April 28, 2024

Bhavana Tv

Its Your Channel

ಕನ್ನಡ ಶಾಲೆಗಳ ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲು ಹತ್ತಲು ಸಿದ್ಧ: ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು:ಕನ್ನಡ ಶಾಲೆಗಳನ್ನು ಉಳಿಸಿ ಕನ್ನಡ ಭಾಷೆಯುನ್ನು ಬೆಳೆಸಬೇಕು ಎನ್ನುವ ಮೂಲ ಧ್ಯೇಯವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಸಬೂಬು ಹೇಳಿ ಕನ್ನಡ ಶಾಲೆಗಳನ್ನು ಮುಚ್ಚುವದನ್ನು ಸಹಿಸುವುದಿಲ್ಲ. ಸರಕಾರ ಕನ್ನಡ ಶಾಲೆಗಳ ಅಸಡ್ಡೆ ತೋರುವುದು ಆಗಾಗ ಕಂಡು ಬರುತ್ತಿದ್ದು ಈ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿ ಇರುವ 1945ರಲ್ಲಿ ಆರಂಭವಾದ ಸರಕಾರಿ ಪ್ರೌಢಶಾಲೆಯನ್ನು ಶಿಕ್ಷಣ ಇಲಾಖೆಯ ತಕರಾರಿನ ಮಧ್ಯವೂ ಜಿಲ್ಲಾಡಳಿತ ಮುಚ್ಚಲು ಹೊರಟಿರುವುದು ಅಕ್ಷಮ್ಯ. ಸ್ವತಂತ್ರ ಪೂರ್ವದ ಶಾಲೆಯನ್ನು ಕಟ್ದಡದ ಸಮೇತ ಮಾರಾಟಮಾಡಿ ಬೇರೆಯವರ ಪರಭಾರೆ ಮಾಡಿದ್ದನ್ನು ಯಾವೊಬ್ಬ ಕನ್ನಡಿಗನು ಸಹಿಸಲು ಸಾಧ್ಯವಿಲ್ಲ. ಬಹುಕೋಟಿ ಮೌಲ್ಯದ ಚಿಕ್ಕಪೇಟೆ ಸರಕಾರಿ ಪ್ರೌಢಶಾಲೆ ಇರುವ ಜಾಗ ಸರಕಾರಕ್ಕೆ ಕನ್ನಡ ಶಾಲೆ ನಡೆಸಲು ದಾನಿಗಳು ನೀಡಿದ್ದು. ಪ್ರಸಕ್ತ ಜಾಗವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಮಾರಾಟ ಮಾಡುವಂತೆ ಅಥವಾ ಹರಾಜು ಮಾಡುವಂತೆ ಪತ್ರ ಬರೆದಿದ್ದಾರೆ ಎನ್ನುವ ವರದಿ ಕನ್ನಡಿಗರಿಗೆ ಆತಂಕ ಉಂಟುಮಾಡಿದೆ.
ಬೆಂಗಳೂರು ನಗರ ಜಿಲ್ಲಾಡಳಿತ ಈ ಅಸಂಬದ್ಧ ಕ್ರಮವನ್ನು ವಿರೋಧಿಸುವುದರ ಜೊತೆಗೆ ಕನ್ನಡ ಶಾಲೆಗಳ ಉಳಿವಿಗೆ ಸರಕಾರ ಮುತುವರ್ಜಿವಹಿಸುವ ಅವಶ್ಯಕತೆ ಇದೆ. ತಕ್ಷಣದಲ್ಲಿ ಸರಕಾರ ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರು ಶಾಲೆ ಇರುವ ಜಾಗದ ಮೌಲ್ಯಮಾಪನ ಮಾಡಿರುವ ಬಗ್ಗೆ ವರದಿ ಬಿತ್ತರವಾಗುತ್ತಿದೆ. 77 ವರ್ಷ ಪುರಾತನ ಶಾಲೆಯ ಮೇಲೆ ಜಿಲ್ಲಾಡಳಿತದ ಗಧಾ ಪ್ರಹಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಗುಡುಗಿದ್ದಾರೆ.
ಶಿಥಿಲಾವಸ್ಥೆಯಲ್ಲಿ ಇದ್ದ ಶಾಲೆಗೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದ ಸರಕಾರ ಇದ್ದ ಶಾಲೆ ಹಾಗೂ ಅದಕ್ಕೆ ಸಂಬAಧ ಪಟ್ಟ ಆಸ್ತಿಯನ್ನು ಉಳಿಸಿಕೊಳ್ಳುವ ಬದಲು ಮಾರಾಟ ಮಾಡಲು ಹೊರಟಿರುವುದು ಯಾವ ಪುರುಷಾರ್ಥಮಾಡಲು ಹೊರಟಿದ್ದಾರೆ ಎಂದು ಮಹೇಶ ಜೋಶಿ ಪ್ರಶ್ನಿಸಿದ್ದಾರೆ.
1879ರಲ್ಲಿ ಖಾಸಗಿ ಸಂಸ್ಥೆಯವರು ಸರಕಾರಕ್ಕೆ ಮನವಿ ಸಲ್ಲಿಸಿ ಶಾಲೆಯ ಕಟ್ಟಡವನ್ನು ದುರುಸ್ತಿ ಮಾಡುವಂತೆ ಮನವಿ ಮಾಡಿತ್ತು. ಅದಕ್ಕೆ ಕಾರಣ ಶಾಲೆಯ ಕೆಲವು ಭಾಗವನ್ನು ಬಾಡಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಆ ಮೂಲಕ ಪ್ರತಿ ತಿಂಗಳಿಗೆ 16350 ರೂ ಪ್ರಕಾರ ಕಳೆದ 20 ವರ್ಷಗಳಿಂದ ಬಾಡಿಗೆ ವಸೂಲು ಮಾಡಲಾಗಿದೆ ಎನ್ನಲಾಗುತ್ತಿದೆ. ಸರಕಾರಕ್ಕೆ ಕನ್ನಡ ಶಾಲೆಗಿಂತ ಹೆಚ್ಚಾಗಿ ಆ ಜಾಗದಿಂದ ಆದಾಯ ಮುಖ್ಯವೇ..? ಎನ್ನುವ ಪ್ರಶ್ನೆ ಪತ್ರಿಯೊಬ್ಬ ಸ್ವಾಭಿಮಾನಿ ಕನ್ನಡಿಗನಿಗೂ ಏಳದೆ ಇರಲಾರದು ಎಂದಿದ್ದಾರೆ.
ಕನ್ನಡ ಶಾಲೆಗಳ ಉಳಿಸಿ- ಕನ್ನಡ ಬೆಳೆಸಿ ಎನ್ನುವ ಧ್ಯೇಯವಾಕ್ಯದೊಂದಿಗೆ ನಾಡಿನ ಹಿರಿಯ ಸಾಹಿತಿ ನಾಡೋಜ ಡಾ. ಎಸ್.ಎಲ್.ಬೈರಪ್ಪ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಪ್ರಮುಖ ಶಿಕ್ಷಣ ತಜ್ಞರು, ಸಾಹಿತಿಗಳು, ಮಠಾಧೀಶರು ಸೇರಿದ0ತೆ ಪ್ರಮುಖರ ದುಂಡು ಮೇಜಿನ ಸಭೆಯನ್ನು ನಡೆಸಲಾಗಿತ್ತು. ಕನ್ನಡ ಶಾಲೆ ಉಳಿಸಿ ಬೆಳಸಲು ಕೆಲವು ಪ್ರಮುಖ ಮಾರ್ಗದರ್ಶನವನ್ನು ಸರಕಾರಕ್ಕೆ ನೀಡಿತ್ತು. ಕನ್ನಡ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ ಅದಕ್ಕೆ ಶಾಲೆಗಳನ್ನು ಮುಚ್ಚುವ ಅನಿರ್ವಾಯತೆ ಇದೆ ಎಂದು ಹೇಳಿ ಕೊಳ್ಳುತ್ತಿರುವ ಸರಕಾರ ಹಾಗೂ ಶಿಕ್ಷಣ ಇಲಾಖೆ ಈಗ ಹೊಸದೊಂದು ವರಾತ ತೆಗೆದು ಕನ್ನಡ ಶಾಲೆಗಳಿಗೆ ಇತಿಶ್ರೀ ಹಾಡಲು ಮುಂದಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚುವದನ್ನು ಸಹಿಸುವುದಿಲ್ಲ. ಪ್ರಸ್ತುತ ಚಿಕ್ಕಪೇಟೆಯಲ್ಲಿ ಇರುವ ಸರಕಾರಿ ಪ್ರೌಢಶಾಲೆ ಉಳಿಸಿಕೊಳ್ಳುವ ಅವಶ್ಯಕತೆ ಜೊತೆ ನಾಡಿನಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವ ಹುಚ್ಚು ಪ್ರಯತ್ನಕ್ಕೆ ಸರಕಾರ ಮುಂದಾಗಬಾರದು. ತಕ್ಷಣದಲ್ಲಿ ಬೆಂಗಳೂರು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
ಈಗಾಗಲೇ ಚಿಕ್ಕಪೇಟೆಯ ಸರಕಾರಿ ಪ್ರೌಢಶಾಲೆಯನ್ನು ಮುಚ್ಚಲು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಜೀರ್ಣವಾಗಿದ್ದ ಕಟ್ಟಡವನ್ನು ಹೊಸದಾಗಿ ಕಟ್ಟಿ ಪೂರ್ತಿಕಟ್ಟಡವನ್ನು ಶಾಲೆ ನಡೆಸುವುದಕ್ಕೆ ನೀಡಬೇಕು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸರಕಾರ ಹಾಗೂ ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಲಿದೆ. ಒಂದು ವೇಳೆ ಅವಶ್ಯ ಬಿದ್ದರೆ ಕನ್ನಡ ಶಾಲೆಗಳ ಉಳಿವಿಗಾಗಿ ನಿವೃತ್ತ ನ್ಯಾಯಾಧೀಶರ ಸಲಹೆ ಪಡೆದು ಕಾನೂನು ಹೋರಾಟ ನಡೆಸಲಿದೆ. ಕನ್ನಡ ಉಳಿಸಿ ಬೆಳೆಸಬೇಕಾದರೆ ಕನ್ನಡ ಶಾಲೆಗಳ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಸಿದ್ದಾರೆ.

error: