May 4, 2024

Bhavana Tv

Its Your Channel

ಕಾರ್ಮಿಕರು ನಮ್ಮ ರಾಷ್ಟ್ರದ ಸಂಪತ್ತು- ತಹಶೀಲ್ದಾರ್ ಎಂ.ವಿ.ರೂಪ

ಕೃಷ್ಣರಾಜಪೇಟೆ :- ಕಾರ್ಮಿಕರು ನಮ್ಮ ರಾಷ್ಟ್ರದ ಸಂಪತ್ತು. ದೇಶದ ಮುನ್ನಡೆ ಹಾಗೂ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕ ಬಂಧುಗಳು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಸರ್ಕಾರದ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ನೂರ್ಕಾಲ ಆರೋಗ್ಯವಂತರಾಗಿ ಸಮೃದ್ಧ ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಕರೆ ನೀಡಿದರು ..

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕ ಬಂಧುಗಳ ಆರೋಗ್ಯ ಸಂವರ್ಧನೆಗಾಗಿ ಆರಂಭಿಸಿರುವ ಸಂಚಾರಿ ಆಂಬ್ಯುಲೆನ್ಸ್ ಸೇವಾ ವಾಹನ “ಶ್ರಮಿಕ್ ಸಂಜೀವಿನಿ”ಗೆ ಹಸಿರು ನಿಶಾನೆಯನ್ನು ತೋರಿಸಿ ಚಾಲನೆ ನೀಡಿ ಮಾತನಾಡಿದರು..

ಬಿಸಿಲು, ಚಳಿ, ಮಳೆಯೆನ್ನದೇ ದುಡಿಯುತ್ತಿರುವ ಕಾರ್ಮಿಕ ಬಂಧುಗಳು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಸರ್ಕಾರದ ವತಿಯಿಂದ ನೀಡುವ ಗುರುತಿನ ಚೀಟಿಯನ್ನು ಪಡೆದುಕೊಂಡು ಸರ್ಕಾರವು ನೀಡುವ ವಿವಿಧ ಸೌಲಭ್ಯಗಳು ಸೇರಿದಂತೆ ಸಾಧನ ಸಲಕರಣೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಮನವಿ ಮಾಡಿದ ತಹಶೀಲ್ದಾರ್ ರೂಪ ರಾಜ್ಯ ಸರ್ಕಾರವು ವಿಶೇಷವಾಗಿ ಕಾರ್ಮಿಕರ ಆರೋಗ್ಯ ಸಂವರ್ಧನೆಗಾಗಿ ಶ್ರಮಿಕ ಸಂಜೀವಿನಿ ಹೆಸರಿನಲ್ಲಿ ಕಾರ್ಮಿಕರು ವಾಸವಾಗಿರುವ ಸ್ಥಳಗಳಿಗೇ ತೆರಳಿ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಂಬುಲೆನ್ಸ್ ಸೇವೆಯನ್ನು ನೀಡಿದೆ. ಈ ಆಂಬ್ಯುಲೆನ್ಸ್ ವಾಹನವು ವಾರದಲ್ಲಿ ಪ್ರತೀ ಗುರುವಾರ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿ ಕಟ್ಟಡ ಕಾರ್ಮಿಕರು ನೆಲೆಸಿರುವ ಊರಿಗೆ ತೆರಳಿ ಅಗತ್ಯ ವೈದ್ಯಕೀಯ ಸೇವೆ ಸೇರಿದಂತೆ ತುರ್ತು ಚಿಕಿತ್ಸೆಯನ್ನು ನೀಡಲಿದೆ. ಆದ್ದರಿಂದ ಕಾರ್ಮಿಕ ಬಂಧುಗಳು ತಮ್ಮ ವಯಕ್ತಿಕ ಆರೋಗ್ಯ ಸೇರಿದಂತೆ ಕಾರ್ಮಿಕರ ಅವಲಂಬಿತ ಕುಟುಂಬದ ಸದಸ್ಯರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿ ನಿಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೈಮುಗಿದು ಮನವಿ ಮಾಡಿದರು..

ಕಾರ್ಮಿಕ ನಿರೀಕ್ಷಕರಾದ ಎನ್.ಆರ್.ಸಂತೋಷ್ ಮಾತನಾಡಿ ಕಾರ್ಮಿಕ ಇಲಾಖೆಯು ವಿನೂತನವಾಗಿ ಹೊಸ ಯೋಜನೆಯನ್ನು ರೂಪಿಸಿ ಕಾರ್ಮಿಕರ ಮನೆ ಬಾಗಿಲಿಗೆ ಬಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವಂತಹ ಅತ್ಯುತ್ತಮವಾದ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಿದೆ. ಕಾರ್ಮಿಕ ಬಂಧುಗಳು ಇಲಾಖೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊAಡು ವೈದ್ಯಕೀಯ ಸೇವೆ ಸೇರಿದಂತೆ ವಿದ್ಯಾರ್ಥಿ ವೇತನ, ಅಪಘಾತ ವಿಮೆ, ಸಹಾಯ ಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡು ನೆಮ್ಮದಿಯ ಬದುಕು ನಡೆಸಬೇಕು ಎಂದು ಮನವಿ ಮಾಡಿದರು..

ಪಿಎಲ್ ಡಿ ಬ್ಯಾಂಕ್ ಮಾಜಿಅಧ್ಯಕ್ಷ ಸಾಕ್ಷೀಬೀಡು ರಾಮಕೃಷ್ಣೇಗೌಡ, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಬಿ.ಎಲ್.ಚಂದ್ರಕಲಾ ಸೇರಿದಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ನೌಕರರು ಹಾಗೂ ವೈದ್ಯಕೀಯ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: