December 22, 2024

Bhavana Tv

Its Your Channel

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ; ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆದು ಮೌಲ್ಯಯುತ ಸಮಯ ಹಾಳು

ಕುಮಟಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಎಂಬ ಶೀರ್ಷಿಕೆಯಡಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆದು ಅವರೆಲ್ಲರ ಮೌಲ್ಯಯುತ ಸಮಯವನ್ನು ಹಾಳು ಮಾಡುವುದ್ಯಾಕೆ ಎಂದು ವಿವಿಧ ಇಲಾಖಾ ಅಧಿಕಾರಿಗಳು ಪ್ರಶ್ನಿಸಿದರು.

ತಾಲೂಕಾ ಪಂಚಾಯತ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಸರಕಾರದ ನಿಯಮಗಳ ಪ್ರಕಾರ ಕಂದಾಯ ಇಲಾಖೆಯ 25 ಯೋಜನೆಗಳು ಬರಲಿವೆ. ಇವೆಲ್ಲವನ್ನೂ ಪರಿಹರಿಸಲು ಕಂದಾಯ ಇಲಾಖೆಯೊಂದಿದ್ದರೆ ಸಾಕಾಗುತ್ತದೆ. ಉಳಿದ ಇಲಾಖೆಯ ಮೇಲೆ ಬರುವ ಬೆರಳೆಣಿಕೆಯ ಅಹವಾಲುಗಳನ್ನು ಕಂದಾಯ ಇಲಾಖೆಯೇ ಪಡೆದು ಇತರ ಇಲಾಖಾಗೆ ರವಾನಿಸಬಹುದಾಗಿದೆ. ಆದರೆ ಈ ರೀತಿ ಮಾಡದ ಜಿಲ್ಲಾಡಳಿತ ಎಲ್ಲಾ ಇಲಾಖಾ ಅಧಿಕಾರಿಗಳನ್ನೂ ಈ ಸಭೆಗೆ ಆಹ್ವಾನಿಸಲಾಗುತ್ತದೆ. ಆದರೆ ಈ ಸಭೆಯಲ್ಲಿ ಬಹುತೇಕ ಅಹವಾಲುಗಳು ಕಂದಾಯ ಇಲಾಖೆಯದ್ದೇ ಇರುತ್ತದೆ. ಕೆಲವೊಂದು ಇಲಾಖೆಯ ಅಹವಾಲುಗಳೇ ಇರುವುದಿಲ್ಲ. ಇನ್ನೂ ಕೆಲವು ಇಲಾಖೆಯದ್ದು ಬೆರಳಣಿಕೆಯ ಅಹವಾಲುಗಳಿರುತ್ತವೆ. ಆದಾಗ್ಯೂ ಕೂಡ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆದು ಕೂಡ್ರಿಸುವುದರಿಂದ ಅವರವರ ಇಲಾಖೆಯ ಒಂದು ದಿನದ ಕೆಲಸವು ನೆನೆಗುದಿಗೆ ಬೀಳಲು ಕಾರಣವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಸುದರ್ಶನ, ಹೆಸ್ಕಾಂ ಎಇಇ ರಾಜೇಶ ಮಡಿವಾಳ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಹಿಂದುಳಿದ ವರ್ಗದ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖಾ ಆಶ್ರಯದಲ್ಲಿ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಆರೋಗ್ಯದ ಕುರಿತು ಜಾಗೃತಿ ನಡೆಸುವಂತೆ ಪ್ರಭಾರೆ ತಾಲೂಕಾ ಕಾರ್ಯನಿರ್ವಹಣಾಧಿಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ. ನೋಡೆಲ್ ಅಧಿಕಾರಿ ಎನ್.ಜಿ.ನಾಯಕ ಅಧ್ಯಕ್ಷತೆವಹಿಸಿದ್ದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಕೃಷಿ ಅಧಿಕಾರಿ ರಶ್ಮಿ ಶಹಪುರಕರ್, ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಗಣೇಶ ಪಟಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ, ಡಿಪೋ ಮ್ಯಾನೇಜರ್ ಬಾನಾವಳಿಕರ್, ತೋಟಗಾರಿಕಾ ಇಲಾಖೆಯ ಹಾಲಪ್ಪ ಪಟಗಾರ ಹಾಗೂ ಇತರ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ

error: