April 26, 2024

Bhavana Tv

Its Your Channel

ಆರೋಗ್ಯ ಸೇವೆಗೆ ಸಾರಿಗೆ ಸೌಲಭ್ಯ : ಸಾರಿಗೆ ಸಚಿವ ಲಕ್ಷ್ಮಣ ಸವದಿ

ಕೋವಿಡ್ ೨ನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ವಿಧಿಸಿದ್ದರು ಸಹ ಕೋವಿಡ್ ಗೆ ಸಂಬAಧಪಟ್ಟ ಸೇವಾ ಚಟುವಟಿಕೆಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳ ಸೇವೆಗೆ ಅಗತ್ಯವಾದಲ್ಲಿ ಬಸ್ಸುಗಳನ್ನು ಒದಗಿಸಲು ನಾಲ್ಕೂ ನಿಗಮಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಇಡೀ ರಾಜ್ಯವೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ತುರ್ತು ಸನ್ನಿವೇಶವನ್ನು ಎದುರಿಸುತ್ತಿದೆ. ಆದ್ದರಿಂದ ಸಾರಿಗೆ ನಿಗಮ ಗಳಿಂದಲೂ ಸಹ ಈ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳಿಗೆ ಮತ್ತು ಕೋವಿಡ್ ನಿಯಂತ್ರಣ ಕೆಲಸಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ನಾಲ್ಕೂ ಸಾರಿಗೆ ನಿಗಮಗಳಿಂದ ಅಗತ್ಯಕ್ಕನುಗುಣವಾಗಿ ಬಸ್ಸುಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಆರೋಗ್ಯ ಮತ್ತು ತುರ್ತು ಸೇವೆಗಳಿಗಾಗಿ ಪ್ರತಿನಿತ್ಯ ೧೫೬ ಬಿಎಂಟಿಸಿ ಬಸ್ಸುಗಳನ್ನು ಒದಗಿಸಲಾಗಿದೆ. ಇದರಿಂದಾಗಿ ವಿವಿಧ ಆಸ್ಪತ್ರೆಗಳ ನಡುವೆ ಸಂಪರ್ಕಕ್ಕೆ ಅನುಕೂಲವಾಗಿದೆಯಲ್ಲದೇ ವೈದ್ಯರಿಗೆ , ದಾದಿಯರಿಗೆ, ಪೊಲೀಸರಿಗೆ, ಅಗ್ನಿಶಾಮಕ ದಳದವರಿಗೆ, ನೀರು-ವಿದ್ಯುತ್ ಪೂರೈಕೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಚಾರ ಸೌಲಭ್ಯಕ್ಕೆ ಸಹಾಯಕವಾಗಿದೆ. ಕೆ.ಎಸ್.ಆರ್.ಟಿ.ಸಿ.ಯಿಂದ ಇದೇ ರೀತಿ ಸುಮಾರು ೫೦ ಬಸ್ಸುಗಳು ಸಂಚರಿಸುತ್ತಿವೆ.

ವಾಯವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ನಿಗಮಗಳಿಂದಲೂ ಆಯಾ ಜಿಲ್ಲಾಡಳಿತವು ಮನವಿ ಮಾಡಿಕೊಂಡ ಪ್ರಕಾರ ತುರ್ತು ಸೇವೆಗಾಗಿ ಬಸ್ಸುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಒಂದು ವೇಳೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ಸುಗಳಿಗೆ ಬೇಡಿಕೆ ಬಂದರೆ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಸ್ಸುಗಳನ್ನು ಒದಗಿಸುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರ ಸಾರಿಗೆ ಸಂಚಾರವನ್ನು ನಿಷೇಧಿಸಿರುವುದರಿಂದ ಈ ವಿಶೇಷ ಬಸ್ಸುಗಳ ಸೌಕರ್ಯವೂ ಕೇವಲ ಆರೋಗ್ಯ ಮತ್ತು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸೇವೆ ಸಲ್ಲಿಸುತ್ತಿರುವವರಿಗೆ ಮಾತ್ರ ಸೀಮಿತವಾಗಿದೆ. ಇತರ ಪ್ರಯಾಣಿಕರಿಗೆ ಈ ಬಸ್ ಸೌಲಭ್ಯಗಳು ಇರುವುದಿಲ್ಲ. ಸಾರ್ವಜನಿಕರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ತ ಸಹಕಾರ ನೀಡಬೇಕೆಂದು ಸವದಿಯವರು ಮನವಿ ಮಾಡಿಕೊಂಡಿದ್ದಾರೆ.

ಕಳೆದವರ್ಷ ಕೋವಿಡ್ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಸಾರಿಗೆ ನಿಗಮಗಳ ಬಸ್ಸುಗಳನ್ನೇ ಮೊಬೈಲ್ ಕ್ಲಿನಿಕ್ ಗಳನ್ನಾಗಿ ಮತ್ತು ಕೋವಿಡ್ ಟೆಸ್ಟಿಂಗ್ ವಾಹನಗಳನ್ನಾಗಿ ಮಾರ್ಪಡಿಸಲಾಗಿತ್ತು. ಅಂಥ ಸುಮಾರು ೨೦ ಮೊಬೈಲ್ ಬಸ್ಸುಗಳೂ ಸಹ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಸೇವೆ ಸಲ್ಲಿಸುತ್ತಿವೆ ಎಂದು ಸವದಿಯವರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ವಾರಿಯರ್ಸ್ ಗಳಂತೆಯೇ ಸಾರಿಗೆ ನಿಗಮಗಳ ಸಿಬ್ಬಂದಿಗಳು ಸಹ ಇಂದಿನ ಸಂಕಷ್ಟದ ಕಾಲದಲ್ಲಿ ಸೇವೆಸಲ್ಲಿಸುತ್ತಿರುವುದಕ್ಕೆ ಶ್ರೀ ಸವದಿಯವರು ತಮ್ಮ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ವರದಿ ಮಹೇಶ ಶರ್ಮಾ ಬೆಳಗಾವಿ

error: