December 19, 2024

Bhavana Tv

Its Your Channel

ಬದುಕಿನ ವಾಸ್ತವತೆ ಪರಿಚಯಿಸುವ “ಡೋಂಟ್ ಬಿ ಹ್ಯಾಪಿ”ಕೃತಿ

              ಏನಿದು ಪುಸ್ತಕದ ಶೀರ್ಷಿಕೆಯೇ ಕುತೂಹಲಕಾರಿಯಾಗಿದೆ ಅಲ್ಲವೇ ನಿಜ, ಮೊಟ್ಟಮೊದಲು ಈ ಪುಸ್ತಕ ನನ್ನ ಕೈಸೇರಿದಾಗ ಕುತೂಹಲ ಮತ್ತು ರೋಮಾಂಚನಕಾರಿ ಅನಿಸಿತು ಆದಷ್ಟು ಬೇಗ ಈ ಪುಸ್ತಕವನ್ನು ಓದಿ ಇದರಲ್ಲಿಯ ಅಂತರಾಳವನ್ನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಇಮ್ಮಡಿಯಾಯಿತು. ಜೀವನಶೈಲಿಯ ತರಬೇತುದಾರರು ಲೈಫ್ ಗುರು ಖ್ಯಾತಿಯ ಚಿಂತಕರಾದ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿತ್ವ ವಿಕಸನ ತರಬೇತುದಾರರಾದ ನನ್ನ ಮೆಂಟರ್ ಹಾಗೂ ವಿದ್ಯಾ ಗುರುಗಳಾದ ಪ್ರೊಫೆಸರ್ ಸಿದ್ದು ಯಾಪಲಪರವಿ ಅವರು ಬರೆದ ವಿಶೇಷ ಹಾಗೂ ವಿಶಿಷ್ಟವಾದ “ಡೋಂಟ್ ಬಿ ಹ್ಯಾಪಿ” ಕೃತಿ ಸಹೃದಯ ಓದುಗರ ಭಾವನೆಗಳಿಗೆ ಸಕಾರಾತ್ಮಕ ಚೈತನ್ಯವನ್ನು ತುಂಬುವ ಅತ್ಯದ್ಭುತವಾದ ಪುಸ್ತಕವಾಗಿದೆ. ಬಿ ಹ್ಯಾಪಿ ಎಂದು ಎಲ್ಲರೂ ಹೇಳುತ್ತಾರೆ ಏನಿದು ಡೋಂಟ್ ಬಿ ಹ್ಯಾಪಿ ಎಂದು ಹೇಳುತ್ತಾರಲ್ಲ ಅನಿಸಬಹುದು ಆದರೆ ನಮ್ಮದೇ ಬಾಳಪಯಣದಲ್ಲಿ ನಮಗರಿವಿಲ್ಲದೆ ನಮ್ಮೊಳಗೆ ನಾವು ಕಳೆದುಹೋಗುವ ವಾಸ್ತವ ಚಿತ್ರಣವನ್ನು “ನಿರ್ಭಯ” “ನಿರಾಕರಣೆ” “ನಿರ್ಲಿಪ್ತತೆ”ಎನ್ನುವ ಮೂರು ಪರಿಕಲ್ಪನೆಯಲ್ಲಿ ಒಟ್ಟು 41 ಲೇಖನಗಳನ್ನು ಎಲ್ಲರ ಮನ ಮುಟ್ಟುವಂತೆ worry  ಹಾಗೂ happiness  ಎರಡು ನಮ್ಮ ಜೀವನದಲ್ಲಿ ಶಾಶ್ವತವಾದವುಗಳಲ್ಲ ಇವೆರಡನ್ನು ನಾವು ನಿರ್ಲಿಪ್ತವಾಗಿ ಅನುಭವಿಸುತ್ತಾ ಸಾಗಿದಾಗ ಮಾತ್ರ ವಾಸ್ತವ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ವಿಚಾರಧಾರೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.

          ಈ ಪುಸ್ತಕದ ಅಂತರಾಳದಲ್ಲಿಯ 41 ವಿಶಿಷ್ಟ ವಿಭಿನ್ನ ವೈಚಾರಿಕ ಲೇಖನಗಳನ್ನು ಅವಲೋಕಿಸಿದಾಗ ಮನುಷ್ಯ, ಎಂತಹದೆ ಸಂದಿಗ್ಧ ಪರಿಸ್ಥಿತಿ ಎದುರಾದಾಗ ನಿರ್ಭಯನಾಗಿ ಕೆಲವೊಂದನ್ನು ನಿರಾಕರಿಸುತ್ತಾ ನಿರ್ಲಿಪ್ತ ಮನೋಭಾವನೆಯಿಂದ ಸಾಗಬೇಕು ಎನ್ನುವ ಒಳ ಧ್ವನಿ ಕೇಳಿಸುತ್ತದೆ. ಲೇಖಕರು ಈ ಪುಸ್ತಕದ ಮೊದಲ ಪರಿಕಲ್ಪನೆಯಾದ ನಿರ್ಭಯ ಪರಿಕಲ್ಪನೆಯಲ್ಲಿ ಪ್ರತಿಯೊಂದು ರಂಗದ ಮುಂಚೂಣಿ ನಾಯಕರಿಗೆ ಮೆಂಟರ್ ಅನಿವಾರ್ಯ ಮತ್ತು ಅಗತ್ಯ ಇಲ್ಲದೆ ಹೋದರೆ ಗುರಿಸಾಧನೆ ಮಂದವಾಗುತ್ತದೆ ಮಾಯವಾಗುತ್ತದೆ. ನಮ್ಮ ಕನಿಷ್ಠ ಮಿತಿ ಮತ್ತು ಸಾಮರ್ಥ್ಯ ನಮಗೆ ಗೊತ್ತಿರಬೇಕು. ಪ್ರತಿಯೊಬ್ಬ ವ್ಯಕ್ತಿ ಸಂಸ್ಥೆ ದೇಶ ಮತ್ತು ಒಂದು ವ್ಯವಸ್ಥೆ ಹೊಂದಿರಬಹುದಾದ strength weakness opportunity  and challenges(SWOC) ತಿಳಿದು ನಮ್ಮ ಚಟುವಟಿಕೆಗಳನ್ನು ಮಾಡಬೇಕು ಅಂದಾಗ ಮಾತ್ರ ಜಾಯ್ ಪುಲ್ ಲಿವಿಂಗ್ ಸಾಧ್ಯವಾಗುತ್ತದೆ. ಆರ್ಟ್ ಆಫ್ ಲಿವಿಂಗ್ ಸೂತ್ರವನ್ನು ಮೊಟ್ಟಮೊದಲು ಹೇಳಿಕೊಟ್ಟ ಬುದ್ಧ ನಮ್ಮ ನಗು ಸಹನೆ ಮತ್ತು ಯಶಸ್ಸಿನಲ್ಲಿ ಅಡಗಿ ಕುಳಿತು ನಮ್ಮಲ್ಲಿ ಚೈತನ್ಯವನ್ನು ತುಂಬುತ್ತಾನೆ. ಶ್ರೀಕೃಷ್ಣನ ಜಾಣ್ಮೆ ಬುದ್ಧನ ಸಹನೆ ಅಲ್ಲಮನ ವೈರಾಗ್ಯ ನಮ್ಮೆಲ್ಲರ ಬದುಕಿಗೆ ಅತ್ಯಂತ ಪರಿಣಾಮಕಾರಿ ಸಂಗತಿಗಳಾಗಿವೆ ಎಂಬ ಅಂಶವನ್ನು  ಲೇಖಕರು ಬಹಳಷ್ಟು ವೈಚಾರಿಕವಾಗಿ ಪ್ರಸ್ತುತಪಡಿಸಿದ್ದಾರೆ.

         ಆತ್ಮೀಯರ ಅಂತರಂಗ ಕೇಳಿಸಲಿ ,ಸುಪ್ತಮನಸ್ಸಿನ ಚೈತನ್ಯ , ಒಂಟಿತನ ಹಿಂಸೆ ಮತ್ತು ಖಿನ್ನತೆ ,ಆಸೆ ಮತ್ತು ಮನದ ವಿಚಿತ್ರ ವ್ಯಾಪಾರಗಳು, ಮನಸೆಂಬ ಮಾಯೆಗೆ ಲಗಾಮು ಹಾಕೋಣ, ಮನುಷ್ಯ ಮತ್ತು ಆರ್ಥಿಕ ತಲ್ಲಣ, ಸಂಶಯ ಕೇವಲ ಅವಮಾನವಲ್ಲ ಅದು ನಮ್ಮಅವಸಾನ ಎಂದು ಹೇಳುವ ಮನೋವೈಜ್ಞಾನಿಕ ಲೇಖನಗಳು ನಮ್ಮೊಳಗಿನ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬುವಲ್ಲಿ ಸಹಾಯಕವಾಗಿವೆ.

         ಇನ್ನು “ನಿರಾಕರಣೆ” ಎಂಬ ಪರಿಕಲ್ಪನೆಯಲ್ಲಿ ಡ್ರೆಸ್ ಕೋಡ್ ಎಂಬ ಆಕರ್ಷಣೆ ನಮ್ಮನ್ನು ಸೆಳೆಯುವಲ್ಲಿ ಅದರ ಪಾತ್ರ, ಮೊಬೈಲ್ ಎಂಬ ಮಾಯಾವಿ ಯ ಸೆಳೆತ, ಸಂಬಂಧಗಳ ನಿರ್ವಹಣೆ ಹೇಗೆ, ರೋಮ್ಯಾಂಟಿಕ್ ಆದರೂ ಸಹ ಫ್ಲರ್ಟ್ ಮಾಡುವುದು ಬೇಡ,ಹತಾಶೆ ಆತಂಕ ಏಕಾಂತದಲ್ಲಿ ಎಲ್ಲವೂ ಕರಗಿ ಹೋಗಲಿ ,ದೇಹವೆಂಬ ದೇವಾಲಯಕ್ಕೆ ನಮ್ಮಲ್ಲಿರುವ ಶಿಸ್ತು ಕಳಶಪ್ರಾಯವಾಗಿರಲಿ, ನಮ್ಮ ಪರಿಣಾಮಕಾರಿ ಕಾರ್ಯ ವಿಧಾನ ಹೇಗಿರಬೇಕು, ಇಲ್ಲಸಲ್ಲದ ನಕಾರಾತ್ಮಕ ಮಾತುಗಳಿಗೆ ಎಂದು ಕಿವಿಗೊಡಬೇಡಿ, ವಿನೋದ ಸಲಿಗೆಗೂ ನಮ್ಮಲ್ಲಿ ಇತಿ ಮಿತಿ ಇರಲಿ ಎಂದು ಹೇಳುವ ಲೇಖಕರ ಕಿವಿಮಾತುಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ.

           ನಿರ್ಲಿಪ್ತ ಮನೋಭಾವನೆ ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಎನ್ನುವ ವಿಚಾರ ದಾರೆಯಲ್ಲಿ ಒಳ್ಳೆಯ ಮಗ ಆಗದಿದ್ದರೂ ಒಳ್ಳೆಯ ಅಪ್ಪ ಆಗಬೇಕು ಎನ್ನುವ ಸಂದೇಶ, ಪ್ರೀತಿಯೆಂಬ ಹಾಲಿಗೆ ವಿಶ್ವಾಸದ ಜೇನಹನಿ ಬಹುಮುಖ್ಯ ಎನ್ನುವ ಕಾಳಜಿ ,ಸಾರ್ವಜನಿಕ ಜೀವನದಲ್ಲಿ ನಮ್ಮ ನುಡಿ ಹೇಗಿರಬೇಕು ಎನ್ನುವ ಮಾರ್ಗದರ್ಶಿ ಸೂತ್ರಗಳು, ಮುಂದೆ ಗುರು ಇದ್ದರೆ ಗುರಿಯಲ್ಲೆಡೆ ಇರುತ್ತದೆ ಎನ್ನುವ ಮನೋಜ್ಞ ಮಾತುಗಳು ನಮ್ಮೊಳಗಿನ ಅಂತರಾತ್ಮವನ್ನು ಜಾಗೃತಗೊಳಿಸುತ್ತವೆ.

         ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಮ್ಮ ವಿವೇಚನೆ ಹೇಳುತ್ತಲೇ ಇರುತ್ತದೆ ಆದರೆ ನಾವು ವಿವೇಚನೆಯ ಮಾತನ್ನು ಆಲಿಸದೆ ನೆಗೆಟಿವ್ ಆಲೋಚನೆಗಳಿಗೆ ಸಿಕ್ಕು ಪರಿತಪಿಸುತ್ತೇವೆ. ಗೊತ್ತಿದ್ದು ಮಾಡುವ ತಪ್ಪಿಗೆ ಕ್ಷಮೆ ಎಂಬುದಿರುವುದಿಲ್ಲ. ಪ್ರತಿನಿತ್ಯ ಬೇಕು-ಬೇಡ ಮತ್ತು ಒಳಿತು-ಕೆಡುಕುಗಳ ಸಂಘರ್ಷದ ಮಧ್ಯೆ ವಾಸ್ತವದ ಎಚ್ಚರ  ಪ್ರಜ್ಞೆ ಇಟ್ಟುಕೊಂಡು ಸಾಗಿದಾಗ ಕಡಿಮೆ ದುಃಖವಾಗುತ್ತದೆ. ವಾಸ್ತವವನ್ನು ಯಥಾವತ್ತಾಗಿ ಸ್ವೀಕರಿಸಿದಾಗ ಮಾತ್ರ ಬದುಕು ಕೊಂಚ

ಸನಿಹವೆನಿಸುತ್ತದೆ ಎಂದು ಹೇಳುವ ಲೇಖಕರ ವೈಚಾರಿಕ ನೆಲೆಗಟ್ಟಿನ ವಿಚಾರಧಾರೆಗಳು ನಿಜಕ್ಕೂ ನಮ್ಮೆಲ್ಲರ ಬದುಕ ಹಾದಿಗೆ ಸಕಾರಾತ್ಮಕ ಚೈತನ್ಯವನ್ನು ತುಂಬುವುದರಲ್ಲಿ ಎರಡು ಮಾತಿಲ್ಲ.
‌ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿ ಯವರಿಂದ ಪ್ರಕಾಶನ ಗೊಂಡ ಸ್ವಯಂ ಶಿಲ್ಪಿ ಪ್ರೊ ಸಿದ್ದು ಯಾಪಲಪರವಿಯವರ “ಡೋಂಟ್ ಬಿ ಹ್ಯಾಪಿ” ಕೃತಿ ನಮ್ಮನ್ನು ಹ್ಯಾಪಿ ಆಗಿಡಲು ಸರಳ ಸೂತ್ರಗಳನ್ನು ತಿಳಿಸುವ ಹಾಗೂ ವಿಶಿಷ್ಟ ಶೈಲಿಯಲ್ಲಿ ಸರಳವಾಗಿ ಓದುಗರಲ್ಲಿ ಅರ್ಥಪೂರ್ಣ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಉಪಯುಕ್ತವಾದ ಕೃತಿಯೇ “ಡೋಂಟ್ ಬಿ ಹ್ಯಾಪಿ”. ಸಹೃದಯ ಓದುಗರೇ ಮತ್ತಿನ್ನಿಕೆ ಕಾಯುವಿರಿ ಬೇಗ ಓದಿಬಿಡಿ ಇದನ್ನೊಮ್ಮೆ. ನಮ್ಮೊಳಗೆ ಅಡಗಿ ಕುಳಿತ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಲಿದೆ ಈ ಜ್ಞಾನದ ಭಂಡಾರ.

ಪ್ರೊ ಸುಧಾ ಹುಚ್ಚಣ್ಣವರ
ಉಪನ್ಯಾಸಕರು ಹಾಗೂ ಲೇಖಕರು
ಶಿರಹಟ್ಟಿ.

error: