
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹಡವನಹಳ್ಳಿ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ೯೦ಲಕ್ಷರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ನೆರವೇರಿಸಿದರು.
ಕೃಷ್ಣರಾಜಪೇಟೆ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸಿದ ನನಗೆ ಕ್ಷೇತ್ರದ ಜನತೆ ಆಶೀರ್ವದಿಸಿ ಶಕ್ತಿ ತುಂಬಿದ್ದಾರೆ. ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸಲು ೨೧೯ಕೋಟಿ ರೂಪಾಯಿಗಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇನೆ. ಜನರು ನೆಮ್ಮದಿಯ ಜೀವನ ನಡೆಸಲು ನೀರು ಅವಶ್ಯಕ ಎಂಬ ಸತ್ಯದ ಅರಿವನ್ನು ಹೊಂದಿರುವ ನಾನು ಕೆರೆ ಕಟ್ಟೆಗಳನ್ನು ತುಂಬಿಸುವುದು, ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇನೆ ಎಂದು ಸಚಿವ ನಾರಾಯಣಗೌಡ ವಿವರಿಸಿದರು… ಕೃಷ್ಣರಾಜಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಪಿಎಂಜಿಎಸ್ ವೈ ಯೋಜನೆಯಡಿ ೨೪ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ..ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಧ್ಯದಲ್ಲಿಯೇ ಆರಂಭವಾಗಲಿವೆ ಎಂದು ಸಚಿವರು ವಿವರಿಸಿದರು..
ರಾಜ್ಯದ ಸಚಿವನಾಗಿ ಮೂರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ನಾನು ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಪಡಿಸಿ ತೋರಿಸುತ್ತೇನೆ ಎಂದರು.
ಗ್ರಾಮದ ಲಕ್ಷ್ಮೀಆಂಜನೇಯ ಸ್ಬಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕೊರೋನಾ ನಿರ್ಮೂಲನೆಗಾಗಿ ಸಚಿವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಘಲಯಮಂಜುನಾಥ್ ಮಾತನಾಡಿ ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಲು ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಿ ಅನುಷ್ಠಾನಗೊಳಿಸಿ ಬರದ ನಾಡಿಗೆ ಗಂಗೆಯನ್ನು ತಂದ ಭಗೀರಥನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಮಾಜಿ ಪ್ರಧಾನಿ ದೇವೇಗೌಡರನ್ನು ಎದುರು ಹಾಕಿಕೊಂಡು ಈಜಿ ದಡಸೇರಿ ಶಾಸಕರಾಗಿ, ಮಂತ್ರಿಯಾಗಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಅಂಬರೀಶ್, ಗ್ರಾಮೀಣ ರಸ್ತೆ ಅಭಿವೃದ್ಧಿ ವಿಭಾಗದ ಎಇಇ ಕಾಳಯ್ಯ, ಮುಖಂಡರಾದ ದಡೀಘಟ್ಟ ದೊಡ್ಡೇಗೌಡ, ಡಿ.ಪಿ.ಪರಮೇಶ್, ದಿನೇಶ್, ಗೊರವಿ ಮಂಜೇಗೌಡ, ಮಾಳಗೂರು ಚಂದ್ರಶೇಖರ್, ಸಚಿವರ ಆಪ್ತಸಹಾಯಕರಾದ ದಯಾನಂದ, ಪ್ರಭು, ಕಿಕ್ಕೇರಿ ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರ ಚಿನಕುರಳಿ ರಾಮು ಮತ್ತಿತರರು ಉಪಸ್ಥಿತರಿದ್ದರು.
ವರದಿ. ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ