ರೋಣ: ನಯ-ವಿನಯ ಸಂಪನ್ನರು, ಕ್ರಿಯಾ ಆಚಾರವುಳ್ಳ, ಲಿಂಗಪೂಜಾನಿಷ್ಠರಾದ ಶ್ರೀ ವಿಜಯಕುಮಾರ ದೇವರು ಇವರಿಗೆ 07/03/2022 ರಿಂದ 11/03.2022 ರ ವರೆಗೆ ಐದು ದಿನಗಳವರೆಗೆ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ. ಶ್ರೀ ಮಠದ ಹಿರಿಯ ಶ್ರೀಗಳು ಮತ್ತು ಇವರ ಪೂಜ್ಯನೀಯ ಗುರುಗಳಾದ ಪೂಜ್ಯ ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮಿಗಳವರು ಇವರಿಗೆ ಸಮಾಜ ಸೇವಾ ದೀಕ್ಷೆ ಹಾಗೂ ಅಧಿಕಾರ ಅನುಗ್ರಹ ಮಾಡುವರು.
ಕನ್ನಡ ನಾಡಿನಲ್ಲಿ 12ನೇ ಶತಮಾನದ ಬಸವಾದಿ ಪ್ರಮಥರು, ತಮ್ಮ ಶರಣ ತತ್ವದಿಂದ ಜನಸಾಮಾನ್ಯರನ್ನು ಉದ್ಧರಿಸಿದರು. ಈ ಪರಂಪರೆಯ ಶರಣ ಶ್ರೇಷ್ಠರೇ ಅಂಕಲಗಿಯ ಮಠದ ಮೂಲ ಪೂಜ್ಯರಾದ ಶ್ರೀ ಅಡವೀಸಿದ್ದೇಶ್ವರ ಮಹಾಸ್ವಾಮಿಗಳು (ಹಡಪದ ರೇಚಪ್ಪನವರು).
ಸರ್ವಸಂಗ ಪರಿತ್ಯಾಗ ಮಾಡಿ, ಸನ್ಯಾಸಿ ಸ್ವೀಕರಿಸಿ, ಭಕ್ತಿ, ಜ್ಞಾನ, ವೈರಾಗ್ಯದ ಮಹಾಬೆಳಕಾಗಿ ಅನೇಕ ಸಿದ್ದಿಗಳನ್ನು ಪಡೆದು, ಜನಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತಪ:ಶಕ್ತಿಯ ಸಿದ್ದಿಯನ್ನು ಧಾರೆಯರೆದು, ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣ ಸಾಧಿಸಿದವರೇ ಪೂಜ್ಯ ಶ್ರೀ ಅಡವೀಸಿದ್ದೇಶ್ವರರು.
ಕಲ್ಯಾಣ ಕ್ರಾಂತಿಯ ನಂತರ ಶರಣರೆಲ್ಲ ದಿಕ್ಕಾಪಾಲಾದರು, ಬಸವಣ್ಣ ಸಂಗಮಕ್ಕೆ, ಸಿದ್ಧರಾಮ ಸೊನ್ನಲಿಗೆಗೂ, ಅಲ್ಲಮಪ್ರಭು, ಅಕ್ಕಮಹಾದೇವಿ ಶ್ರೀಶೈಲದೆಡಗೂ ಹೊರಟರು. ಅಲ್ಲಮ ಪ್ರಭುವಿನ ಆದೇಶದಂತೆ ಅನೇಕ ಶರಣರೊಂದಿಗೆ ಶ್ರೀ ಚೆನ್ನಬಸವಣ್ಣನವರು ಉಳವಿಯತ್ತ ನಡೆದರು. ಈ ಜ್ಞಾನನಿಧಿ, ಷಟಸ್ಥಲ ಚಕ್ರವರ್ತಿ ಉಳವಿ ಶ್ರೀ ಚನ್ನಬಸವಣ್ಣನವರ ನಿಕಟವರ್ತಿಯಾಗಿ, ಅವರ ಪ್ರಭಾವಲಯದ ಪ್ರಭೆಯಾಗಿ ಅವರ ನಿರೂಪದಂತೆ ಪೂಜ್ಯಶ್ರೀ ಅಡವೀಸಿದ್ದೇಶ್ವರರು ಭೂಮಿಯ ಮೇಲೆ 770 ವರುಷಗಳ ಕಾಲ ಧ್ಯಾನ, ಮೌನ, ಯೋಗ, ಮಾರ್ಗದಿಂದ ದೀರ್ಘಾಯುಷಿಗಳಾಗಿದ್ದು ಅಖಂಡ ಭಾರತ ಸಂಚರಿಸಿ, ದ್ವಾದಶ ಜ್ಯೋತಿಲಿಂಗಗಳ ದರ್ಶನ ಪಡೆದು, ಮತ್ತೆ 12 ವರುಷ ಕಾಶಿವಿಶ್ವನಾಥನ ಸೇವೆಗೈದು, ಭಾರತ ದೇಶದ ತುಂಬ 366 ಮಠಗಳನ್ನು ಸ್ಥಾಪಿಸಿ, ಕೊನೆಗೆ ಗೋಕಾಕ ತಾಲೂಕಿನ ಕುಂದರನಾಡಿಗೆ ದಯಮಾಡಿಸಿದರು.
ಬೆಳಗಾವಿ, ಗೋಕಾಕ ಮತ್ತು ಹುಕ್ಕೇರಿ ಈ ತಾಲೂಕುಗಳ ಶೀಮೆಯ ಸಂಗಮ ಕ್ಷೇತ್ರವೇ “ಕುಂದರನಾಡು” 44 ಹಳ್ಳಿಗಳಿಂದ ಕೂಡಿದ ಹಸಿರು ಸಮೃದ್ಧಿಯ ನಿಸರ್ಗ ಸುಂದರನಾಡವಿದು, ಇದರ ಕೇಂದ್ರ ಸ್ಥಳ ಅಂಕಲಗಿ, ತಮ್ಮ ಪಾದಸ್ಪರ್ಶದಿಂದ ಈ ನೆಲವನ್ನು ಪುಣ್ಯಕ್ಷೇತ್ರವನ್ನಾಗಿ ಮಾಡಿದ ಶ್ರೀ ಅಡವೀಸಿದ್ದೇಶ್ವರರು ಶಿವಯೋಗ ಸಿದ್ದಿಯ ಸಾಧಕರಾಗಿ, “ನಿ:ಕಳಂಕ ಕೂಡಲ ಚೆನ್ನಸಂಗಮದೇವಾ” ಎಂಬ ಅಂಕಿತದಿAದ ವಚನಗಳನ್ನು ರಚನೆ ಮಾಡಿ, ಭಕ್ತಜನರಿಗೆ ಶರಣ ತತ್ವಗಳ ಧರ್ಮಬೋಧನೆ ಮಾಡಿ, ಭವರೋಗ ವೈದ್ಯರಾಗಿ, ಕಾಮಧೇನು, ಕಲ್ಪವೃಕ್ಷವಾಗಿ ಜೀವನ ಮಾರ್ಗ ತೋರಿಸಿದರು.
ಇಂತಹ ಪವಿತ್ರ ದಟ್ಟಾರಣ್ಯದಲ್ಲಿ ಪೂಜ್ಯರು ಪ್ರತಿನಿತ್ಯ ಧ್ಯಾನಾಸಕ್ತರಾಗಿ ಕುಳಿತಿರುತ್ತಿದ್ದರು, ಇಲ್ಲಿಗೆ ಸುತ್ತಲಿನ ಹಳ್ಳಿಗಳಿಂದ ದನ-ಕರುಗಳನ್ನು ಮೇಯಿಸಲು ಬಂದ ಹುಡುಗರು, ಈ ತಪಸ್ವಿಯನ್ನು ಕಂಡು ದೂರದಿಂದಲೇ ನಮಸ್ಕರಿಸುತ್ತಿದ್ದರು. ಒಂದು ಸಲ ಮಾರಿಯ ಬೇನೆ ಬಂದಿರುತ್ತದೆ. ಊರ ಜನರೆಲ್ಲರೂ ಸೇರಿ ಇವರಲ್ಲಿ ಬಂದು ಅಜ್ಜವರೇ, ನಮಗೆ ಬಂದ ಈ ರೋಗವನ್ನು ಪರಿಹರಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗಲಿಎಂದು ಪಾದೋದಕವನ್ನು ಪ್ರೋಕ್ಷಣೆ ಮಾಡಿ, ವಿಭೂತಿ ಲೇಪಿಸಿ ಎಲ್ಲರಿಗೂ ಆಶೀರ್ವದಿಸುತ್ತಾರೆ. ಬಂದೊದಗಿದ ರೋಗ ಪರಿಹಾರವಾಗುತ್ತದೆ. ಆಗ ಸಂತಸರಾದ ಭಕ್ತರು, ತಾವು ಯಾರು? ಎಂದು ಕೇಳಿದರು ಇವರ ಪೂರ್ವದ ಹೆಸರು ಹಡಪದ ರೇಚಪ್ಪನವರು. ಆದರೆ ಪೂಜ್ಯರು, ಭಕ್ತಾಧಿಗಳೇ “ಗುಡ್ಡದಲ್ಲಿದ್ದರೆ ಗುಡದಪ್ಪ, ಕಾಡಿನಲ್ಲಿದ್ದರೆ ಕಾಡಪ್ಪ” ತಲೆಯಲ್ಲಿ ಜಡೆಯಿರುವದರಿಂದ ಜಡಿಯಪ್ಪ, ಅಡವಿಯಲ್ಲಿದ್ದರೆ ಅಡಿವೆಪ್ಪ ಎನ್ನುತ್ತಾರೆ ಎಂದರು.
ಒಮ್ಮೆ ತುಮಕೂರಿಗೆ ಹೋಗಿ ಉದ್ದಾನ ಶಿವಯೋಗಿಗಳನ್ನು ಆರ್ಶಿರ್ವದಿಸತ್ತಾರೆ. ಗೋಸಲ ಸಿದ್ದೇಶ್ವರರು, ಯಡೆಯೂರು ಸಿದ್ದಲಿಂಗೇಶ್ವರರು ಅನುಗ್ರಹಿಸಿದ ಈ ನೆಲ “ದಾಸೋಹದ ಮಹಾಮನೆ” ಯಾಗುತ್ತದೆ ಎಂದು ಹಾರೈಸಿದರು. ಅಂದಿನಿAದ ಇಂದಿನವರೆಗೂ ಈ ಸಿದ್ದಗಂಗೆಯ ಕ್ಷೇತ್ರದಲ್ಲಿ ಅನ್ನದಾಸೋಹ ನಿರಂತರವಾಗಿ ನಡೆದಿದೆ. ಇಲ್ಲಿ ಭಕ್ತರು ಇವರನ್ನು ಅಟವಿ ಮಹಾಸ್ವಾಮಿಗಳೆಂದು ಕರೆಯುವರು.
ಮಹಿಮಾಶಾಲಿಗಳಾದ ಗರಗದ ಪೂಜ್ಯ ಶ್ರೀ ಮಡಿವಾಳಪ್ಪನವರು, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು, ಶಿಶುನಾಳದ ಶ್ರೀ ಶರೀಫರು, ನವಲಗುಂದದ ಶ್ರೀ ನಾಗಲಿಂಗ ಯೋಗಿಗಳು, ಮುರಗೋಡದ ಶ್ರೀ ಚಿದಂಬರರು ಅಂಕಲಗಿಗೆ ಬಂದು ಶ್ರೀ ಅಡಿವೆಪ್ಪಜ್ಜನವರ ದರ್ಶನ ಪಡೆದು ಧನ್ಯರಾದರು.
ಹೀಗೆ ಯೋಗಿಗಳಿಗೆ, ಸಿದ್ಧರಿಗೆ, ಸಾಧಕರಿಗೆ ಹಾಗೂ ಜನಸಾಮಾನ್ಯರಿಗೆ ಆಶೀರ್ವದಿಸಿದ ಮಹಿಮಾ ಪುರುಷ ಪೂಜ್ಯಶ್ರೀ ಅಡವೀಸಿದ್ದೇಶ್ವರರು 19ನೆಯ ಶತಮಾನದ ಎರಡನೆಯ ದಶಕದಲ್ಲಿ ದೇಹ ತ್ಯಾಗ ಮಾಡಿದರು.
ಶ್ರೀ ಮಠದ ಗುರುಪರಂಪರೆ :-
ಇವರ ನಂತರ ಬಂದ ಶ್ರೀ ಗುರು ಸಿದ್ಧರಾಮ ಅಜ್ಜನವರು. ಆಮೇಲೆ ಶ್ರೀ ಮ.ನಿ.ಪ್ರ.ಸಿದ್ಧರಾಮ ಮಹಾಸ್ವಾಮಿಗಳು ಶಿವಯೋಗ ಮಂದಿರದಲ್ಲಿ ಶಿಕ್ಷಣ ಪಡೆದು ಸಂಸ್ಕೃತ, ಆಯುರ್ವೇದ ಪಂಡಿತರಾಗಿ ಶ್ರೀ ಮಠದ ಅಭಿವೃದ್ಧಿಯೊಂದಿಗೆ ಭಕ್ತರೋದ್ದಾರ ಮಾಡಿದರು. ಇವರ ನಂತರ ಶಿವಯೋಗ ಮಂದಿರದಲ್ಲಿ ಶಿಕ್ಷಣ ಪಡೆದು ಬಂದ ಈಗಿನ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಕಳೆದ 50 ವರುಷಗಳಿಂದ ಶ್ರೀಮಠದ ಪರಂಪರೆಗಳನ್ನು ಮುಂದುವರೆಸಿಕೊAಡು, ಆಧುನಿಕತೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೇ ಐತಿಹಾಸಿಕ ಪ್ರಸಿದ್ಧವಾದ ಸುಂದರವಾದ, ಭವ್ಯವಾದ ಈ ಕಟ್ಟಿಗೆಯ ಮಠದ ಜೀರ್ಣೋದ್ದಾರ ಕಾರ್ಯ, ನೂತನ ಕಟ್ಟಡಗಳ ನಿರ್ಮಾಣ, ಮಠದ ಸುತ್ತಲೂ ಭದ್ರವಾದ ಆವರಣ ಗೋಡೆ, ನಿರ್ಮಾಣ, ಧಾರ್ಮಿಕ ಹಾಗೂ ಶೈಕ್ಷಣಿಕ ಜಾಗೃತಿ ಮಾಡುತ್ತಾ, ಜನರಿಗೆ ಕೃಷಿ-ಆರೋಗ್ಯ ಕುರಿತು ಅರಿವು ಮೂಡಿಸುವದು, ಮಠದ ಕೃಷಿ ಭೂಮಿಯನ್ನು ವಿಸ್ತಾರಗೊಳಿಸಿ ಆಧುನಿಕತೆಗೆ ತಕ್ಕಂತೆ ಒಕ್ಕುಲುತನ ಮಾಡಿಸುತ್ತಾ ಮಠದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಿದ್ದಾರೆ.
ನಿರಂಜನ ಪಟ್ಟಾಧಿಕಾರ :-
ಶ್ರೀ ಅಡವೀಸಿದ್ದೇಶ್ವರ ಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ವಿಜಯಕುಮಾರ ದೇವರ ನಿರಂಜನ ಚರ ಪಟ್ಟಾಧಿಕಾರ ಸಮಾರಂಭ ಈ ಜಾತ್ರೆ ಸಮಯದಲ್ಲಿ ಬುಧುವಾರ 09/03/2022 ರಂದು ನಾಡಿನ ವಿವಿಧ ಮಠಾಧೀಶರ ಹರಗುರು ಚರಮೂರ್ತಿಗಳ ಪಾವನ ಸಾನಿಧ್ಯದಲ್ಲಿ, ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ನಡೆಯುತ್ತದೆ.
ಪೂಜ್ಯ ಶ್ರೀ ವಿಜಯಕುಮಾರ ದೇವರ ಪೂರ್ವಾಶ್ರಮ ಬೈಲಹೊಂಗಲ. ಪ್ರಾಥಮಿಕ, ಪ್ರೌಢಶಿಕ್ಷಣ, & ಪಿ.ಯು.ಸಿ ಶಿಕ್ಷಣವನ್ನು ಅಲ್ಲಿಯೇ ಪೂರೈಸಿಕೊಂಡು, ಜೊತೆಗೆ ತಮ್ಮ ಸಂಸ್ಕಾರವAತ ಮನೆಯ ಹಿರಿಯರಿಂದ ವೇದ, ವಚನ ಸಾಹಿತ್ಯ ಅಭ್ಯಾಸ, ವೈದಿಕ ಕ್ರಿಯೆಗಳನ್ನು ಕಲಿತವರು, ನಂತರ 2011, 2012 ರಲ್ಲಿ ಎರಡು ವರ್ಷ ಶ್ರೀಗುರು ಹಾನಗಲ್ ಕುಮಾರ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಶಿವಯೋಗ ಮಂದಿರದಲ್ಲಿ ಸಂಸ್ಕೃತ, ಜ್ಯೋತಿಷ್ಯ, ವೈದಿಕ, ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದ ಪ್ರತಿಭಾವಂತರು.
2013ರ ಜನವರಿಯಲ್ಲಿ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ಆಗಮಿಸಿದ ಪೂಜ್ಯರು ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಾವಯವ ಕೃಷಿ ಚಟುವಟಿಕೆಯಲ್ಲಿ ಸಿದ್ದಹಸ್ತರು, ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿದ್ದಾರೆ..
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ