May 6, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯ ಜನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರೀಕ್ಷೆಗೆ ತಣ್ಣೀರೆರಚಿದ ಸರ್ಕಾರ

ಉತ್ತರ ಕನ್ನಡ ಜಿಲ್ಲೆಯ ಜನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರೀಕ್ಷೆಗೆ ಸರ್ಕಾರ ಮತ್ತೆ ತಣ್ಣೀರೆರಚಿದೆ. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ ಎಂಬುದು ಬಹಿರಂಗವಾಗಿದೆ. ಇದರಿಂದ ಉತ್ತರ ಕನ್ನಡಿಗರ ಬಹುದಿನದ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆ ಇದ್ದು, ಇಲ್ಲಿನ ಜನ ಮತ್ತೊಂದು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

ಹೌದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಹಣಕಾಸು ವೆಚ್ಚದ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಹೀಗಾಗಿ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಆರೋಗ್ಯ ಇಲಾಖೆ ಉತ್ತರ ನೀಡಿದ್ದು, ಆಸ್ಪತ್ರೆಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಕ್ಕಿಲ್ಲ, ಮತ್ತೆ ಪ್ರಸ್ತಾವನೆ ಸಲ್ಲಿಸೋದಾಗಿ ಆರೋಗ್ಯ ಇಲಾಖೆ ಉತ್ತರಿಸಿದೆ.

ಚಿಕಿತ್ಸೆಗೆಂದು ಉಡುಪಿ ಆಸ್ಪತ್ರೆಗೆ ಅಂಬ್ಯುಲೆನ್ಸ್ನಲ್ಲಿ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಹೊನ್ನಾವರ ಮೂಲದ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಸಾವನ್ನಪ್ಪಿದ್ದರು. ಅದಾದ ಬಳಿಕ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೂಗು ಜೋರಾಗಿದ್ದು, ಟ್ವಿಟರ್ ಅಭಿಯಾನ, ರಕ್ತಪತ್ರ ಚಳುವಳಿ, ಬೃಹತ್ ಪ್ರತಿಭಟನೆ ಸೇರಿ ವಿವಿಧ ರೀತಿಯಲ್ಲಿ ಹೋರಾಟವನ್ನು ಜನ ನಡೆಸಿದ್ದರು.

ಅದಾದ ಬಳಿಕೆ ಖುದ್ದು ಮುಖ್ಯಮಂತ್ರಿಗಳೇ ಜಿಲ್ಲೆಗೆ ಆಗಮಿಸಿ ಆಸ್ಪತ್ರೆ ಘೋಷಣೆ ಮಾಡುವ ಭರವಸೆ ನೀಡಿದ್ದರೂ. ಆದರೆ, ಇದೀಗ ಆರ್ಥಿಕ ಇಲಾಖೆ ಆರೋಗ್ಯ ಇಲಾಖೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕಿದರೆ ಮಾತ್ರ ಜಿಲ್ಲೆಗೆ ಆಸ್ಪತ್ರೆ ಮಂಜೂರಾಗುತ್ತದೆ. ಸರ್ಕಾರದ ಈ ನಿಲುವು ಉತ್ತರ ಕನ್ನಡ ಜಿಲ್ಲೆಯ ಜನರಿಗಷ್ಟೇ ಅಲ್ಲ, ಬಿಜೆಪಿ ಶಾಸಕರಿಗೂ ಬೇಸರ, ಅಸಮಾಧಾನ ಮೂಡಿಸಿದೆ.

ವರದಿ:ನರಸಿಂಹ ನಾಯ್ಕ್ ಹರಡಸೆ

error: