May 3, 2024

Bhavana Tv

Its Your Channel

ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಶಾಲಾ ವಾಹನ ಚಾಲಕರಿಗೆ ಸುರಕ್ಷತೆಯ ಪಾಠ

ಭಟ್ಕಳ: ಯಾವುದೇ ಗಡಿಬಿಡಿ, ಒತ್ತಡಗಳಿಗೆ ಒಳಗಾಗದೆ ಶಾಲಾ ಬಸ್ ಚಾಲನೆ ಮಾಡಿ, ನಿಮ್ಮ ಕೈಯಲ್ಲಿ ಅಮೂಲ್ಯ ಜೀವಗಳಿವೆ. ಅವರ ಜೀವ ಎಷ್ಟು ಮುಖ್ಯವೋ ನಿಮ್ಮ ಜೀವವೂ ಕೂಡ ಅಷ್ಟೇ ಮುಖ್ಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಿ.ಡಿ. ಮೊಗೇರ್ ಶಾಲಾ ವಾಹನ ಚಾಲಕರಿಗೆ ತಿಳಿಸಿದರು.

ಅವರು ಗುರುವಾರ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಸಭಾಂಗಣದಲ್ಲಿ ಭಟ್ಕಳ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳ ವಾಹನ ಚಾಲಕರು, ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಮುಖ್ಯಾಧ್ಯಾಪರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಭಟ್ಕಳ ತಾಲೂಕಿನಲ್ಲಿ 140ಕ್ಕೂ ಹೆಚ್ಚು ವಾಹನಗಳು ನಿತ್ಯವೋ ಸಾವಿರಾರು ಮಕ್ಕಳನ್ನು ಶಾಲೆಗೆ ತಲುಪಿಸುವ ಕಾಯಕದಲ್ಲಿ ನಿರತವಾಗಿವೆ. ಪಾಲಕರು ತಮ್ಮ ಮಕ್ಕಳ ಜೀವವನ್ನು ನಿಮ್ಮ ಕೈಯಲ್ಲಿ ನೀಡುತ್ತಾರೆ. ವಾಹನದಲ್ಲಿ ಮಕ್ಕಳು ಪ್ರಯಾಣಿಸುತ್ತಿಲ್ಲ, ಬದಲಾಗಿ ಭಾರತದ ಭವಿಷ್ಯದ ಪ್ರಜೆಗಳುಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸಿ ವಾಹನ ಚಾಲನೆ ಮಾಡಿ ಎಂದು ಕಿವಿ ಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದ ನಗರ ಠಾಣೆಯ ಪಿ.ಎಸ್.ಐ ರಾಜೇಶ್ ನಾಯ್ಕ, ಭಟ್ಕಳದಲ್ಲಿ ಶಾಲಾ ವಾಹನಗಳು ಬೇಕಾಬಿಟ್ಟಿ ಚಾಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಲ್ಲ. ಸುರಕ್ಷ ಪ್ರಯಾಣದ ಎಲ್ಲ ನಿಯಮಗಳನ್ನು ಪಾಲಿಸುತ್ತ ವಾಹನಕ್ಕೆ ಸಂಬAಧಿಸಿದ ಎಲ್ಲ ರೀತಿಯ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಮತ್ತು ಕಾಲ ಕಾಲಕ್ಕೆ ನವೀಕರಣಗೊಳಿಸುತ್ತಿರಬೇಕು ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಗರಠಾಣೆಯ ಪಿ.ಎಸ್.ಐ ಮಾತನಾಡಿ ಶಾಲಾ ಮಕ್ಕಳೊಂದಿಗೆ ಅತಿ ಸಲುಗೆಯಿಂದ ವರ್ತಿಸುವುದು ಸರಿಯಲ್ಲ. ಪ್ರೀತಿಯಿಂದ ಮಾತನಾಡುವುದಕ್ಕೂ ಮತ್ತು ಬೇರೆ ದೃಷ್ಟಿಕೋನದಿಂದ ಮಾತನಾಡುವುದಕ್ಕೆ ವ್ಯತ್ಯಾಸವಿದೆ. ಮಕ್ಕಳೊಂದಿಗೆ ಅನುಚಿತ ವರ್ತನೆ ಸರಿಯಲ್ಲ. ಇದು ಪೋಕ್ಸೋ ಪ್ರಕರಣ ದಾರಿ ಮಾಡಿಕೊಡಬಲ್ಲದು ಎಂದು ತಿಳಿಸಿದರು. ಕಾನೂನು ಕ್ರಮ ಉಲ್ಲಂಘನೆ ದಂಡ ವಿಧಿಸಲು ಎಲ್ಲ ರೀತಿಯ ಅವಕಾಶಗಳಿವೆ. ದಯಮಾಡಿ ಯಾರೂ ಕೂಡ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಹೇಳಿದರು.
ಭಟ್ಕಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾಗೇಶ್ ಮಡಿವಾಳ, ಆರ್.ಟಿ.ಓ. ವತಿಯಿಂದ ಶಾಲಾವಾಹನಗಳಿಗೆ ನೀಲ್ಪಟ್ಟ ನಿದೇರ್ಶನಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನ್ಯೂ ಶಮ್ಸ್ ಸ್ಕೂಲ್ ನ ಹಿರಿಯ ಶಿಕ್ಷಕ ಮುಹಮ್ಮದ್ ರಝಾ ಮಾನ್ವಿ ಹಾಗೂ ಆರ್.ಎನ್.ಎಸ್ ಆಡಳಿತ ಮಂಡಳಿಯ ಆಡಳಿತಾಧಿಕಾರಿದಿನೇಶ್ ಗಾಂವಕರ್ ಮಾತನಾಡಿದರು.
ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೆದಾರ್, ಕ್ಷೇತ್ರಶಿಕ್ಷಣ ಕಾರ್ಯಲಯದ ಇಸಿಒ ಆಶೋಕ ಆಚಾರ್ಯ ಉಪಸ್ಥಿತರಿದ್ದರು.
ಭಟ್ಕಳದಲ್ಲಿ ರಸ್ತೆಗಳು ಸರಿಯಾಗಿಲ್ಲ. ಇಕ್ಕಟ್ಟಿನ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆ, ಹಳೆ ಬಸ್ ನಿಲ್ದಾಣದ ಬಳಿ ಮೀನು ಮಾರುಮಾರಾಟ ಮಾಡುವವರು ತರಕಾರಿ ಮಾರಾಟ ಮಾಡುವವರು ರಸ್ತೆ ಬದಿಯಲ್ಲೇ ಕುಳಿತುಕೊಂಡಿರುತ್ತಾರೆ ಇದರಿಂದ ಬೆಳಗಿನ ಜಾವಾ ಶಾಲಾ ವಾಹನಗಳಿಗೆ ತೊಂದರೆಯಾಗುತ್ತದೆ ಇದನ್ನು ಕೂಡಲೇ ಸರಿಪಡಿ ಎಂದು ಶಾಲಾ ವಾಹನ ಚಾಲಕರು ಪೊಲೀಸ್ ಅಧಿಕಾರಿಗಳನ್ನು ಇದೇ ಸಂಧರ್ಬದಲ್ಲಿ ಒತ್ತಾಯಿಸಿದರು. ಅಲ್ಲದೆ ಶಾಲಾ ಆಡಳಿತ ಮಂಡಳಿಯವರು ನಮಗೆ ಸರಿಯಾದ ವೇತನ ನೀಡುತ್ತಿಲ್ಲ. ಇಪಿಎಫ್ ವ್ಯವಸ್ಥೆಯಿಲ್ಲ ಸಮಯಕ್ಕೆ ತಲುಪಿಸುವ ಒತ್ತಡ, ಚಾಲಕರಿಗೆ ಯಾವುದೇ ರೀತಿಯ ಸೌಲಭ್ಯ ನೀಡದೆ ಇರುವುದು ಇದರಿಂದಾಗಿ ಪದೇ ಪದೇ ಚಾಲಕರು ಬಿಟ್ಟು ಹೋಗುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳಿದ್ದು ಇವುಗಳನ್ನು ಬಗೆ ಹರಿಸುವುವಂತೆ ಆಡಳಿತ ಮಂಡಳಿಗಳಿಗೆ ಸೂಚಿಸಿ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

error: