ಕುಮಟಾ : ಪ್ರಸ್ತುತ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ಅಂಶಗಳು ಹಾಗೂ ಗಂಡ ಹೆಂಡತಿಯ ನಡುವೆ ಬಾಂಧವ್ಯದ ಕೊರತೆಯುಂಟುಮಾಡುವ ಅಂಶಗಳನ್ನು ಗಮನದಲ್ಲಿಟ್ಟು, ಚಿಂತನ ಮಂಥನ ಮಾಡುವ ಉದ್ದೇಶದಿಂದ ಸತ್ವಾಧಾರ ಫೌಂಡೇಶನ್ ವತಿಯಿಂದ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ನಡೆಸಲಾದ “ಸಾಗುತಿರಲಿ ಬಾಳ ಬಂಡಿ” ವಿನೂತನ ಕಾರ್ಯಕ್ರಮ ಜನಮೆಚ್ಚುಗೆ ಪಡೆಯುವ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವಲ್ಲಿಯೂ ಯಶಸ್ವಿಯಾಯಿತು.
ದಾಂಪತ್ಯದಲ್ಲಿ ಬಿರುಕುಮೂಡಿಸುವ ‘ಈಗೋ, ಸ್ವಪ್ರತಿಷ್ಟೆ ಹಾಗೂ ಅಪನಂಬುಗೆ’ ಅಂಶಗಳನ್ನು ಗುರ್ತಿಸಿದ ಬಲೂನುಗಳನ್ನು ಒಡೆಯುವ ಮೂಲಕ ಕಾರ್ಯಕ್ರಮವನ್ನು ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಎಲ್ಲವನ್ನೂ ಸಹಜವಾಗಿ ಒಪ್ಪಿಕೊಳ್ಳುವ ಗುಣವನ್ನು ಬೆಳೆಸುಕೊಳ್ಳಬೇಕು. ‘ಹೌದು ಮತ್ತು ಆಗಲಿ’ ಎಂಬ ಪದವನ್ನು ಬಳಸಿದರೆ ಜೀವನ ಸಾಂಗವಾಗಿ ನಡೆಯುತ್ತದೆ. ಇಂದಿನ ಯುವಜನತೆ ಪರಸ್ಪರ ಹೊಂದಿಕೊAಡು ಹೋಗುವ ಗುಣವನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನತೆಗೆ ಸಂದೇಶ ಕೊಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರವೀಂದ್ರ ಭಟ್ಟ ಸೂರಿಯವರ ಭಾವಾಂತರ0ಗ ಕೃತಿ ಲೋಕಾರ್ಪಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ಟ ನೆರವೇರಿಸಿ ಮಾತನಾಡಿ, ಅತ್ಯುತ್ತಮ ಶಿಕ್ಷಕನಾಗಿ ನಿರೂಪಕನಾಗಿ ರಾಜ್ಯದಾದ್ಯಂತ ಹೆಸರು ಮಾಡಿರುವ ಸೂರಿಯವರು, ಜೀವನದ ಎಲ್ಲಾ ಅಂಶಗಳಿಗೆ ಪ್ರಾಮುಖ್ಯತೆ ಕೊಟ್ಟು ವಿಶಾಲ ಅರ್ಥವನ್ನು ನೀಡುವಂತಹ ಮುಕ್ತಕಗಳನ್ನು ರಚಿಸಿದ್ದಾರೆ. ಪ್ರತಿಭಾವನೆಗಳಿಗೆ ಬೆಲೆ ಕೊಡುವಂತಹ ಈ ಮುಕ್ತಕಗಳು ಜೀವನಕ್ಕೆ ಹೊಸ ಅರ್ಥ ನೀಡುತ್ತದೆ ಎಂದು ಕೆಲವು ಮುಕ್ತಕಗಳನ್ನು ಉದಾಹರಣೆ ನೀಡಿ ಮಾತನಾಡಿದರು.
ಲೆಕ್ಕಪರಿಶೋಧಕ ವಿನಾಯಕ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸತ್ವಾಧಾರ ಫೌಂಡೇಶನ್ ಇಂತಹ ವಿನೋತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸಮಾಜಮುಖಿ ಚಿಂತನೆಗಳ ಮೂಲಕ ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು. ಪಿಎ??? ಸಂಪತ್ ಕುಮಾರ್ ಬದುಕು ಹೊಸತನಕ್ಕೆ ತೆರದುಕೊಳ್ಳಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು. ಉದ್ಯಮಿಗಳಾದ ವಸಂತ ರಾವ್ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಕುರಿತಾಗಿ ವಿವರಿಸಿದರು.
ಬಾಳ ಬಂಡಿ ಸಾಗುವಲ್ಲಿ ಯಾರು ಪ್ರಧಾನರು..? ಗಂಡನೋ..? ಹೆಂಡತಿಯೋ..? ಎಂಬ ಬಗ್ಗೆ ಎರಡು ತಂಡಗಳಲ್ಲಿ ಮಾತಿನ ಜಟಾಪಟಿ ನಡೆಯಿತು. ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ, ಸಾಹಿತಿ ತಿಗಣೇಶ ಮಾಗೋಡ ಹೆಂಡತಿಯೇ ಪ್ರಧಾನವೆಂದು ವಾದ ಮಂಡಿಸಿದರು. ಶಿಕ್ಷಕ ಸಾಹಿತಿ ಸಂದೀಪ ಭಟ್ಟ ಮೇಲನಗಂಟಿಗೆ, ಖ್ಯಾತ ಯಕ್ಷಗಾನ ಅರ್ಥದಾರಿ ಮಂಜುನಾಥ ಗಾವ್ಕರ್ ಬರ್ಗಿ, ಉಪನ್ಯಾಸಕ ಚಿದಾನಂದ ಭಂಡಾರಿ ಕಾಗಾಲ ಗಂಡನೇ ಪ್ರಧಾನ ಎಂದು ವಾದಿಸಿದರು. ಶಿಕ್ಷಕ ರವೀಂದ್ರ ಭಟ್ಟ ಸೂರಿ ಮಾತಿನ ಜಟಾಪಟಿಯ ನಿರ್ವಹಣೆ ಮಾಡಿದರು. ಸತ್ವಾಧಾರ ಫೌಂಡೇಶನ್ ನ ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯದೇವ ಬಳಗಂಡಿ ಕಾರ್ಯಕ್ರಮ ನಿರೂಪಿಸುವರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ