನೀಡಿದರು.
ಮನವಿ ಸಲ್ಲಿಕೆಯಲ್ಲಿ ಅಳಕೋಡ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ್, ಸದಸ್ಯ ವಿನಾಯಕ ಅಂಬಿಗ, ಈಶ್ವರ ಗೌಡ, ಅಶೋಕ ಪಿಕಳೆ, ಹರಿಹರ ಅಂಬಿಗ, ವಿಮಲಾನಂದ ದೇಸಾಯಿ, ಮೈಕಲ್ ಫರ್ನಾಂಡಿಸ್, ಮಾಸ್ತಿ ಗೌಡ, ಗಜಾನನ ಗೌಡ, ಮಾಬ್ಲು ಗೌಡ, ಹುಲಿಯಾ ಗೌಡ, ಚಂದ್ರಕಾAತ ಮುಕ್ರಿ, ಗಜಾನನ ಅಂಬಿಗ ಮತ್ತು ಅಳಕೋಡ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ; ನಟರಾಜ ಗದ್ದೆಮನೆ ಕುಮಟಾ

error: