December 20, 2024

Bhavana Tv

Its Your Channel

ಶಾಂತಿ ಧೂತನ ಕ್ರಾಂತಿ ಗೀತೆಗಳ ರಿಂಗಣ:ಕವಿಗೆ ನಮನ.

ಕವಿ ಡಾ.ಸಿದ್ಧಲಿಂಗಯ್ಯ ಅವರ ಜೀವನ್ಮರಣದ ಕೆಲ ತಿಂಗಳುಗಳ ಹೋರಾಟ ಕೊನೆಗೊಂಡಿದೆ ಹಾಗೆ ದಶಕದ ಹೋರಾಟವೂ!
ದಲಿತ ಹೋರಾಟಕ್ಕೆ ಧ್ವನಿ ಕೊಟ್ಟು ಹಾಡುಗಳ ಮೂಲಕ ದನಿಯಾದ ಧಣಿ ಅವರು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಒಂದು ಸಂಕೇತ ಆದರೆ ಇಂತಹ ನೂರಾರು ಹಾಡುಗಳನ್ನು ಬರೆದು,ಹಾಡಿಗೆ ಹೊಸ ಭಾಷ್ಯ ಬರೆದರು.

ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ವೃತ್ತಿ ಪ್ರಾರಂಭಿಸಿ, ನಂತರ ಕವಿಯಾಗಿ ಬಹುದೊಡ್ಡ ರೆಕಗ್ನೇಶನ್ ಗಳಿಸಿಕೊಂಡರು.
ವಿದ್ಯಾರ್ಥಿ ಜೀವನದಲ್ಲಿ ಬಿದ್ದ ಒದೆಗಳಿಂದ ನೊಂದರೂ ನಗುತ್ತ ಇರುತ್ತಿದ್ದರು. ಹೋರಾಟ ಮುಗಿಸಿ ಬೆಳಕಿಗೆ ಬರುವ ಹೊತ್ತಿನಲ್ಲಿ ಒದೆಸಿಕೊಳ್ಳುವ ಕಾಲ ಮುಗಿದಿತ್ತು. ಅವರ ನಗು ಮುಖ ನೋಡಿದವರಿಗೆ ‘ಇವರಾ ಒದೆ ತಿಂದವರು!’ ಎಂಬ ಸಂಶಯ ಬರುತ್ತಿತ್ತು.

ತಾವು ನೋವು ಅನುಭವಿಸಿ,ಮುಂದಿನ ತಲೆಮಾರಿಗೆ ನಲಿವು ಒದಗಿಸಲು ಯಶಸ್ವಿಯಾದರು. ಅಷ್ಟೇ ಬೇಗ ಅದರ ಪ್ರತಿಫಲವನ್ನೂ ಅನುಭವಿಸಿದರು. ಹೀಗಾಗಿ ಅವರ ಕ್ರಾಂತಿ ಗೀತೆಗಳಲ್ಲಿ ಇದ್ದ ಬಿರುಸು ಅವರ ವೈಯಕ್ತಿಕ ಬದುಕಿನ ವರ್ತನೆಯಲ್ಲಿ ಇರಲಿಲ್ಲ, ಇದ್ದರೂ ಕಾಣಿಸುತ್ತಿದ್ದಿಲ್ಲ.

ಸ್ನೇಹ ಜೀವಿ ಹಸನ್ಮುಖಿ ಕವಿಗೆ ಸಾಮಾಜಿಕ ಕಳಕಳಿ ಜೊತೆಗೆ ಸಾಮರಸ್ಯವೂ ಇತ್ತು. ಕಾಲು ಕೆದರಿ ಜಗಳಕ್ಕೆ ನಿಲ್ಲದ ಅತಂರ್ಯುದ್ಧದ ಸೇನಾನಿ. ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯ ಸಾಧ್ಯ ಎಂದು ಅರಿತ ಅವರು, ತಮ್ಮ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲಿ ಎಂದು ಬಯಸಿ,ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಿಕೊಟ್ಟರು.

ಇಡೀ ನಾಡಿನ ಸಂಘಟನೆಗಳು ಮತ್ತು ಹೋರಾಟಗಳು ಅಂತಃಸತ್ವ ಹೆಚ್ಚಿಸಿಕೊಳ್ಳಲು ಮಾರ್ಗದರ್ಶನ ಮಾಡಿದರು.
ದಲಿತ ಚಳುವಳಿ ಹಾದಿ ತಪ್ಪ ಬಾರದೆಂಬ ಕಾಳಜಿಯೂ ಅಪಾರವಾಗಿತ್ತು. ಆದರೆ ಚಳುವಳಿ ತನ್ನ ಕವಲುಗಳ ಬದಲಿಸಿದಾಗ ಅವರು ಮೌನವಾಗಿ ತಮ್ಮ ಹಾದಿಯಲ್ಲಿ ಸಾಗಿದರು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ವಿಧಾನ ಪರಿಷತ್ತಿಗೆ ನೇಮಕಗೊಂಡು ಎರಡನೇ ಅವಧಿಯಲ್ಲಿ ಮುಂದುವರೆದು, ಹನ್ನೆರಡು ವರ್ಷ ಮೇಲ್ಮನೆಯಲ್ಲಿ ಇದ್ದರು. ಅವರ ಸೌಮ್ಯ ನಿಲುವು ಅನೇಕ ಅಧಿಕಾರಗಳನ್ನು ಅನುಭವಿಸಲು ನೆರವಾಯಿತು. ಎಲ್ಲದಕ್ಕೂ ಹೋರಾಟಗಳ ಅಗತ್ಯವಿಲ್ಲ ಎಂಬ ಮೌಲಿಕ ನಿಲುವಿನಿಂದ ಸದಾ ಜನ ಮಾನಸದಲಿ ಉಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅಕ್ಯಾಡೆಮಿಗಳು,ಪುಸ್ತಕ ಪ್ರಾಧಿಕಾರ, ಹತ್ತಾರು ವಿಶ್ವವಿದ್ಯಾಲಯಗಳ ಸೆನೆಟ್, ಸಿಂಡಿಕೇಟ್,ಸಲಹಾ ಸಮಿತಿ ಹೀಗೆ ಅನೇಕ ಸ್ಥಾನಮಾನಗಳ ಮೂಲಕ ಇಡೀ ಲೋಕ ಸುತ್ತಿದರು. ಅಧಿಕಾರದ ಮದ ತಲೆಗೆ ಏರದ ಸ್ಥಿತ ಪ್ರಜ್ಞೆಯನ್ನು ಉಳಿಸಿಕೊಂಡು,ವಿವಿಧ ಸಂಸ್ಥೆಗಳನ್ನು ಕಟ್ಟಲು ನೆರವಾದರು. ಗುರುಗಳಾದ ಡಾ.ಚಂದ್ರಶೇಖರ ಕಂಬಾರರಿಗೆ ಅನುಕೂಲ ಆಗುವಂತೆ ನಡೆದುಕೊಂಡು ಋಣ ತೀರಿಸಿದರು.

ಪುಟ್ಟ ದೇಹದ ತುಂಬ ದೊಡ್ಡ ವಿಚಾರಗಳ ಚಿಂತನ-ಮಂಥನ. ಮೇಲ್ಮನೆಯಲ್ಲಿ ಅವರು ಆಡಿದ ಮಾತುಗಳ ಗಂಭೀರತೆಯಲೂ ಹಾಸ್ಯ ಪ್ರಜ್ಞೆ ಹಾಸು ಹೊಕ್ಕಾಗಿ ಇರುತ್ತಿತ್ತು. ಸಿದ್ಧಲಿಂಗಯ್ಯ ಅವರ ಮಾತುಗಳ ಕೇಳಲು ಕಲಾಪ ಭರ್ತಿ ಆಗಿ,ಗ್ಯಾಲರಿಯಲ್ಲಿ ಜನ ಜಮಾಯಿಸುತ್ತಿದ್ದರು. ಹೇಳುವುದನ್ನು ತುಂಬಾ ತೀಕ್ಷ್ಣವಾಗಿ ಹೇಳಿ ಚುಚ್ಚಿದರೂ,ಚುಚ್ಚಿದ್ದು ಕೇವಲ ಚುಚ್ಚಿಸಿಕೊಂಡವರಿಗೆ ಮಾತ್ರ ಅರ್ಥವಾಗುತ್ತಿತ್ತು.

ರಾಜಕೀಯ ವ್ಯವಸ್ಥೆಯನ್ನು ಸುಧಾರಿಸಲಾಗದು ಎಂದು ಎನಿಸಿದಾಗ, ಪೊಲಿಟಿಕಲ್ ಪವರ್ ಹೊಂದಿದ್ದ ಶಕ್ತಿಯನ್ನು ಅರ್ಥ ಮಾಡಿಕೊಂಡು,ಅನೇಕ ಯುವಕರಿಗೆ ರಾಜಕೀಯ ದೀಕ್ಷೆ ನೀಡಿ ಸಾಮಾಜಿಕ ಬದಲಾವಣೆಯ ಮಾರ್ಗ ತೋರಿಸಿದ ಸೂಕ್ಷ್ಮತೆ ಅನುಕರಣೀಯ.

ಸಾಹಿತ್ಯ, ರಾಜಕಾರಣ, ಸಿನೆಮಾ ಮತ್ತು ಧಾರ್ಮಿಕ ಮುಖಂಡರುಗಳ ಜೊತೆಗೆ ಹೊಂದಿದ್ದ ಸಂಪರ್ಕವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದರು; ದುರುಪಯೋಗವಲ್ಲ. ಸಲಹೆಗಳನ್ನು ಬಯಸಿ ಬಂದವರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರು.
ಅವರ ಬಹುಪಾಲು ಕೃತಿಗಳನ್ನು ಓದಿ ಪ್ರತಿಕ್ರಿಯೆ ದಾಖಲಿಸಿದ್ದೆ. ಹಗರಿಬೊಮ್ಮನಹಳ್ಳಿ ಗೆಳೆಯರು ಆಯೋಜಿಸಿದ್ದ ೫೦ ನೇ ಹುಟ್ಟು ಹಬ್ಬದಂದು ನಾನು ರಸವತ್ತಾಗಿ ಮಾತನಾಡಿದ್ದು ಸುಂದರ ನೆನಪು.

ಅನೇಕ ಬೈಟಕ್ಕುಗಳ ಹರಟೆಯ ಸ್ವರೂಪವನ್ನು ಮರೆಯಲಾಗದು. ಒಮ್ಮೆ ಗದುಗಿಗೆ ಬಂದಾಗ ಮಧ್ಯಾನ್ಹ ‘ಸಿದ್ದು ನಂಗೆ ಬೇಗ ಏನಾದರೂ ತಿನ್ನಲು ಕೊಡಿ’ ಎಂದು ಮಗುವಿನ ಹಾಗೆ ಕೇಳಿದರು. ಆಗ ಏನನ್ನು ತಿನ್ನಲು ಕೊಡದ ಜಾಗದಲ್ಲಿ ಇದ್ದೆವು.
‘ಅಯ್ಯೋ ಸರ್’ ಎಂದು ಒದ್ದಾಡಿದೆ. ರೂಮಿಗೆ ಬಂದು ಗಬ ಗಬ ತಿಂದಾಗ ಅವರನ್ನು ಕಾಡುತ್ತಿದ್ದ ‘ಮಧು ಮೇಹದ ‘ಕಹಿ’ ಅರ್ಥವಾಗಿ ಬೇಸರವಾಯಿತು. ಅವರು ತಮ್ಮ ಆರೋಗ್ಯವನ್ನು ಸಾಕಷ್ಟು ಅಲಕ್ಷ್ಯ ಮಾಡಿದರು. ಗೆಳೆಯರೊಂದಿಗೆ ಓಡಾಟ,ಹರಟೆ ಮತ್ತು ಬೈಟಕ್ ತುಂಬಾ ಪ್ರಿಯವಾದ ಕೆಲಸಗಳು. ಅವರು ತುಂಬಾ ಸುದೈವಿ ವ್ಯಕ್ತಿ. ಅಪಾರ ಜನಪ್ರಿಯತೆ,ಗೆಳೆಯರು ಮತ್ತು ಅಸ್ಮಿತೆಯನ್ನು ಬೇಗ ಪಡೆದುಕೊಂಡರು. ವೇಗದ ಬದುಕಿನಲ್ಲಿ ಅಷ್ಟೇ ವೇಗವಾಗಿ ಆರೋಗ್ಯವನ್ನು ಕಳೆದುಕೊಂಡರು.

ಕೊರೋನಾ ಕಾಲದಲ್ಲಿ ಕಳೆದು ಹೋದಿರೆಲ್ಲ ಎಂಬ ವ್ಯಥೆ. ಕ್ರಾಂತಿ ಹಾಡುಗಳ ಧ್ವನಿಯ ಕಂಪನದಲ್ಲಿ,ಇಂಪಾಗಿ, ನಮ್ಮ ಮನದೊಳಗೆ ಸದಾ ಸುತ್ತುತ್ತಾ ಇರುತ್ತೀರಿ.

ಪ್ರೊ.ಸಿದ್ದು ಯಾಪಲಪರವಿ ಕಾರಟಗಿ. 9448358040.

error: