May 19, 2024

Bhavana Tv

Its Your Channel

ಕಸ ವಿಲೇವಾರಿ ಸಮಸ್ಯೆ; ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಹೆಬಳೆ ಗ್ರಾಮ ಪಂಚಾಯತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಭಟ್ಕಳ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಹೆಬಳೆ ಗ್ರಾಮ ಪಂಚಾಯತ ಕಚೇರಿಗೆ ಮುತ್ತಿಗೆ ಹಾಕಿ ಕಸವಿಲೇವಾರಿ ಸರಿಯಾಗಿ ಮಾಡದೇ ನಾಗರೀಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ಮಾಡಲಾಯಿತು.


ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುoಡಿ ರಸ್ತೆಯಂಚಿನ ರಹ್ಮತಾಬಾದ್ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದುಕೊಂಡಿದ್ದು ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆ ಇದೆ. ಗ್ರಾಮ ಪಂಚಾಯತ್ ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದರೂ ಸಹ ಯಾವುದೇ ಸ್ಪಂದನೆ ಇಲ್ಲ, ಕಸ ವಿಲೇವಾರಿ ಮಾಡಲು ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂದು ನಾಗರೀಕರು ತೊಂದರೆಗೆ ಸಿಲುಕಿದ್ದು ಈ ಭಾಗದಲ್ಲಿ ಓಡಾಡುವುದೇ ಕಷ್ಟಕರವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ನಾಯ್ಕ, ಉಪಾಧ್ಯಕ್ಷೆ ಕುಪ್ಪು ಗೊಂಡ, ಸದಸ್ಯ ಸುಬ್ರಾಯ ದೇವಾಡಿಗ, ಇಮ್ರಾನ್ ಲಂಕಾ, ಪಂಚಾಯತ್ ಕಾರ್ಯದರ್ಶಿ ಜಯಂತಿ ನಾಯ್ಕ ಸ್ವಲ್ಪ ಸಮಯ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್ ಗ್ರಾಮ ಪಂಚಾಯತ್ ಕಸ ವಿಲೇವಾರಿಯ ಕುರಿತು ಲಿಖಿತವಾಗಿ ನೀಡಬೇಕು. ಎಷ್ಟು ಸಮಯದಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗುತ್ತದೆ ಎಂದು ಲಿಖಿತವಾಗಿ ನೀಡಿದಲ್ಲಿ ತಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ತಿಳಿಸಿದರು.
ಇದಕ್ಕೆ ಒಪ್ಪದ ಪಂಚಾಯತ್ ಅಧ್ಯಕ್ಷರು ನಾವು ಕಸ ವಿಲೇವಾರಿಗೆ ಹಲವು ಬಗೆಯ ಕ್ರಮ ಕೈಗೊಳ್ಳುತ್ತಿದ್ದೇವೆ. ಬೇರೆ ಎಲ್ಲಿಯೂ ಇಲ್ಲದ ಸಮಸ್ಯೆ ಈ ಭಾಗದಲ್ಲಿ ಮಾತ್ರ ಇದೆ. ಪ್ರತಿ ದಿನ ಈ ಭಾಗದ ಜನರು ಕಸ ತಂದು ಹಾಕುತ್ತಿರುವುದು ಸಮಸ್ಯೆಯ ಮೂಲಕ್ಕೆ ಕಾರಣವಾಗಿದೆ. ಸೂಕ್ತ ಕ್ರಮ ಕೈಗೊಂಡು ಕಸ ವಿಲೇವಾರಿಗೆ ಕ್ರಮ ಜರುಗಿಸುತ್ತೇವೆ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ತಮಗೆ ಲಿಖಿತವಾಗಿ ಕೊಡಲು ಸಾಧ್ಯವಾಗದಿದ್ದರೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಗ್ರಾಮ ಪಂಚಾಯತ್ ಎದುರು ಧರಣಿ ಕುಳಿತರು. ಕಸ ವಿಲೇವಾರಿಗೆ ಗ್ರಾಮ ಪಂಚಾಯತ್ ನಿರ್ಲಕ್ಷದ ಕುರಿತು ಘೋಷಣೆ ಕೂಗಿದರು.
ನಂತರ ಹೆಬಳೆ ಗ್ರಾಮ ಪಂಚಾಯತ್ ವತಿಯಿಂದ ಕಸದ ತೊಟ್ಟಿಯನ್ನು ಅಗತ್ಯವಿದ್ದ ಮೂರು ಕಡೆಗಳಲ್ಲಿ ನಿರ್ಮಾಣ ಮಾಡಿ ಕಸವನ್ನು ಅದರಲ್ಲಿಯೇ ಹಾಕುವ ವ್ಯವಸ್ಥೆ ಮಾಡುವುದು, ಯಾರೇ ಇತರ ಪ್ರದೇಶಗಳಿಂದ ಕಸವನ್ನು ತಂದು ಹಾಕಿದಲ್ಲಿ ಅದಕ್ಕೆ ನಾಗರೀಕರೇ ಜವಾಬ್ದಾರರು ಎನ್ನುವ ಸೂಚನೆಯನ್ನು ಸಹ ನೀಡಲಾಯಿತು. ವಾಹನಗಳಲ್ಲಿ ಕಸ ತಂದು ರಸ್ತೆ ಪಕ್ಕದಲ್ಲಿ ಎಸೆದರೆ ಅದಕ್ಕೆ ಅಲ್ಲಿನ ನಾಗರೀಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದೂ ನಿರ್ಧರಿಸಲಾಯಿತು.
ಪ್ರತಿಭಟನೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಡಾ. ನಸೀಮ್ ಖಾನ್, ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಅಬ್ದುಲ್ ಜಬ್ಬಾರ್ ಅಸದಿ, ಶೌಕತ್ ಖತೀಬ್, ನಯೀಮ್, ಮುಹಮ್ಮದ್ ಸಯೀದ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ಸಬ್ ಇನ್ಸಪೆಕ್ಟರ್ ಭರತ್, ಅಪರಾಧ ವಿಭಾಗದ ರತ್ನಾ ಕೆ. ಸೇರಿದಂತೆ ನಗರ ಹಾಗೂ ಗ್ರಾಮೀಣ ಪೊಲೀಸರು ಬಂದೋಬಸ್ತ ಕಾರ್ಯ ನಿರ್ವಹಿಸಿದ್ದರು.

error: