May 4, 2024

Bhavana Tv

Its Your Channel

ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ಅಂಗಡಿಗಳನ್ನು ಇಟ್ಟುಕೊಂಡು ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತೊಂದರೆ ನೀಡುತ್ತಿದ್ದ ಅಂಗಡಿಗಳನ್ನು ಭಾರೀ ಪೋಲಿಸ್ ಭದ್ರತೆಯಲ್ಲಿ ತೆರವು.

ವರಹನಾಥಕಲ್ಲಹಳ್ಳಿಯ ಭೂವರಹನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡು ದೇವಾಲಯದ ವ್ಯವಸ್ಥಾಪನಾ ಸಮಿತಿಯ ವಿರುದ್ಧವೇ ಗಲಾಟೆ ಗದ್ದಲ ಮಾಡಿ ಗ್ರಾಮದಲ್ಲಿ ಅಶಾಂತಿ ನೆಲೆಸಲು ಕಾರಣರಾಗಿದ್ದ ಗ್ರಾಮ ಪಂಚಾಯತಿ ಸದಸ್ಯ ಕಲ್ಲಹಳ್ಳಿ ಕುಮಾರ್ ಮತ್ತು ಗ್ರಾಮದ ಮುಖಂಡ ಮಂಜೇಗೌಡ ಅವರಿಗೆ ಗಂಜಿಗೆರೆ ಗ್ರಾಮ ಪಂಚಾಯತಿ ಹಾಗೂ ತಾಲೂಕು ಆಡಳಿತವು ಹಲವಾರು ಬಾರಿ ತಿಳುವಳಿಕೆ ನೀಡಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಬದಲಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಮನವಿ ಮಾಡಿದ್ದರೂ ಪೆಟ್ಟಿಗೆ ಅಂಗಡಿ ತೆರವುಗೊಳಿಸದೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.

ಇಂದು ತಾಲ್ಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬಿ.ಪಿ.ಬ್ಯಾಟರಾಯಗೌಡ, ಡಿ.ಲಕ್ಷ್ಮಣ, ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ, ಗಂಜಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ವೀರಾಜಮ್ಮ, ಕಾರ್ಯದರ್ಶಿ ರವಿಕುಮಾರ್, ಮುಖಂಡರಾದ ಗಂಜಿಗೆರೆ ಶಿವಣ್ಣ, ಬೂಕಹಳ್ಳಿ ಚಂದ್ರಪ್ಪ ಮತ್ತು ಗ್ರಾಮಸ್ಥರು ಕಲ್ಲಹಳ್ಳಿ ಕುಮಾರ ಮತ್ತು ಮಂಜೇಗೌಡ ಅವರೊಡನೆ ಸಮಾಲೋಚನೆ ನಡೆಸಿ ಅಂಗಡಿಗಳನ್ನು ತೆರವು ಮಾಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಗಂಜಿಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಅವರ ನೇತೃತ್ವದಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ದೇವಾಲಯದ ಜಾಗದಲ್ಲಿ ಅಕ್ರಮವಾಗಿ ಇಟ್ಟಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಲಾಯಿತು..

ಪೆಟ್ಟಿಗೆ ಅಂಗಡಿ ತೆರವು ಕಾರ್ಯಾಚರಣೆ ಸಮಯದಲ್ಲಿ ತೆರವು ಕಾರ್ಯಕ್ಕೆ ಅಡ್ಡಿಪಡಿಸಿ ತೀವ್ರ ಪ್ರತಿರೋಧ ಒಡ್ಡಿದ ಕಲ್ಲಹಳ್ಳಿ ಕುಮಾರ್ ಅವರನ್ನು ಪೋಲಿಸರು ಬಲವಂತವಾಗಿ ಜಾಗಖಾಲಿ ಮಾಡಿಸಿ ಪೆಟ್ಟಿಗೆ ಅಂಗಡಿ ತೆರವು ಮಾಡಿಸಿ, ಅಂಗಡಿಯೊಳಗಿದ್ದ ವಸ್ತುಗಳನ್ನು ಪಂಚಾಯಿತಿಗೆ ಸಾಗಿಸಿದರು. ಮಂಜೇಗೌಡ ಪೋಲಿಸ್ ಭದ್ರತೆಯಲ್ಲಿ ಅಂಗಡಿ ತೆರವು ಮಾಡಿದರು…

ನಂತರ ಗ್ರಾಮಸ್ಥರು ಹಾಗೂ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಜನರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ದೇವಾಲಯದ ವತಿಯಿಂದ ಗ್ರಾಮಸ್ಥರು ವ್ಯಾಪಾರ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಟ್ಟು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.. ಪೆಟ್ಟಿಗೆ ಅಂಗಡಿಗಳ ತೆರವು ಸಮಯದಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: