May 19, 2024

Bhavana Tv

Its Your Channel

೧೦ನೇ ಬ್ಯಾಚ್‌ನ ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಪದವಿ ಪ್ರದಾನ ಸಮಾರಂಭ

ಭಟ್ಕಳ: ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ದುರುಳರ ಕಿರುಕುಳಕ್ಕೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಅವರು ತಮ್ಮ ಆತ್ಮ ರಕ್ಷಣೆಗೆ ಕರಾಟೆಯಂತಹ ಕಲೆ ಕಲಿಯುವದು ಅತಿ ಮುಖ್ಯ ಎಂದು ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅಭಿಪ್ರಾಯ ಪಟ್ಟರು.

ಅವರು ಶನಿವಾರ ಭಟ್ಕಳದ ನ್ಯೂ ಇಂಗ್ಲೀಷ ಶಾಲೆಯ ಕಮಲಾವತಿ ಸಭಾಭವನದಲ್ಲಿ ನಡೆದ ೧೦ನೇ ಬ್ಯಾಚ್‌ನ ಕರಾಟೆ ಬ್ಲಾಕ ಬೆಲ್ಟ್ ಮತ್ತು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಅಪರಾಧ ಘಟನೆಗಳು ಕೆವಲ ಹದಿಹರೆಯದ ಹೆಣ್ಣು ಮಕ್ಕಳು ಮಾತ್ರವಲ್ಲ ೨ ವರ್ಷದ ಹಸೂಗೂಸಿನಿಂದ ೮೦ ವರ್ಷದ ವಯೋಮಾನದವರನ್ನು ಬಿಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಎಲ್ಲರೂ ತಮ್ಮ ರಕ್ಷಣೆಗಾಗಿ ಕರಾಟೆಯಂತಹ ಆತ್ಮವಿಶ್ವಾಸ ವೃದ್ಧಿಸುವ ಕಲೆಗಳನ್ನು ಕರಗತಮಾಡಿಕೊಳ್ಳಬೇಕಿದೆ. ಈ ಹಿಂದೆ ಕಲಿಯುವ ಆಸೆ ಇದ್ದರೂ ಪೂರಕವಾದ ವ್ಯವಸ್ಥೆಗಳಿರಲಿಲ್ಲ. ಇಂದು ಪಾಲಕರಿಂದ ಹಿಡಿದು ಎಲ್ಲರ ಮನಸ್ಥಿತಿ ಬದಲಾಗಿದ್ದು ಉತ್ತೇಜನ ದೊರಕುತ್ತಿರುವದು ಸಂತಸದ ಸಂಗತಿ ಎಂದರು. ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ ಪ್ರತಿಯೊಬ್ಬರು ಕರಾಟೆಯಂತ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಕರಾಟೆ ಕಲೆ ಕಲಿಯುವ ಮಕ್ಕಳ ಸಂಖ್ಯೆ ವೃದ್ಧಿಯಾಗಲಿ ಎಂದರು. ವಿದ್ಯಾಂಜಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ ಮಾತನಾಡಿ ಇಂತಹ ಪಠ್ಯತರ ಕಲೆಗಳಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಗುತ್ತಿದ್ದು ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ ಉತ್ತರಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಶಿಯೇಶನ್ ಅಧ್ಯಕ್ಷ ಉಮೇಶ ಮೊಗೇರ ಮಾತನಾಡಿ ಒಂದು ಸಮಯದಲ್ಲಿ ಕರಾಟೆ ಎಂದರೆ ಹಣಕೊಟ್ಟು ಒದೆಯಿಸಿಕೊಳ್ಳುವದು ಎನ್ನುವ ಭಾವನೆ ಇತ್ತು. ತಾವು ಇಂದು ಉನ್ನತ ಸ್ಥಾನ ತಲುಪಿದರೂ ಈಗಲೂ ನಾನು ತಪ್ಪು ಮಾಡಿದರೆ ನಮ್ಮ ಗುರುಗಳು ನಮ್ಮನ್ನು ಬಿಡದೆ ಬೈಯುತ್ತಾರೆ. ಕಲಿಯಲು ಯಾವ ಸಂಕೋಚವೂ ಬೇಡ ಎಂದರು. ನ್ಯೂ ಇಂಗ್ಲೀಷ ಶಾಲೆಯ ಪ್ರಾಂಶುಪಾಲ ಗಣಪತಿ ಶಿರೂರು, ಯು.ಬಿ.ಶೆಟ್ಟಿ ಇಂಗ್ಲೀಷ ಮಿಡಿಯಮ್ ಶಾಲೆಯ ಪ್ರಾಂಶುಪಾಲೆ ಅಮಿತಾ ಶೆಟ್ಟಿ ಮಾತನಾಡಿದರು.
೧೦ನೇ ಬ್ಯಾಚ್‌ನಲ್ಲಿ ೫ ವಿದ್ಯಾರ್ಥಿನೀಯರು ಸೇರಿದಂತೆ ಒಟ್ಟು ೧೦ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪದವಿಯನ್ನು ಗ್ರಾಂಡ್ ಮಾಸ್ಟರ್ ಹನ್ಸಿ ಸಿ ರಾಜನ್ ಅವರು ಪ್ರದಾನಿಸಿದರು. ದೇಶದಲ್ಲೆ ೯ಜನರಲ್ಲಿ ಒರ್ವರಾಗಿರುವ ೮ನೇ ಬ್ಲಾಕ್ ಬೆಲ್ಟ್ ಪಡೆದ ಕರಾಟೆ ಮುಖ್ಯ ಶಿಕ್ಷಕ ಹನ್ಸಿ ರಾಜನ್ ಅವರನ್ನು ಹಾಗೂ ಉಮೇಶ ಮೊಗೇರ ಅವರನ್ನು ಗೌರವಿಸಲಾಯಿತು. ಶೋಟೋಕಾನ್ ಕರಾಟೆ ಇನ್ಸಿಟ್ಯೂಟ್‌ನ ಅಧ್ಯಕ್ಷ ಈಶ್ವರ ಎನ್ ನಾಯ್ಕ, ಕಾನೂನು ಸಲಹೆಗಾರ ಮನೋಜ ಎಂ ನಾಯ್ಕ ಇದ್ದರು. ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯಮಟ್ಟದ ಚಿನ್ನದ ಪದಕ ವಿಜೇತೆ ನಾಗಶ್ರೀ ಎಂ ನಾಯ್ಕ, ಗಂಗಾಧರ ನಾಯ್ಕ, ಪಾಂಡುರಗ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಯೆಲ್ಲೂ ಬೆಲ್ಟನಿಂದ ಹಿಡಿದ ಬ್ಲಾಕ್ ಬೆಲ್ಟವರೆಗಿನ ವಿದ್ಯಾರ್ಥಿಗಳು ತಮ್ಮ ಕಲೆಯ ಪ್ರದರ್ಶನವನ್ನು ನೀಡಿದ್ದು ಸಾರ್ವಜನಿಕರ ಮನಸೂರೆಗೊಂಡಿತು

error: