April 28, 2024

Bhavana Tv

Its Your Channel

ನಿತ್ಯ ಅಪ್ಪನ ದಿನಾಚರಣೆ ಮತ್ತು ಮಕ್ಕಳು

ಅಪ್ಪನ ದಿನಾಚರಣೆ ಮುಗಿದಿದೆ, ದಿನಾಲೂ ಅಪ್ಪ-ಮಕ್ಕಳ ದಿನಾಚರಣೆ ನಿತ್ಯ ಸಾಗಿರುತ್ತದೆ.
ಈಗೀಗ ಅಪ್ಪನ ಬಗ್ಗೆ ಬರೆಯೋದು ಕಷ್ಟ ಅನಿಸುತ್ತದೆ.ಸಹನೆಯಿಂದ ಬದುಕಿ ಕಾಲನ ಕರೆಗೆ ಓಗೊಟ್ಟು ಹೋದವರ ಕತೆ ಇಷ್ಟೇನಾ!
ಸಿರಿವಂತನಾಗಿ ಹುಟ್ಟಿದವರಿಗೆ ಕಷ್ಟ ಬಂದರೆ ಬದುಕು ಅಸಹನೀಯ ಆದರೂ ಅದನ್ನು ಲೆಕ್ಕಿಸದೇ ಹೊಸ ರೀತಿಯಲ್ಲಿ ನಿರ್ಲಿಪ್ತವಾಗಿ ಬಾಳಿದ ರೀತಿ ನಮ್ಮಿಂದ ಅಸಾಧ್ಯ. ಸಹನೆ ಮತ್ತು ತ್ಯಾಗದ ಪ್ರತಿಫಲವನ್ನು ನಾವು ಅನುಭವಿಸುತ್ತೇವೆ.
ಅವರು ಸಹಿಸಿಕೊಂಡು ಉಳಿಸಿದ ಭೌತಿಕ ಮತ್ತು ಮಾನಸಿಕ ಸಂಪತ್ತಿನ ವಾರಸುದಾರರು ನಾವು.ಅದನ್ನು ಹಂಚಿಕೊAಡು ಬದುಕುವ ನಮ್ಮ ಅಹಮಿಕೆಗೆ ನಾಚಿಕೆ,ಸಂಕೋಚ ಯಾವುದು ಇರುವುದಿಲ್ಲ.
ವಿದ್ಯೆ,ದುಡಿಮೆ ಮತ್ತು ಅವಕಾಶಗಳಿದ್ದರೂ ನಿರೀಕ್ಷೆ ಮಾಡಿದ ಯಶಸ್ಸು ಸಿಗದಾದಾಗ ಹಿರಿಯರ ಕೋಟೆಗೆ ಲಗ್ಗೆ ಹಾಕುವ ಅನಿವಾರ್ಯ ಪರಿಸ್ಥಿತಿ.ಆಧುನಿಕ ಬದುಕು ನಮಗೆ ಒಮ್ಮೊಮ್ಮೆ ದುಬಾರಿ ಎನಿಸುತ್ತದೆ.
ಕಂತುಗಳ ಹೊಂದಾಣಿಕೆಯಲ್ಲಿ ಕಳೆದು ಹೋಗುತ್ತೇವೆ.
ಆರ್ಥಿಕ ಶಿಸ್ತು ಅಸಾಧ್ಯವಾಗುತ್ತದೆ.ಕಾರಣ ಹಾಸಿಗೆ ಇದ್ದಷ್ಟು ಕಾಲು ಚಾಚುವುದಿಲ್ಲ ನಾವು, ಹಾಸಿಗೆ ದೊಡ್ಡದು ಮಾಡುವ ಪ್ರಯತ್ನ ಮಾಡದಷ್ಟು ಕಳೆದು ಹೋಗುತ್ತೇವೆ. ಹಾಗಂತ ಐಷಾರಾಮಿ ಜೀವನವೂ ಅಲ್ಲ.ಒದ್ದಾಟವೂ ನಿಲ್ಲಲ್ಲ.
ಇಷ್ಟೊಂದು ಹೇಳಲು ಕಾರಣವಿಷ್ಟೆ ಅಪ್ಪ, ತಾತನಿಂದ ಬಳುವಳಿಯಾಗಿ ಬಂದ ಆಸ್ತಿಯನ್ನು ಕಷ್ಟಪಟ್ಟು ಜತನ ಮಾಡಿಕೊಂಡು ನಮಗಾಗಿ ಇಟ್ಟು ಹೋಗಿದ್ದಾನೆ.ಹಾಗೆ ಜತನ ಮಾಡುವಾಗ ತನ್ನ ಎಲ್ಲ ಆಸೆ,ಆಮಿಷಗಳನ್ನು ಅದುಮಿಟ್ಟುಕೊಂಡು ಹೋಗಿದ್ದಂತು ನಿಜ.ಆದರೆ ಅವರ ವಾರಸುದಾರರಾದ ನಾವು ಅವರ ಹೆಸರು ಉಳಿಸುವ ಕೆಲಸ ಮಾಡಬಹುದಾ? ಎಂಬ ಪ್ರಶ್ನೆ ಕಾಡುತ್ತದೆ.
ಇಪ್ಪತ್ತೊಂದನೇ ಶತಮಾನದಲ್ಲಿನ ನಾವು, ಅಪ್ಪ ಗಳಿಸಿದ್ದನ್ನು ಉಳಿಸಿಕೊಂಡು ಹೋಗುವ ಯೋಗ್ಯತೆ ಕಳೆದು ಕೊಳ್ಳಲು ಹಲವಾರು ಕಾರಣಗಳು ಇರಬಹುದು. ಆದರೆ ಅಪ್ಪ ಮಾತ್ರ ವ್ಯಾಮೋಹದಿಂದ ತನ್ನ ಸಣ್ಣಪುಟ್ಟ ಆಸೆಗಳನ್ನು ಅದುಮಿಟ್ಟುಕೊಂಡದ್ದು ಮಾತ್ರ ನಿಜ.ಕೊನೆಯ ದಿನಗಳಲ್ಲಿ ತೆಗೆಸಿಟ್ಟಿದ್ದ ಪಾಸ್‌ಪೋರ್ಟ್, ಕಾರು ತೆಗೆದುಕೊಂಡು ದೇವಸ್ಥಾನಗಳಿಗೆ ತಿರುಗಾಡಬಹುದೆಂಬ ಕನಸು ನನಸಾಗಲಿಲ್ಲ.
ಇತ್ತೀಚೆಗೆ ಸೋದರ ಊರಲ್ಲಿ ಕಾರು ತಂದು ಮನೆ ಮುಂದೆ ನಿಲ್ಲಿಸಿದಾಗ,ಮೊನ್ನೆ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ ಆದಾಗ ಅಪ್ಪ ಅಂತರAಗದಲ್ಲಿ ಅವಿತು ಕೊಂಡಿದ್ದನು.
ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಅಪ್ಪನ ಹೆಸರಿನಲ್ಲಿ ಪರಿಷತ್ತಿನ ಸಾಹಿತ್ಯ ಭವನ ಕಟ್ಟಲು ಭೂಮಿ ನೀಡುವ ನಿರ್ಧಾರ ಪ್ರಕಟಿಸಿದಾಗ ಅಪ್ಪನ ಸಮಕಾಲೀನರು ನಮಗಿಂತ ಹೆಚ್ಚು ಸಂಭ್ರಮ ಪಟ್ಟರು. ನಾವು ಅವರ ಹೆಸರು ಉಳಿಸಲಿ ಎಂದು ಮಾತ್ರ ಬಯಸಿದ್ದರು.ನಾವು ಕೊಂಚ ಉದಾರಿಗಳು ಎಂಬ ಹೆಗ್ಗಳಿಕೆ ಗಳಿಸಿಕೊಂಡೆವು.
ಆದರೆ ಈಗಿನ ಕಾಲಮಾನದಲ್ಲಿ ಮಕ್ಕಳಿಂದ ಹಾಗೆ ಯಾವುದೇ ರೀತಿಯ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ.ಈಗ ನಾವು ಅಪ್ಪಂದಿರಾಗಿದ್ದೇವೆ.ನಮ್ಮ ಮಕ್ಕಳು ಮುಂದೆ ಇನ್ನೂ ಅನೇಕ ಸವಾಲುಗಳನ್ನು ಎದುರಿಸುವ ಕಾಲ ಬರಬಹುದು. ಈ ಜನರೇಶನ್ ಗ್ಯಾಪ್ ತಂದೊಡ್ಡುವ ಸವಾಲುಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.’ಅಯ್ಯೋ ಕಾಲ ಬದಲಾಯಿತು, ಕೆಟ್ಟು ಹೋಯಿತು’ ಎಂದು ಗೊಣಗುವಂತಿಲ್ಲ.
ಬದಲಾಗುವ ಕಾಲಮಾನದಲ್ಲಿ ನಾವು ಹೊಂದಿಕೊಳ್ಳಬೇಕು.ವಯಸ್ಸಾಯಿತು ಎಂದು ಹೇಳುತ್ತ ಹೊಸ ತಲೆಮಾರಿನ ಮಕ್ಕಳ ಮುಂದೆ ಗೊಣಗಬಾರದು.ಅನಾವಶ್ಯಕ ಕಿಟಿಕಿಟಿ ಮಾಡಬಾರದು. ನಮ್ಮ ಕನಸುಗಳು ನಮಗೆ ಮಾತ್ರ ಇರಲಿ.ಮಕ್ಕಳು ನಾವು ಅಂದುಕೊAಡ ಕನಸುಗಳ ನನಸು ಮಾಡಲಿ ಎಂಬ ಭ್ರಮೆ ಸರಿಯಲ್ಲ. ಇರುವಷ್ಟು ದಿನ ನಾವು ಅಂದುಕೊAಡ ಕೆಲಸಗಳನ್ನು ಪೂರೈಸಬೇಕು. ಅನೇಕ ದೊಡ್ಡವರ ಮಕ್ಕಳ ವಾಸ್ತವ ಬದುಕು ನಮಗೆ ಪಾಠವಾಗಬೇಕು.
ಅಪ್ಪನ ಸಿದ್ಧಾಂತಗಳನ್ನು ಮೂಲೆಗೆ ಒತ್ತಿ ತಮಗೆ ಸರಿ ಕಂಡAತೆ ಬದುಕುವ ಬೇಜವಾಬ್ದಾರಿ ಮಕ್ಕಳನ್ನು ನೋಡಿದ್ದೇವೆ ಹಾಗೆಯೇ ಪಾಲಕರ ಹೆಸರು ಮತ್ತು ನೆರವಿಲ್ಲದೇ ಅದ್ಭುತವಾದದ್ದನ್ನು ಸಾಧಿಸಿದ ಮಕ್ಕಳನ್ನು ನೋಡುತ್ತಿದ್ದೇವೆ.ನಾವು ಯಾವ ಕೆಟಗರಿಗೆ ಸೇರಿದ ಮಕ್ಕಳು ಅಥವಾ ಪಾಲಕರು ಎಂಬುದನ್ನು ತೂಗಿ ನೋಡಿ ಮೌನವಾಗಿ ಸಾಗಬೇಕು.
ಭಾವನಾತ್ಮಕ ಅಲೆಗಳ ಮೇಲೆ, ವಾಸ್ತವದ ದೋಣಿಯಲ್ಲಿ ಪಯಣಿಸುವ ಹೊತ್ತಿನಲ್ಲಿ, ಅಪ್ಪನ ದಿನಾಚರಣೆ ಮುಗಿದ ನೆಪದಲ್ಲಿ ಒಂದಿಷ್ಟು ಆತ್ಮಾವಲೋಕನ ಮಾಡಿಕೊಂಡೆ. ಅಪ್ಪ, ಮಕ್ಕಳ ಸಂಬAಧ ಗೋಜು ಗೋಜುಲಾದ ಹೊತ್ತಲ್ಲಿ ಅಷ್ಟೇ ಕೃತಕವಾಗಿ ದಿನಾಚರಣೆಗಳು ಸಾಗಿಯೇ ಇರುತ್ತವೆ.
ಅಪ್ಪನ ಹೆಸರು ಉಳಿಸದ ಶ್ರೀಮಂತ ಉಂಡಾಡಿ ಮಕ್ಕಳು, ಮಹತ್ವವಾದ ಗುರಿ ತಲುಪಿದ ಶ್ರಮಿಕರ ಮಕ್ಕಳು, ಎಲ್ಲರೂ ಮಕ್ಕಳೇ.ಆದರೆ ಅವರ ಸಾಧನೆ ಮಾತ್ರ ಸಮಾಜದ ಮೇಲೆ ತೀವ್ರ ಪ್ರಭಾವ ಬೀರುವುದಂತೂ ಸತ್ಯ. ಅಪ್ಪನ ದಿನಾಚರಣೆಯನ್ನು ಅಪ್ಪಂದಿರಾಗುವ ಮಕ್ಕಳು, ಅಪ್ಪಂದಿರಾದ ದೊಡ್ಡ ಮಕ್ಕಳು, ಅನುಭವಿಸಿ,ಪರಾಮರ್ಶೆ ಮಾಡಿ ಖುಷಿ ಪಡಲೇಬೇಕು.
ಸಿದ್ದು ಯಾಪಲಪರವಿ ಕಾರಟಗಿ.

error: