April 26, 2024

Bhavana Tv

Its Your Channel

ನುಡಿದಂತೆ ನಡೆಯಲು ಸಾರಿದ “ರುಕ್ಮಾಂಗದ ಮೋಹಿನಿ”

“ಕರ್ನಾಟಕ ಕ್ರಾಂತಿರAಗ” ಹೊನ್ನಾವರ ಘಟಕ ಮತ್ತು “ಯಕ್ಷರಂಗ” ಮಾಸ ಪತ್ರಿಕೆ ಹಳದೀಪುರ ಇವುಗಳ ಸಂಯುಕ್ತಾಶ್ರಯದಲ್ಲಿ “ನಮ್ಮನೆ” ಫಾರೆಸ್ಟ್ ಕಾಲೊನಿ, ಪ್ರಭಾತ ನಗರ, ಹೊನ್ನಾವರದಲ್ಲಿ, ಇಪ್ಪತ್ತನೆಯ ತಾಳಮದ್ದಳೆ ಕಾರ್ಯಕ್ರಮ ಹಲಸಿನಹಳ್ಳಿ ನರಸಿಂಹ ಶಾಸ್ತಿç ವಿರಚಿತ ರುಕ್ಮಾಂಗದ ಮೋಹಿನಿ ನೆರೆದ ಸಭಿಕರಿಗೆ ನುಡಿದಂತೆ ನಡೆಯುವ ಮಹತ್ವವನ್ನು ಸಾರಿ ತಿಳಿಸಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಡಂಬಾರಿ ಕಾವ್ಯನಾಮದ ಪ್ರಸಿದ್ಧ ಚುಟುಕು ಸಾಹಿತಿ ಮಾನ್ಯ ವಿ..ಗ.ಭಂಡಾರಿಯವರಿಗೆ ಮತ್ತು ಮಾನ್ಯ ಲಯನ್ ಮಂಜುನಾಥ ದೇವಡಿಗ ಭಟ್ಕಳ ಇವರಿಗೆ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಮರ್ಥ ಭಾಗವತರಾದ ಗಣೇಶ ಯಾಜಿ, ಇಡಗುಂಜಿ, ಮತ್ತು ಸುಬ್ರಹ್ಮಣ್ಯ ಭಟ್ ಮೇಲಿನಗಂಟಿಗೆ ಸದ್ಯ ಕಿತ್ರೆ ನಿವಾಸಿ ಇವರ ನಿಸ್ಪçಹ ಕಲಾ ಸೇವೆ ಮರೆಯಲಾಗದ್ದು. ಇವರೆಲ್ಲರೂ ಸುಶ್ರಾವ್ಯವಾಗಿ ಪ್ರಸಂಗದ ಪದಗಳನ್ನು ಹೇಳಿ ಅರ್ಥಧಾರಿಗಳಿಗೆ ಉತ್ತೇಜನ ನೀಡಿದರು. ನಮ್ಮ ಸಂಘಟನೆಯ ಈವರೆಗಿನ ಎಲ್ಲ ತಾಳಮದ್ದಳೆಗಳ ಯಶಸ್ಸಿಗೆ ಕಾರಣರಾದ ಶ್ರೀಪಾದ ಭಟ್ಟ ಕಡತೋಕಾ ಮತ್ತು ಕುಮಾರ ಗುರುಮೂರ್ತಿ ಭಟ್ಟ, ಬೆಂಗಳೂರು ಇವರ ಶೃತಿ ಲಯ ಮತ್ತು ನಾದಬದ್ಧವಾದ ಮದ್ದಳೆಗಾರಿಕೆ ನಾದ ಬಿಂದು ಕಲೆಗಳಿಂದಲೇ ಹೊಸ ಹೊಸ ಹುಟ್ಟುಗಳು ಸಾಧ್ಯವಾಗುತ್ತವೆ ಎಂಬುದನ್ನು ನೆರೆದ ಪ್ರೇಕ್ಷಕ ಮಹನೀಯರಿಗೆ ಮನವರಿಕೆ ಮಾಡಿಕೊಡುತ್ತಿದ್ದವು.

ಮೋಹಿನಿಯ ಪ್ರವೇಶದಿಂದ ಪ್ರಸಂಗ ಪ್ರಾರಂಭವಾಯಿತು. ರುಕ್ಮಾಂಗದನ ನಿಷ್ಠೆಯನ್ನು ಪರೀಕ್ಷಿಸಲಿಕ್ಕಾಗಿ ಬ್ರಹ್ಮನಿಂದ ಸೃಷ್ಟಿಯಾಗಿ ಬಂದ ಮೋಹಿನಿಯ ಹುಟ್ಟಿನ ಉದ್ದೇಶ ಮತ್ತು ಕರ್ತವ್ಯ ಮರೆಸುವ ಭೂಮಿಯಲ್ಲಿಯ ವ್ಯವಸ್ಥೆಯನ್ನು ಮೋಹಿನಿಯಾಗಿ ಡಾ. ಎಸ್.ಡಿ.ಹೆಗಡೆ ತಿಳಿಸಿದರು. ರುಕ್ಮಾಂಗದನ ಪಾತ್ರಧಾರಿ ರಂಗಯ್ಯ ಹೆಬ್ಬಾರ ಹೊಸಾಡು ಇವರು ಏಕಾದಶಿ ವ್ರತದ ಆಚರಣೆಯ ಆದಿಭೌತಿಕ, ಆಧ್ಯಾತ್ಮಿಕ ಮತ್ತು ಆದಿದೈವಿಕಗಳ ಮಹತ್ವ ತಿಳಿಸಿದರು. ಮೋಹಿನಿ ಮತ್ತು ರುಕ್ಮಾಂಗದರ ನಡುವೆ ನಡೆದ ಸಂವಾದದಲ್ಲಿ ಭಗೀರಥ, ಮಾಂಧಾತ, ಸಗರ ಮುಂತಾದ ಪುರಾಣ ಪುರುಷರ ವಿಚಾರಗಳು ಮನೋಜ್ಞವಾಗಿ ಮೂಡಿಬಂದವು. ವ್ರತಾಚರಣೆಗಿಂತಲೂ ನುಡಿದಂತೆ ನಡೆಯುವುದು ಅತಿ ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟಾಗುವಂತೆ ವಿಶ್ಲೇಷಿಸಿ, ಮಗನ ಶಿರ ಕತ್ತರಿಸಲು ಸಿದ್ಧನಾದ ರುಕ್ಮಾಂಗದನ ಸಂದಿಗ್ಧ ಪರಿಸ್ಥಿತಿಯ ಆವರಣ ಸಹಜವಾಗಿ ನಿರ್ಮಾಣವಾದ ಬಗೆ ವಿಶೇಷತೆಯಿಂದ ಕೂಡಿತ್ತು. ಅನುಭವಿಗಳು ಮತ್ತು ಅಧ್ಯಯನ ಶೀಲರೂ ಆಗಿರುವ ಸಂಧ್ಯಾವಳಿಯ ಪಾತ್ರಧಾರಿ ಜನಾರ್ದನ ಶೆಟ್ಟಿ ಗಾಣಗೇರಿ ಇವರು ಪತಿವ್ರತಾ ದರ್ಮದ ಮಹತ್ವ, ದಾಂಪತ್ಯ ಜೀವನದ ಹೊಂದಾಣಿಕೆ ಮತ್ತು ಸಾಮರಸ್ಯವಿಲ್ಲದ ದಾಂಪತ್ಯದಲ್ಲಿ ಉಂಟಾಗಬಹುದಾದ ಅನಾಹುತ ದುರಂತಗಳನ್ನು ಮನೋಜ್ಞವಾಗಿ ತಿಳಿಸಿದರು. ಧರ್ಮಾಂಗದನ ಅರ್ಥಧಾರಿ ಗಣೇಶ ಹೆಗಡೆ ಬಿ.ಎಸ್.ಎನ್.ಎಲ್. ಪ್ರಾಣಕ್ಕಿಂತ ಮಾನ ಮುಖ್ಯವಾದದ್ದು. ಅದರಲ್ಲೂ ವಚನ ಪಾಲನೆ ಅತಿಮುಖ್ಯ ಎಂದರಲ್ಲದೆ ವಚನ ಭೃಷ್ಠರ ಸುತನಾಗಿ ಬದುಕಿರುವುಸು ಸರಿಯಲ್ಲ ಎಂಬುದನ್ನು ಸಮರ್ಥವಾಗಿ ತಿಳಿಸಿದರು. ಪರಮಾತ್ಮ ಅಂದರೆ ವಿಷ್ಣುವಿನ ಅರ್ಥಧಾರಿ ಶ್ರೀಪಾದ ಭಟ್ಟ ಹಡಿನಬಾಳ ಮೂರು ವಿಧದ ಮನುಷ್ಯರ ರೀತಿಗಳನ್ನು ತಿಳಿಸಿ ನುಡಿದಂತೆ ನಡೆದ ರುಕ್ಮಾಂಗದನ ಸಾಹಸ ಮತ್ತು ನಿಷ್ಠೆಯನ್ನು ಯಥೋಚಿತವಾಗಿ ತಿಳಿಸಿದರು. ಇಷ್ಟಕ್ಕೆಲ್ಲ ಕಾರಣಳಾದ ಮೋಹಿನಿ ಭೂಮಿಗೆ ಬಂದ ಉದ್ದೇಶವನ್ನು ಹೇಳಿ, ಈ ಕಾರ್ತೀಕ ಶುದ್ಧ ಏಕಾದಶಿ ‘ಮೋಹಿನಿ ಏಕಾದಶಿ’ ಎಂದು ಪ್ರಸಿದ್ಧವಾಗಲಿ ಎಂದು ಹರಸಿದಲ್ಲಿಗೆ ಪ್ರಸಂಗ ಮುಕ್ತಾಯವಾಯಿತು.

ತಾಳಮದ್ದಳೆಯ ಮಧ್ಯದಲ್ಲಿ ಯಕ್ಷಗಾನ ಕಲೆಯ ಮಹಾಪೋಷಕ ಕುಟುಂಬದಲ್ಲಿ ಹುಟ್ಟಿ, ಇಂದಿಗೂ ನೇರವಾಗಿ ಮತ್ತು ಪರೋಕ್ಷವಾಗಿ ಯಕ್ಷಗಾನ ಕಲೆಯ ಸರ್ವತೋಮುಖ ಅಭಿವೃದ್ಧಿಗೆ ಸಮರ್ಥ ಕೃಷಿಕರಾಗಿ ಶ್ರಮಿಸುತ್ತಿರುವ ಸನ್ಮಾನ್ಯ ರಂಗಯ್ಯ ಹೆಬ್ಬಾರ ಮತ್ತು ಮಡದಿ ಸರಸ್ವತಿ ಹೆಬ್ಬಾರ ಮಾರುಕೇರಿ ಈಗ ಸಾಗರ ತಾಲೂಕು ಹೊಸಾಡು ನಿವಾಸಿ ಇವರಿಗೆ ಶಾಲು ಮತ್ತು ಸೀರೆ ಹೊದೆಸಿ ಫಲ ಫುಷ್ಪ ತಾಂಬೂಲ ನೀಡಿ ಸನ್ಮಾನ ಮಾಡಲಾಯಿತು. ಹಿರಿಯರಾದ ರಾಮಚಂದ್ರ ಭಟ್ಟ ಶಿವಾನಿ, ಡಾ. ಐ.ಅರ್.ಭಟ್ಟ ಮುರ್ಡೇಶ್ವರ, ಪ್ರಸಿದ್ಧ ಅರ್ಥಧಾರಿ ಗಪ್ಪು ಭಟ್ರು ಕೆರೆಕೋಣ, ಎಸ್.ಎಮ್.ಭಟ್ಟ, ಪ್ರೊ.ಎಸ್.ಎನ್.ಹೆಗಡೆ ಮತ್ತು ಎನ್.ಎಸ್.ಹೆಗಡೆ ದಂಪತಿಗಳು ಮತ್ತು ಬಹು ವಿಮರ್ಶಕ ಪ್ರೇಕ್ಷಕರು ಸನ್ಮಾನದಲ್ಲಿ ಭಾಗಿಗಳಾಗಿದ್ದರು. ಗಣೇಶ ಎನ್.ಹೆಗಡೆ, ಸನ್ಮಾನ ಪತ್ರ ವಾಚಿಸಿದರು. ಡಾ. ಎಸ್.ಡಿ.ಹೆಗಡೆ, ಡಾ.ಐ.ಆರ್.ಭಟ್ಟ ಮುರ್ಡೇಶ್ವರ, ಸುಬ್ರಹ್ಮಣ್ಯ ಭಟ್ಟ ಕಿತ್ರೆ ಅಭಿನಂದನೆ ಸಲ್ಲಿಸಿದರು. ಗಣೇಶ ಹೆಗಡೆ ಬಿ.ಎಸ್.ಎನ್.ಎಲ್. ಬಂದ ಎಲ್ಲರನ್ನು ಸ್ವಾಗತಿಸಿದರು. ಡಾ. ಎಸ್.ಡಿ.ಹೆಗಡೆ ಕೊನೆಯಲ್ಲಿ ಎಲ್ಲರನ್ನು ವಂದಿಸಿದರು.

error: