April 18, 2025

Bhavana Tv

Its Your Channel

ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಶಾಸಕ, ಮಾಜಿ ಸಚಿವ ರಘುನಾಥರಾವ ವಿಶ್ವನಾಥರಾವ್ ದೇಶಪಾಂಡೆ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಲಭಿಸಿದೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ನಿನ್ನೆ ಬೆಳಿಗ್ಗೆ ಬೆಳಗಾವಿಯಲ್ಲಿ ವಿಧಾನಸಭೆಯ ಕಲಾಪ ಪ್ರಾರಂಭವಾಗುತ್ತಿದ್ದAತೆಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶಸ್ತಿ ಪ್ರಕಟಿಸಿ, ಆರ್.ವಿ. ದೇಶಪಾಂಡೆ ಅವರ ಸಾಧನೆಗಳನ್ನು ವಿವರಿಸಿದರು.

1947ರಲ್ಲಿ ಜನಿಸಿದ ಆರ್.ವಿ. ದೇಶಪಾಂಡೆ ಅವರು ಬಿ.ಎ., ಎಲ್.ಎಲ್.ಬಿ. ಪದವೀಧರರಾಗಿದ್ದಾರೆ. ಹಳಿಯಾಳದ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ ಆರ್.ವಿ. ದೇಶಪಾಂಡೆ ಅವರು 1983 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾದರು. ಈವರೆಗೆ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಈ ಸದನದಲ್ಲಿ ಹೆಚ್ಚು ಬಾರಿ ಚುನಾಯಿತರಾಗಿರುವ ಹಿರಿಮೆ ಅವರದಾಗಿದೆ. ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಳೆದ ಆರ್.ವಿ. ದೇಶಪಾಂಡೆ ಅವರು ಕನಿಷ್ಠ ಸುಮಾರು 10 ಜನ ಮುಖ್ಯಮಂತ್ರಿಗಳ ಜೊತೆ ಕಾರ್ಯನಿರ್ವಹಿಸಿದ್ದಾರೆ. ಪ್ರತಿಪಕ್ಷದ ನಾಯಕರಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, 2004 ರಲ್ಲಿ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸದನದ ಚೌಕಟ್ಟು ಮೀರದಂತೆ ಮಾತನಾಡುವ ಅನುಭವ, ಜ್ಞಾನ ಅವರಿಗೆ ಇದೆ. ಅವರು ಅತ್ಯುತ್ತಮ ಸಂಸದೀಯ ಪಟು ಮಾತ್ರವಲ್ಲ ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟಿಯಾಗಿ ಹಾಗೂ ಹಳಿಯಾಳದಲ್ಲಿ ತುಳಜಾ ಭವಾನಿ ದೇವಸ್ಥಾನ ನಿರ್ಮಿಸುವ ಮೂಲಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಸೇವೆಗೈಯುತ್ತಿದ್ದಾರೆ. ಕೆನರಾ ಮೆಡಿಕಲ್ ಸೆಂಟರ್ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಹಳಿಯಾಳದ ರುಡ್ ಸೆಟ್ ಸಂಸ್ಥೆಯ ಮೂಲಕ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡಿರುವುದು ಇವರ ಸಮಾಜಮುಖಿ ಕಾರ್ಯಗಳಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಶುಭ ಹಾರೈಸಿದರು.

ವರದಿ:ನರಸಿಂಹ ನಾಯ್ಕ್ ಹರಡಸೆ.

error: