April 27, 2024

Bhavana Tv

Its Your Channel

ಮನಕೆ ಮುದ ನೀಡಿದ ಸುಶ್ರಾವ್ಯ ಸಂಜೆ

ಬೆoಗಳೂರು: ಸಪ್ತಕ ಸಂಸ್ಥೆ ವತಿಯಿಂದ ಮಲ್ಲೇಶ್ವರದ ಹವ್ಯಕ ಸಭಾ ಭವನದಲ್ಲಿ ಭಾನುವಾರ ನಡೆದ ಸಂಗೀತ ಕಾರ್ಯಕ್ರಮ, ಪತ್ರಕರ್ತರಿಗೆ ಸನ್ಮಾನ, ಯಕ್ಷಗಾನ ತಾಳಮದ್ದಳೆ ಕಿಕ್ಕಿರಿದು ನೆರೆದಿದ್ದ ವಿಭಿನ್ನ ಮನೋಧರ್ಮದ ವಿಶೇಷ ಆಸಕ್ತಿಯ ಸಭಿಕರನ್ನು ನಾಲ್ಕು ತಾಸುಗಳ ಸುದೀರ್ಘ ಕಾಲ ಸೆರೆಹಿಡಿದಿಡುವಲ್ಲಿ ಅತ್ಯಂತ ಯಶಸ್ವಿಯಾಯಿತು.
ಪ್ರಾರಂಭದಲ್ಲಿ ಯುವ ಗಾಯಕ ಧನಂಜಯ ಹೆಗಡೆ ರಾಗ ಭಿಮಾಪಲಾಸ್ ದಲ್ಲಿ ಹಿರಿಯ ,ಹಳೆಯ ವಾಗ್ಗೇಯಕಾರರಾದ
ಪಂ. ರಾಮಾಶ್ರಯ ಝಾ ಅವರ ಕೃತಿ “ಮಂದರ್ ಕಬ್ ಆವೆ” ….. ಚೀಜನ್ನು ರೂಪಕ ತಾಳದಲ್ಲಿ ಹಾಡಿ ನಂತರ ಧೃತ್
ತೀನತಾಲದಲ್ಲಿ “ಲಗನ್ ಲಾಗಿ ಉನ್ ಹಿ ಸೋಹೆ”… ಬಂದಿಷನ್ನು ಅತ್ಯಂತ ಪ್ರಭುಧ್ಧತೆ ಯಿಂದ ಪ್ರಸ್ತುತ ಪಡಿಸಿ “ಎನ್ನ ಪಾಲಿಸೋ ಕರುಣಾಕರಾ” ಭಜನೆಯನ್ನು ಸುಮಧುರವಾಗಿ ಹಾಡಿದರು. ಗುರುಮೂರ್ತಿ ವೈದ್ಯ ತಬಲಾದಲ್ಲಿಯು ಮಧುಸೂಧನ ಭಟ್ಟ ಅವರು ಹಾರ್ಮೋನಿಯಂನಲ್ಲಿಯೂ ಸಮರ್ಥವಾಗಿ ಸಾಥ್ ನೀಡಿದರು.
ಪ್ರಖ್ಯಾತ ಹೃದಯ ರೋಗ ತಜ್ಞ ಡಾಕ್ಟರ್ ದಿವಾಕರ ಭಟ್ಟ ಅವರು ಎಲ್ಲಾ ಕಲಾವಿದರನ್ನ ಪುಸ್ತಕ ಹಾಗೂ ಹೂ ಗಿಡ ನೀಡಿ ಗೌರವಿಸಿದರು.
ನಂತರ “ಸಪ್ತಕ” ದ ಪರವಾಗಿ ಹಿರಿಯ ಪತ್ರಕರ್ತರು, ಸಾಹಿತಿಗಳೂ ಆದ ಲಕ್ಷ್ಮಿನಾರಾಯಣ ಶಾಸ್ತ್ರಿ, ಬೆಳಗಾವಿ ಹಾಗೂ ವಿಶ್ವ ವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟ ಅವರನ್ನು ಖ್ಯಾತ ಪತ್ರಕರ್ತ ಎಂ ಕೆ ಭಾಸ್ಕರ ರಾವ್ ಅವರು ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರಿಸಿದ ಎಲ್. ಎಸ್. ಶಾಸ್ತ್ರಿ ಅವರು ಸಪ್ತಕ ಕುಟುಂಬ ನನ್ನ ಬಂಧುಗಳ ಕುಟುಂಬವೂ ಹೌದು, ಹಾಗೇ ಹುಟ್ಟು ಪ್ರತಿಭೆ ಧನಂಜಯನನ್ನು ಏಳವೇ ಯಿಂದಲೇ ನೋಡಿ ಪ್ರೋತ್ಸಾಹಿಸುತ್ತಾ ಬಂದಿದ್ದೇನೆ, ನನಗೆ ಇದೊಂದು ಆತ್ಮೀಯ ಸನ್ಮಾನ ಎಂದರು.
ವಿಶ್ವೇಶ್ವರ ಭಟ್ಟರು, ಸಪ್ತಕ ದ ಜಿ ಎಸ್ ಹೆಗಡೆ ಅವರನ್ನ ಸುಮಾರು ಇಪ್ಪತ್ತು ವರ್ಷಗಳಿಂದ ಬಲ್ಲೆ, ಅವರ ಇಡೀ ಕುಟುಂಬ ಬೆಂಗಳೂರು ನಗರದ ಸಾಂಸ್ಕೃತಿಕ ಜೀವಂತಿಕೆಯನ್ನ ಎತ್ತಿ ಹಿಡಿಯಲು ಮಾಡುತ್ತಾ ಇರುವ ಕಾರ್ಯ ಶ್ಲಾಘನೀಯ, ನಗರ ಎಂದರೆ ಸಿಮೆಂಟ್ ಕಟ್ಟಡ, ಕಾಂಕ್ರೀಟ್ ರಸ್ತೆ, ಬಣ್ಣಬಣ್ಣದ ಕಲ್ಲಿನ ಫುಟ್ ಪಾತ್ ಇಷ್ಟೇ ಅಲ್ಲ, ಅದಕ್ಕೊಂದು ಸುಸಂಸ್ಕೃತ ಆತ್ಮ ಇರುತ್ತದೆ, ಅದರ ಸೊಬಗು ಸವಿಯಲು, ಹೆಚ್ಚಿಸಲು “ಸಪ್ತಕ” ದಂತಹ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಕೆ. ಭಾಸ್ಕರ ರಾವ್ ಅವರು ಇಬ್ಬರು ಪತ್ರಕರ್ತರನ್ನು ಸನ್ಮಾನಿಸಿ , ಗೌರವಿಸಿ ಪತ್ರಿಕೋದ್ಯಮದಲ್ಲಿ ಎಲ್. ಎಸ್. ಶಾಸ್ತ್ರಿ ಅಂತಹ ಹಿರಿಯ ಪತ್ರಕರ್ತರು, ಸಂಸ್ಕೃತಿಯ ಪ್ರತಿಪಾದಕರು ಇಂದು ತನಗೆ ಪರಿಚಯ ಆದದ್ದು ಸಂತೋಷ ಹಾಗೂ ಉಳಿದೆಲ್ಲ ಪತ್ರಿಕೆಗಳು ಕಾರ್ಪೊರೇಟ್ ಸಂಸ್ಥೆಗಳ ಅಧೀನದಲ್ಲಿದ್ದರೆ “ವಿಶ್ವ ವಾಣಿ” ಪತ್ರಿಕೆ ಮಾತ್ರ ಭಟ್ಟರ ಮಾಲೀಕತ್ವದಲ್ಲಿ ಇದ್ದು ಅದನ್ನ ಸಮರ್ಥವಾಗಿ ನಡೆಸುತ್ತಿರುವ ವಿಶ್ವೇಶ್ವರ ಭಟ್ಟರ ಅಸಾಮಾನ್ಯ ಸಾಮರ್ಥ್ಯಕ್ಕಾಗಿ ಅಭಿನಂದನಾರ್ಹರು ಎಂದರು.
ಸಪ್ತಕ ದಂತಹ ಸಾಂಸ್ಕೃತಿಕ ಸಂಸ್ಥೆ, ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಿದ್ದು ಒಂದು ವಿಶೇಷ ವಿಷಯವೇ ಹೌದು ಎಂದರು. ಕೊನೆಯದಾಗಿ “ಸುಧನ್ವ ಮೋಕ್ಷ” ತಾಳಮದ್ದಳೆ ಅತ್ಯಂತ ಆಕರ್ಷಕವಾಗಿ ಮೂಡಿ ಬಂತು.
ಅನAತ ದಂತಲಿಗೆ ಅವರ ಸಂಪ್ರದಾಯ ಬದ್ಧ ಸುಸ್ವರ ಭಾಗವತಿಕೆಯ ತಾಳಕ್ಕೆ, ಫಾಟಕ್ ಅವರ ಚುರುಕಿನ ಚಮತ್ಕಾರಿಕ ಮದ್ದಳೆಯ ಪೆಟ್ಟು, ನಾರಾಯಣ ಯಾಜಿ ಅವರ ಸುಧನ್ವನ ವೀರೋಚಿತ, ಸಂದರ್ಭೋಚಿತ ನುಡಿ, ದಿವಾಕರ ಕೆರೆಹೊಂಡ ಅವರ ಸ್ತ್ರೀ ಸಹಜವಾದ ಮನೋ ಕಾಮನೆಯನ್ನ ಸುಧನ್ವನಲ್ಲಿ ಇಟ್ಟು ಇಡೇರಿಸಿಕೊಂಡ ಮಾತಿನ ಚತುರತೆ, ಮೋಹನ ಹೆಗಡೆಯವರ ಅರ್ಜುನನ ಅದ್ಭುತ ವ್ಯಕ್ತಿತ್ವದ ಪಾತ್ರ ಚಿತ್ರಣ, ಕೆರೆಮನೆ ಶಿವಾನಂದ ಹೆಗಡೆ ಅವರು ಯುದ್ಧೋನ್ಮಾದದಲ್ಲಿ ಇರುವ ಸುಧನ್ವ ಅರ್ಜುನರನ್ನು ಸಮಾಧಾನಿಸಿ ಯಾಕಾಗಿ ಈ ಪ್ರಸಂಗ ಉದ್ಭವಿಸಿತು ಎಂದು ತಿಳಿಸಿದ ಪರಿ ಎಲ್ಲವೂ ನಿಜಕ್ಕೂ ಪ್ರೇಕ್ಷಕರನ್ನು ಮೋಡಿ ಮಾಡಿ ರಂಜಿಸಿತು. ಹಿರಿಯ ಸಾಹಿತ್ಯ ಪ್ರೇಮಿ,ಪರಿಚಾರಕರಾದ ನಾರಾಯಣ ಶ್ಯಾನುಭಾಗರು ಎಲ್ಲ ಕಲಾವಿದರನ್ನು ಸನ್ಮಾನಿಸಿದರು.

ಒಂದೇ ವೇದಿಕೆಯಲ್ಲಿ ಹಲವು ಬಗೆಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಕ್ಲುಪ್ತ ಸಮಯದಲ್ಲಿ ಎಲ್ಲವನ್ನೂ ನಿರೂಪಿಸಿ, ನಿರ್ವಹಿಸಿದ ಸಪ್ತಕದ ರೂವಾರಿ ಜಿ ಎಸ್ ಹೆಗಡೆ ಅವರನ್ನು ಎಲ್ಲರೂ ಮುಕ್ತ ಕಂಠದಿAದ ಹೊಗಳಿದರು. ಧನಂಜಯ ಹೆಗಡೆಯವರು ವಂದನಾರ್ಪಣೆ ಮಾಡಿದರು.

error: