May 3, 2024

Bhavana Tv

Its Your Channel

ಫೆ.17 ಕ್ಕೆ ಬಹುಜನ ಸಮಾಜ ಪಾರ್ಟಿ ವತಿಯಿಂದ ಧರಣಿ ಸತ್ಯಾಗ್ರಹ

ಕೆ.ಆರ್.ಪೇಟೆ:– ಕರ್ನಾಟಕ ರಾಜ್ಯದ ಜನತೆಯ ಪರವಾಗಿ ರಾಜ್ಯ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಬಹುಜನ ಸಮಾಜ ಪಾರ್ಟಿಯ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಫೆಬ್ರವರಿ 17ರ ಗುರುವಾರ ಬೆಳಿಗ್ಗೆ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಶಿವಶಂಕರ್ ತಿಳಿಸಿದರು .

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬಹುಜನ ಸಮಾಜ ಪಾರ್ಟಿಯ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು…

ವಿಶ್ರಾಂತ ನ್ಯಾಯಾಧೀಶರಾದ ನಾಗಮೋಹನದಾಸ್ ಅವರು ಹಿಂದುಳಿದವರು ಹಾಗೂ ಶೋಷಿತವರ್ಗಗಳ ಕಲ್ಯಾಣಕ್ಕಾಗಿ ನೀಡಿರುವ ವರದಿಯನ್ನು ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೊಳಿಸದೇ ಬೇಜವಾಬ್ಧಾರಿತನವನ್ನು ಪ್ರದರ್ಶಿಸಿದೆ. ರಾಜ್ಯದ ಜನತೆಯ ಹಿತವನ್ನು ಕಡೆಗಣಿಸಿರುವ ಜನವಿರೋಧಿ ಸರ್ಕಾರವು ರಾಜ್ಯದ ಆಡಳಿತವನ್ನು ನಡೆಸಲು ಬೇಕಾದ ಅರ್ಹತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಬಹುಜನರು ಹಾಗೂ ಶೋಷಿತರ ಹಿತಕಾಪಾಡಲು ಬದ್ಧವಾಗಿರುವ ಬಿ.ಎಸ್.ಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದ ಜಿಲ್ಲಾಧ್ಯಕ್ಷ ಶಿವಶಂಕರ್ ರಾಜ್ಯಸರ್ಕಾರದ ಜನವಿರೋಧಿ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು ಬದಲಾವಣೆಯನ್ನು ಬಯಸಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ಆಡಳಿತ ನಡೆಸಲು ಬಹುಜನ ಸಮಾಜ ಪಾರ್ಟಿಗೆ ಒಂದು ಅವಕಾಶ ನೀಡಬೇಕು ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಬಹುಜನ ಸಮಾಜಪಾರ್ಟಿಯು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದೆ ಎಂದು ಜಿಲ್ಲಾ ಬಿ.ಎಸ್.ಪಿ ಅಧ್ಯಕ್ಷ ಶಿವಶಂಕರ್ ಹೇಳಿದರು ..

ಕೆ.ಆರ್.ಪೇಟೆ ತಾಲೂಕು ಬಿ.ಎಸ್.ಪಿ ಅಧ್ಯಕ್ಷ ಬಸ್ತಿಪ್ರದೀಪ್ ಮಾತನಾಡಿ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯವು ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಹುಜನರಿಗೆ ಸಂವಿಧಾನ ಬದ್ಧವಾಗಿ ದೊರೆಯುತ್ತಿದ್ದ ಮೀಸಲಾತಿಯನ್ನು ತೆಗೆದುಹಾಕಿ ಆದೇಶ ನೀಡಿದೆ. ಸಂವಿಧಾನದ ಆಶಯಗಳ ಅಡಿಯಲ್ಲಿ ದೊರೆಯುತ್ತಿದ್ದ ಮೀಸಲಾತಿಯನ್ನು ತೆಗೆದು ಹಾಕಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ. ಆದ್ದರಿಂದ ನ್ಯಾಯಾಲಯವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರಿಗೆ ನೀಡುತ್ತಿರುವಂತೆ ದೇಶದಲ್ಲಿ ವಾಸಿಸುತ್ತಿರುವ ತುಳಿತಕ್ಕೊಳಗಾದ ಬಹುಜನರಿಗೂ ರಾಜಕೀಯ ಮೀಸಲಾತಿಯನ್ನು ನೀಡಬೇಕು. ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳಿಗೆ ಪ್ರಸ್ತುತ ನೀಡುತ್ತಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು..

ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಉಸ್ತುವಾರಿಗಳಾದ ಚೆಲುವರಾಜು ಮಾತನಾಡಿ ರಾಯಚೂರಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತ್ತು ಮಾಡಲು ಮುಂದಾಗದಿರುವ ರಾಜ್ಯ ಸರ್ಕಾರದ ಕ್ರಮವು ಖಂಡನಾರ್ಹವಾಗಿದೆ. ಕೂಡಲೇ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಚೆಲುವರಾಜು ಆಗ್ರಹಿಸಿದರು…

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸೋದರತ್ವ ಸಮಿತಿಯ ಅಧ್ಯಕ್ಷ ರವಿಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ತಾಲೂಕು ಉಸ್ತುವಾರಿ ಗೋವಿಂದರಾಜು, ತಾಲೂಕು ಉಪಾಧ್ಯಕ್ಷ ಶಂಕರ್, ತಾಲೂಕು ಪ್ರಧಾನಕಾರ್ಯದರ್ಶಿ ಗಂಗಾಧರ್, ನಗರ ಘಟಕದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಶಿವಣ್ಣ, ತಾಲೂಕು ಬಿ.ಎಸ್.ಪಿ ಮುಖಂಡ ಮೊಬೈಲ್ ರವಿ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: