May 5, 2024

Bhavana Tv

Its Your Channel

ಕೊರೊನಾ ಪರೀಕ್ಷೆಗೆ ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ : ಖಾಸಗಿ ಲ್ಯಾಬ್ ಗಳಿಗೆ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ.

ಬೆಂಗಳೂರು: ಕೋವಿಡ್ 19 ಪರೀಕ್ಷೆ ನಡೆಸುವ ಖಾಸಗಿ ಪ್ರಯೋಗಾಲಯಗಳು ಮನಬಂದಂತೆ ದರ ವಿಧಿಸುತ್ತಿವೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಪ್ರಯೋಗಾಲಯಗಳಲ್ಲಿನ ಕೋವಿಡ್ ಪರೀಕ್ಷೆ ದರಗಳನ್ನು ಪರಿಷ್ಕರಣೆ ಮಾಡಿದೆ. ಸರ್ಕಾರ ನಿಗದಿಪಡಿಸಿದ ಗರಿಷ್ಠ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

‘ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್-19 ಪರೀಕ್ಷೆಗೆ ನಿಗದಿಪಡಿಸಲಾಗಿದ್ದ ದರಗಳನ್ನು ತಾಂತ್ರಿಕ ಸಲಹಾ ಸಮಿತಿ ಮರುಪರಿಶೀಲಿಸಿದ್ದು, ಪರಿಷ್ಕೃತ ದರಪಟ್ಟಿಯನ್ನು ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರ ನಿಗದಿ ಮಾಡಿರುವ ಗರಿಷ್ಠ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ಲ್ಯಾಬ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಮಾದರಿಗಳ ಸಂಗ್ರಹ, ಪರೀಕ್ಷೆ ಲ್ಯಾಬ್‌ಗೆ ಸರ್ಕಾರಿ ಮತ್ತು ಖಾಸಗಿ ಮಾದರಿಗಳ ರವಾನೆಗೆ 400 ರೂ ಗರಿಷ್ಠ ದರ ನಿಗದಿಪಡಿಸಲಾಗಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಸರ್ಕಾರಿ ಶಿಫಾರಸಿನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ 800 ರೂ. ನಿಗದಿಗೊಳಿಸಲಾಗಿದೆ.

ಖಾಸಗಿ ಲ್ಯಾಬ್‌ಗಳಿಗೆ ಖಾಸಗಿಯಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾದರಿಗಳನ್ನು ನೀಡಿದರೆ ರೂ. 1,200, ಮನೆಯಲ್ಲಿ ಮಾದರಿಗಳನ್ನು ಲ್ಯಾಬ್‌ಗಳು ಸಂಗ್ರಹಿಸಿ ಖಾಸಗಿ ಲ್ಯಾಬ್‌ಗಳಲ್ಲಿಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲು 1,600 ರೂ., ಖಾಸಗಿ ಲ್ಯಾಬ್‌ಗಳಲ್ಲಿ ಟಿಆರ್‌ಯುಎನ್‌ಎಟಿ ಪರೀಕ್ಷೆಗೆ ಖಾಸಗಿಯಾಗಿ ಮಾದರಿಗಳನ್ನು ನೀಡಿದಾಗ 2,200 ರೂ ಗರಿಷ್ಠ ದರ ವಸೂಲಿಗೆ ಸೂಚಿಸಲಾಗಿದೆ.

ಲ್ಯಾಬ್‌ಗಳು ಮನೆಯಲ್ಲಿ ಮಾದರಿ ಸಂಗ್ರಹಿಸಿ ಖಾಸಗಿ ಲ್ಯಾಬ್‌ಗಳಿಗೆ ಖಾಸಗಿಯಾಗಿ ಮಾದರಿಗಳನ್ನು ನೀಡಿದ ಟಿಆರ್‌ಯು-ಎನ್‌ಎಟಿ ಪರೀಕ್ಷೆಗಳ ಸಂದರ್ಭದಲ್ಲಿ 2,600 ರೂ. ದರ ವಿಧಿಸಬಹುದಾಗಿದೆ. ಖಾಸಗಿ ಲ್ಯಾಬ್‌ಗಳಲ್ಲಿ ನೀಡಲಾದ ಸಿಬಿ ಎನ್‌ಎಎಟಿ ಪರೀಕ್ಷೆಗೆ 3,800 ರೂ ದರ, ಮನೆಯಲ್ಲಿ ಸಂಗ್ರಹಿಸಿದ ಖಾಸಗಿ ಲ್ಯಾಬ್‌ಗಳ ಸಿಬಿ ಎನ್‌ಎಎಟಿ ಪರೀಕ್ಷೆಯಲ್ಲಿ 4,200 ರೂ. ದರ ಪಡೆದುಕೊಳ್ಳಬಹುದಾಗಿದೆ.

ಇನ್ನು ಖಾಸಗಿ ಲ್ಯಾಬ್‌ಗಳಲ್ಲಿ ನಡೆಸುವ ರಾಪಿಡ್ ಆಂಟಿಜೆನ್ ಪರೀಕ್ಷೆ/ ಎಲಿಸಾ ಪರೀಕ್ಷೆಗೆ 500 ರೂ. ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಖಾಸಗಿಯಾಗಿ ನೀಡಲಾದ ಮಾದರಿಗಳ ರಾಪಿಡ್ ಆಂಟಿಜೆನ್ ಪರೀಕ್ಷೆಗೆ 700 ರೂ ದರ ವಿಧಿಸಬಹುದಾಗಿದೆ.

source:Oneindia

error: