May 5, 2024

Bhavana Tv

Its Your Channel

ರಾಜ್ಯೋತ್ಸವ ಆಚರಣೆ: ಮೆರವಣಿಗೆ ನಡೆಸುವಂತಿಲ್ಲ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.

ಬೆಂಗಳೂರು, : ಕೊರೊನಾ ವೈರಸ್ ಆತಂಕದ ಮಧ್ಯೆ ರಾಜ್ಯೋತ್ಸವ ಆಚರಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ 100 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಹಾಗೂ ಯಾವುದೇ ಮೆರವಣಿಗೆ ನಡೆಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ ಮಾರ್ಗ ಸೂಚಿ ಅನ್ವಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ರಾಜ್ಯೋತ್ಸವ ಆಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ನವೆಂಬರ್ 1 ರಂದು ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಕಾರ್ಯಕ್ರಮ ನಡೆಸುವ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತ ಕಾಯ್ದುಕೊಂಡು ಸ್ಯಾನಿಟೈಸರ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಡೆಸುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ರಾಜ್ಯೋತ್ಸವದ ಆಚರಣೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಉಂಟಾಗಲು ಗೌರವ ಪೂರಕವಾಗಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸಬೇಕು.

ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಕನಿಷ್ಠ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು. ರಾಜ್ಯೋತ್ಸವದ ನಿಮಿತ್ತ ಯಾವುದೇ ಮೆರವಣಿಗೆ ನಡೆಸಲು ಅವಕಾಶವಿಲ್ಲ. ಸಣ್ಣ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಎಚ್ಚರ ವಹಿಸಬೇಕು.

ಖಾಸಗಿ ಸಂಘ ಸಂಸ್ಥೆಗಳು ರಾಜ್ಯೋತ್ಸವ ಆಚರಣೆಗೆ ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

source:Oneindia

error: