May 19, 2024

Bhavana Tv

Its Your Channel

2400ನೇ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರ

ಕೃಷ್ಣರಾಜಪೇಟೆ :- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಗ್ರಾಮಗಳ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರರೈ ಹೇಳಿದರು …

ಅವರು ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಆರಂಭವಾದ 2400ನೇ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲಾತಿಗಳನ್ನು ಹಸ್ತಾಂತರ ಮಾಡಿ ಮಾತನಾಡಿದರು..

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ರಾಮರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ಡಿ.ವೀರೇಂದ್ರಹೆಗಡೆ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಗ್ರಾಮಾಭಿವೃದ್ಧಿ ಯೋಜನೆಯು ಇಂದು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿಯೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ನಿರುದ್ಯೋಗಿ ಯುವಕ ಯುವತಿಯರಿಗೆ ವೃತ್ತಿಕೌಶಲ್ಯ ಮಾರ್ಗದರ್ಶನ ನೀಡುವ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಕೊಡಿಸಿ ಗುಡಿಕೈಗಾರಿಕೆಗಳಿಗೆ ಒತ್ತು ನೀಡಿ ಇಡೀ ಕುಟುಂಬದ ಮುನ್ನಡೆಗೆ ದಾರಿದೀಪವಾಗಿ ಕೆಲಸ ಮಾಡುತ್ತಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಯೋಜನಾ ಕಛೇರಿಯ ವ್ಯಾಪ್ತಿಯಲ್ಲಿ ಇಂದು 2400ನೇ ಸ್ವಸಹಾಯ ಸಂಘವು ಆರಂಭವಾಗಿದ್ದು ಉಳಿದ 2399 ಸಂಘಗಳೆಲ್ಲವೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಸ್ವಸಹಾಯ ಸಂಘಗಳು ತಮ್ಮ ಸದಸ್ಯರಿಗೆ ಸಾಲಸೌಲಭ್ಯ ನೀಡಿ ವೃತ್ತಿ ಮಾರ್ಗದರ್ಶನ ಮಾಡಿ ಶೇ.100ಕ್ಕೆ 100ರಷ್ಟು ಸಾಲದ ಹಣವನ್ನು ಮರುಪಾವತಿ ಮಾಡಿ ಯಶಸ್ವಿ ಸಂಘಗಳಾಗಿ ಲಾಭವನ್ನು ಗಳಿಸುತ್ತಾ ಮುನ್ನಡೆಯುತ್ತಿವೆ ಎಂದು ಗಂಗಾಧರರೈ ಅಭಿಮಾನದಿಂದ ಹೇಳಿದರು..

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ 2400ನೇ ಸ್ವಸಹಾಯ ಸಂಘದ ಪ್ರತಿನಿಧಿಗಳಿಗೆ ಸಂಘದ ದಾಖಲೆಗಳನ್ನು ಹಸ್ತಾಂತರ ಮಾಡಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ತಾಲ್ಲೂಕಿಗೆ ವ ರವಾಗಿ ಬಂದಿದೆ. ಯೋಜನೆಯಲ್ಲಿ ಮಹಿಳೆಯರು ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಿರುವುದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಮೂಡಿದೆ. ಒಂದು ಚುನಾಯಿತ ಸರ್ಕಾರವು ಮಾಡಲಾಗದ ಸಮಾಜಸೇವಾ ಚಟುವಟಿಕೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುವ ಮೂಲಕ ನಾಡಿನ ಸಮಸ್ತ ಜನರ ವಿಶ್ವಾಸ ಹಾಗೂ ಅಭಿಮಾನಕ್ಕೆ ಭಾಜನವಾಗಿದೆ ಎಂದು ಅಶೋಕ್ ಅಭಿಮಾನದಿಂದ ಹೇಳಿದರು..

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಗಾಯತ್ರಿ ಸುಬ್ಬಣ್ಣ, ಸಮಾಜಸೇವಕ ಜಿ.ಸೋಮಶೇಖರ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಉಧ್ಯಮಿ ನಂದಕುಮಾರ್, ಯೋಜನೆಯ ಕಾರ್ಯಕರ್ತರಾದ ಅನ್ನಪೂರ್ಣ, ಕಾವ್ಯಹರೀಶ್ ಸೇರಿದಂತೆ ಐನೂರಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: