ದಾಂಡೇಲಿ: ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿರುವ ಹಾಗೂ ಹಾಗೂ ಗುಡ್ಡಗಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೊಂದು ಸೇರಿ ಈ ಎರಡು ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಗಳು ಆಗಲೇಬೇಕು. ಈ ವಿಚಾರವಾಗಿ ಪಕ್ಷಾತೀತವಾಗಿ ನಡೆಯುವ ಎಲ್ಲ ಹೋರಾಟಗಳ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇರುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ನೈಸರ್ಗಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಉತ್ತರ ಕನ್ನಡ ಜಿಲ್ಲೆ ಕಂದಾಯ ಇಲಾಖೆಯಲ್ಲಿ ಸದ್ಯಕ್ಕೆ ಅತಿ ಹೆಚ್ಚು ತೆರಿಗೆಯನ್ನು ನೀಡುವಂತಹ ಜಿಲ್ಲೆಯಾಗಿದೆ . ಇಲ್ಲಿಯ ಜಲಾಶಯ, ವಿದ್ಯುದಾಗರಗಳು, ಕೈಗಾ ಅಣುಸ್ಥಾವರ, ನೌಕಾನೆಲೆ ಸೇರಿದಂತೆ ಹಲವು ಯೋಜನೆಗಳಿಗಾಗಿ ತಮ್ಮ ಭೂಮಿ ಮತ್ತು ಬದುಕನ್ನೇ ತ್ಯಾಗ ಮಾಡಿರುವಂತಹ ಸಂತ್ರಸ್ಥರು ಇಲ್ಲಿದ್ದಾರೆ. ಹಲವು ಅರಣ್ಯ ಸಂರಕ್ಷಿತ ಪ್ರದೇಶಗಳು, ಹುಲಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗಾಗಿ ಈ ಜಿಲ್ಲೆ ಸಾಕಷ್ಟು ತ್ಯಾಗವನ್ನು ಮಾಡಿದೆ. ಆದರೆ ಈ ಜಿಲ್ಲೆಯಲ್ಲಿ ಮೂಲಭೂತವಾಗಿ ಇರಬೇಕಾಗಿದ್ದ ಆರೋಗ್ಯ ಮತ್ತು ಶಿಕ್ಷಣದ ಸವಲತ್ತುಗಳ ಸಮಸ್ಯೆ ಸಾಕಷ್ಟಿದೆ.
ಈ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ದೊಡ್ಡ ಶೈಕ್ಷಣಿಕ ತರಬೇತಿ ಸಂಸ್ಥೆಗಳಿಲ್ಲ. ಅದನ್ನ ಬಿಟ್ಟು ಬಿಡೋಣ. ಕನಿಷ್ಠಪಕ್ಷ ಇಲ್ಲಿಯ ಮನುಷ್ಯರ ಜೀವ ಉಳಿಸುವ ಎಲ್ಲ ಸೌಲಭ್ಯಗಳಿರುವ ಆಸ್ಪತ್ರೆಗಳು ಇಲ್ಲದಿರುವುದೇ ವಿಪರ್ಯಾಸ. ಸ್ವಾತಂತ್ರ‍್ಯ ಬಂದು ಎಪ್ಪತ್ತೈದು ವರ್ಷಗಳು ದಾಟಿ, ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವಂತಹ ಸಂದರ್ಭದಲ್ಲಿಯೂ ಕೂಡ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ ಎಂದು ಹೇಳಿಕೊಳ್ಳಲು ನಾಚಿಕೆ ಎನಿಸುತ್ತದೆ. ಇಲ್ಲಿಯವರೆಗೆ ಈ ಜಿಲ್ಲೆಯನ್ನು ಆಳಿದವರು, ಆಳುತ್ತಿರುವವರು ಅದು ಯಾರೇ ಇರಬಹುದು ಅವರು ಈಗಾಗಲೇ ಈ ಕೆಲಸಗಳನ್ನು ಮಾಡಬೇಕಿತ್ತು. ಜಿಲ್ಲೆಯ ಮತದಾರರ ದಿಂದ ಅಧಿಕಾರ ಅನುಭವಿಸಿದವರು ಈ ಜಿಲ್ಲೆಯ ಕೊರಗನ್ನು ನೀಗಿಸ ಬೇಕಿತ್ತು . ಆಳುವವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೂ ಈ ಕೆಲಸ ಆಗಿಲ್ಲ ಎನ್ನುವುದನ್ನು ನಾವು ಬಹಳ ನೋವು ಮತ್ತು ಎಚ್ಚರಿಕೆಯಿಂದಲೇ ಹೇಳಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವ ಕಾರಣಕ್ಕೆ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ . ಆರೋಗ್ಯ ಸಮಸ್ಯೆಯಾಗಿ ಜಿಲ್ಲಾಸ್ಪತ್ರೆ ಅಥವಾ ಸ್ಥಳೀಯವಾಗಿರುವ ಸಣ್ಣಪುಟ್ಟ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ನಗರಗಳ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಕಾರವಾರದವರು ಗೋವಾ ಕಡೆ ಮುಖಮಾಡಿದರೆ , ಇನ್ನು ಕರಾವಳಿಯ ಎಲ್ಲ ತಾಲ್ಲೂಕಿನವರು ಉಡುಪಿ, ಮಣಿಪಾಲ, ಮಂಗಳೂರು ಕಡೆ ಹೋಗಬೇಕಾಗುತ್ತದೆ. ದಾಂಡೇಲಿ, ಜೊಯಿಡಾ, ಹಳಿಯಾಳದವರು ಬೆಳಗಾವಿ, ಹುಬ್ಬಳ್ಳಿಯ ಕಡೆ ಪ್ರಯಾಣಿಸಿದರೆ, ಮುಂಡಗೋಡ ಯಲ್ಲಾಪುರ, ಶಿರಸಿಯವರು ಹುಬ್ಬಳ್ಳಿ ಕಡೆ ದಾಖಲಾಗುತ್ತಾರೆ. ಇನ್ನೂ ಸಿದ್ದಾಪುರದವರು ಹತ್ತಿರವಾಗಿರುವ ಶಿವಮೊಗ್ಗ ಕಡೆ ಮುಖ ಮಾಡುತ್ತಾರೆ. ನಮ್ಮ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯವಿಲ್ಲದೆ ಇರುವ ಕಾರಣಕ್ಕಾಗಿಯೇ ನಾವು ಬೇರೆ ಜಿಲ್ಲೆಗಳತ್ತ ಸಾಗಬೇಕಾಗಿದೆ. ಇದು ನಿಜಕ್ಕೂ ಇಲ್ಲಿಯವರೆಗೂ ಆಳಿದವರಿಗೆಲ್ಲರಿಗೂ ಅವಮಾನದ ಸಂಗತಿಯೇ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಭರವಸೆಯ ಮಾತು ಕೇಳಿ ಬಂದಿತ್ತಾದರೂ ಅದು ಯಾಕೋ ಫಲಪ್ರದವಾಗಲಿಲ್ಲ. ಮೊನ್ನೆ ಶಿರೂರಿನಲ್ಲಿ ನಡೆದ ಅಪಘಾತದಿಂದ ಎಚ್ಚೆತ್ತುಕೊಂಡಿರುವ ಈ ಜಿಲ್ಲೆಯ ಪ್ರಜ್ಞಾವಂತ ಜನ ಮತ್ತೆ ಭೌತಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಸಗಿ ಹೋರಾಟಕ್ಕಿಳಿದಿದ್ದಾರೆ. ಇದು ಸಕಾಲಿಕವಾದ ಹಾಗೂ ಆಗಲೇಬೇಕಾದ ಹೋರಾಟ ಕೂಡ. ಹಾಗಾಗಿ ಈ ನೆಲದ ಜನರ ಬದುಕಿಗಾಗಿ, ಜೀವ ಉಳಿಸುವುದಕ್ಕಾಗಿ ನಡೆಯುವ ಪಕ್ಷಾತೀತವಾದ ಹೋರಾಟವನ್ನು ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ಬೆಂಬಲಿಸುತ್ತದೆ . ಜೊತೆಗೆ ಅವಶ್ಯವಿದ್ದಾಗ ಹೋರಾಟದಲ್ಲಿ ನೇರವಾಗಿಯೂ ಪಾಲ್ಗೊಳ್ಳುತ್ತೇವೆ.
ಪ್ರಭಲವಾದ ಈ ಹೋರಾಟದ ಧ್ವನಿಗೆ ಈ ಜಿಲ್ಲೆಯ ಶಾಸಕರು, ಸಂಸದರು , ಸಚಿವರು, ವಿಧಾನಪರಿಷತ್ ಸದಸ್ಯರು ಸಚಿವರು ಹಾಗೂ ಉಳಿದ ಎಲ್ಲ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ಜನರ ನ್ಯಾಯಯುತವಾದ ಕೂಗಿಗೆ ಸ್ಪಂದಿಸಬೇಕು. ಜೊತೆಗೆ ತಮ್ಮ ರಾಜಕೀಯ ಭೇದಗಳನ್ನು ಮರೆತು ಪಕ್ಷಾತೀತವಾಗಿ ಪ್ರಯತ್ನಿಸಿ ಈ ಜಿಲ್ಲೆಗೆರಡು (ಘಟ್ಟದ ಮೇಲೊಂದು, ಕರಾವಳಿಯಲ್ಲೊಂದು) ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ತಂದುಕೊಡುವಲ್ಲಿ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಲೇಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ, ಗೌರವ ಕಾರ್ಯದರ್ಶಿಗಳಾದ ಪಿ.ಆರ್. ನಾಯ್ಕ್, ಜಾರ್ಜ್ ಫರ್ನಾಂಡಿಸ್ , ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಹಾಗೂ ಎಲ್ಲ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
More Stories
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್.ಡಿ. ಹೆಗಡೆ, ಆಲ್ಮನೆ ಆಯ್ಕೆ
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ