May 5, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಹೆಬೈಲ್ ಕೆಂಚಗಾರ್ ಸುಗ್ಗಿ ಮೇಳದ ಶಾಸ್ತ್ರೋಕ್ತ ಪಾರಂಪರಿಕ ಸುಗ್ಗಿ ಕುಣಿತಕ್ಕೆ ಸಂಪ್ರದಾಯಬದ್ಧವಾಗಿ ಚಾಲನೆ

ಹೊನ್ನಾವರ ತಾಲೂಕಿನಲ್ಲಿ ನಾಮಧಾರಿ ಸಮಾಜದ ಸುಗ್ಗಿ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿ ಆಚರಿಸಿಕೊಂಡು ಬರುತ್ತಿರುವ ಮೇಳವೆಂದರೆ ಹೆಬೈಲ್ ಕೆಂಚಗಾರ್ ನಾಮಧಾರಿ ಸುಗ್ಗಿಮೇಳ. ಗ್ರಾಮದ ನಾಮಧಾರಿ ಸಮಾಜದ 78 ಮನೆಯವರು ಈ ಸುಗ್ಗಿಮೇಳದಲ್ಲಿ ಸಕ್ರಿಯವಾಗಿದ್ದಾರೆ. ಪಾಲ್ಗುಣ ಶುಕ್ಲ ದಶಮಿಯಂದು ಹೆಬೈಲ್ ನಲ್ಲಿರುವ ಮಂಡಲ ಮನೆಯಲ್ಲಿ ಪೂರ್ವಜರಿಂದ ಬಂದ ಸಂಪ್ರದಾಯದAತೆ ಶ್ರೀ ದೇವರ ಪೂಜೆ ಪುನಸ್ಕಾರ ನೆರವೇರಿಸಿ, ಕಲಾಪ್ರದರ್ಶನಕ್ಕೆ ಸುಗ್ಗಿ ತಂಡವನ್ನು ಸಿದ್ದವಾಗಿಸಿಕೊಂಡು ಶ್ರೀ ಕ್ಷೇತ್ರ ಗುಂಡಬಾಳಕ್ಕೆ ಹೋಗುವರು. ಅಲ್ಲಿ ಶ್ರೀ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಪ್ರಥಮವಾಗಿ ಸುಗ್ಗಿ ಕುಣಿತ ಮಾಡುವುದರ ಮೂಲಕ ಭಕ್ತಿ ಪೂರ್ವಕವಾಗಿ ಪ್ರದರ್ಶನಕೆ ಚಾಲನೆ ನೀಡಲಾಗುವುದು. ಬಳಿಕ ನಾಲ್ಕು ದಿನಗಳ ಕಾಲ ಅಂದರೆ ಹೋಳಿ ಹುಣ್ಣಿಮೆಯ ವರೆಗೆ ಗ್ರಾಮದ ವಿವಿಧ ಮನೆಗಳಲ್ಲಿ ಕಲಾ ಪ್ರದರ್ಶನ ನೀಡಲಾಗುವುದು. ಮೇಳದ 8 ಜನ ಕಲಾವಿದರು ಪಗಡೆ ತುರಾಯಿ ಗೆಜ್ಜೆ ಕಟ್ಟಿ ಸುಗ್ಗಿಯ ವೇಷ ಭೂಷಣ ಧರಿಸಿ ಕೋಲು ಹಿಡಿದು ಪದ್ಯ ಹಾಡಿಕೊಂಡು, ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಕುಣಿಯುವರು. ಡೋಲು ತಾಳ ಗುಮ್ಮಟೆ ವಾದನದ ಲಯಕ್ಕೆ ಅನುಗುಣವಾಗಿ ಕುಣಿತ ಹಾಗೂ ಅಂಗಾAಗ ವಿನ್ಯಾಸವೂ ಬದಲಾಗುತ್ತಿರುತ್ತದೆ. ಒಬ್ಬ ವಿದೂಷಕನ ವೇಷದಲ್ಲಿ ಆಗಾಗ ಕಲಾಭಿಮಾನಿಗಳನ್ನು ರಂಜಿಸುತ್ತಿರುತ್ತಾನೆ. ಪದ್ಯದ ಮೊದಲ ಸೊಲ್ಲು ಕುಣಿತದ ಹೆಸರಾಗಿದ್ದು, ಸುಮಾರು 25 ಬಗೆಯಲ್ಲಿ ಕುಣಿಯುವ ರೂಡಿಯನ್ನು ಈ ಸುಗ್ಗಿಮೇಳದವರು ಇರಿಸಿಕೊಂಡಿದ್ದಾರೆ. ಪ್ರದರ್ಶನದ ವೇಳೆ ಕೆಲವು ಸಹೃದಯಿ ಮನೆಯವರು ತಂಪು ಪಾನೀಯ, ಉಪಹಾರ, ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಬರುವ ಸಂಭಾವನೆ ಕಡಿಮೆಯೇ ಆಗಿದ್ದು, ಎಷ್ಟೇ ಖರ್ಚಾದರೂ ಸಹ ಸಾಂಪ್ರದಾಯಿಕ ಕಲೆಯನ್ನು ಶೃದ್ಧೆಯಿಂದ ಉಳಿಸಿಕೊಂಡು ಬರುತ್ತಿರುವುದು ಪ್ರಶಂಸನೀಯವಾಗಿದೆ.
ಹೋಳಿ ಹುಣ್ಣಿಮೆಯಂದು ಹೋಳಿ ಬಯಲಿನಲ್ಲಿ ಕಾಮದಹನ ಮಾಡಿ, ಪಾಡ್ಯದ ದಿನ ಬೂದಿ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಕಾಮನ ಕಟ್ಟೆಗೆ ಪೂಜೆ ಸಲ್ಲಿಸಿ, ಈ ವರ್ಷದ ಸುಗ್ಗಿ ಹಬ್ಬದ ಸಂಭ್ರಮವನ್ನು ಸಂಪನ್ನಗೊಳಿಸಲಾಗುತ್ತದೆ.

error: