May 5, 2024

Bhavana Tv

Its Your Channel

ಯಕ್ಷಗಾನವನ್ನು ವಿಸ್ತಾರವಾದ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಅದು ಕರ್ನಾಟಕದ ಯಕ್ಷಗಾನ ಆಗುತ್ತದೆ -ಡಾ. ಜಿ.ಎಲ್.ಹೆಗಡೆ

ಹೊನ್ನಾವರ: ಮಾತು ಕಲಿಸಿ ಅನ್ನಕೊಟ್ಟ ಜಗತ್ತಿನ ಕಲೆ ಯಕ್ಷಗಾನ. ಇದನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರು ಮುಂದಾಗುತ್ತಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.

ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿಗೆ ಪುರಸ್ಕೃತರಾದ ಕಡತೋಕಾದ ಲಕ್ಷ್ಮೀನಾರಾಯಣ ಭಾಗವತರ ಮನೆಯಂಗಳದಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ಕಾರ್ಯಕ್ರಮದಲ್ಲಿ ಭಾಗವತರನ್ನು ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರುಕುಲ ಮಾದರಿಯಲ್ಲಿ ನಡೆದುಬಂದ ಯಕ್ಷಗಾನ ಕಲೆ ದೀರ್ಘಕಾಲದ ಇತಿಹಾಸ ಹೊಂದಿದೆ. ಕಾಲ ಗತಿಸಿದಂತೆ ಬಾಳಿನ ಒಗ್ಗರಣೆಯಂತೆ ಬದಲಾದರೂ ಯಕ್ಷಗಾನ ಕಲೆ ಇನ್ನೂ ಜೀವಂತವಾಗಿ ಶಕ್ತವಾಗಿದೆ ಎಂದರು. ಅಕಾಡೆಮಿ ಹಣ ಹಂಚಲು ಇರುವ ಸಂಸ್ಥೆಯಲ್ಲ. ತನ್ನದೇ ಆದ ಕಾರ್ಯಕ್ರಮ ಚೌಕಟ್ಟಿನ ಮೂಲಕ ಕಲಾವಿದರ ಬದುಕನ್ನು ಕಟ್ಟಿಕೊಡುವಲ್ಲಿ ಹಾಗೂ ಅವರು ಸಾಧಿಸಿದ ಸಾಧನೆಯ ಹಾದಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಕ್ಷಗಾನವನ್ನು ವಿಸ್ತಾರವಾದ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಅದು ಕರ್ನಾಟಕದ ಯಕ್ಷಗಾನ ಆಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದಂತೆ ಯಕ್ಷಗಾನ ಸಮ್ಮೇಳನ ನಡೆಸುವ ಕುರಿತು ಸರಕಾರದ ಅಧಿಕೃತ ಮುದ್ರೆ ಗಾಗಿ ವಿನಂತಿಸಲಾಗಿದೆ. ಇದರಿಂದ ಇಡೀ ಕರ್ನಾಟಕ ಯಕ್ಷಗಾನ ಸಾಹಿತ್ಯ ಒಂದೆಡೆ ಸೇರಲು ಅವಕಾಶವಾಗುತ್ತದೆ. ಅನಕ್ಷರಸ್ತರಿಂದ ರಚನೆಯಾದ ಯಕ್ಷಗಾನ ಸಾಹಿತ್ಯ ವಿಶ್ವವಿದ್ಯಾಲಯದ ಪಾಲಾಗುತ್ತಿದೆ. ಅವರ ತಪ್ಪನ್ನು ತಿದ್ದದೇ, ಅವರ ಹೆಸರುಗಳನ್ನು ಬಳಸಿಕೊಳ್ಳದೇ ತಿಳಿದವರಿಂದ ಅನ್ಯಾಯವಾಗುತ್ತದೆ. ಇಂತಹ ಸೋಗಲಾಡಿತನ ದೂರವಾಗಿ ಸಮಾಜ ಸಂಘಟನೆಯ ಮೂಲಕ ಯಕ್ಷಗಾನ ಕಲೆ ಉಳಿಯಲು ಸಾಧ್ಯ ಎಂದರು.

ಮುಖ್ಯ ಅತಿಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಾನಂದ ಹೆಗಡೆ ಮಾತನಾಡಿ, ಯಥೋಚಿತವಾಗಿ ಯೋಗ್ಯರಿಗೆ ಯಕ್ಷಸಿರಿ ಪ್ರಶಸ್ತಿ ಬಂದಿದೆ. ಲಕ್ಷ್ಮಿ ನಾರಾಯಣ ಭಾಗವತರು ಚೌಕ ಗ್ರಾಮದ ಬಹುದೊಡ್ಡ ಸಾಧಕರು. ಯಕ್ಷಗಾನ ಅಕಾಡೆಮಿಯನ್ನು ಜನಪರವಾಗಿ, ಜನರ ಬಳಿಗೆ ಕೊಂಡೊಯ್ದ ಹೆಗ್ಗಳಿಕೆಗೆ ಪಾತ್ರರಾದ ಜಿ.ಎಲ್.ಹೆಗಡೆಯವರನ್ನು ಅಭಿನಂದಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತು ಸಾಧಕರ ಮನೆಗೆ ಬಂದು ಗೌರವಿಸಿರುವುದು ಶ್ಲಾಘನೀಯ ಕಾರ್ಯಎಂದರು.

ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಮಂಜುನಾಥ್ ಭಟ್ ಮಾತನಾಡಿ,ಕನ್ನಡ ಉಳಿಸಿ ಬೆಳೆಸಿದವರು ಯಕ್ಷಗಾನ ಕಲಾವಿದರು. ತಮ್ಮ ಬದುಕಿನುದ್ದಕ್ಕೂ ಸೇವಾ ಮನೋಭಾವನೆಯಿಂದ ದುಡಿದ ಸಾಧಕರು. ನಿಸರ್ಗ ಕಲೆಯ ಉಳಿವಿಗಾಗಿ ಜನಪದ ಸಾಹಿತ್ಯವನ್ನು ಆರಾಧಿಸುವ ಮೂಲಕ ಹಿರಿಯ ಚೇತನಕ್ಕೆ ಪ್ರಶಸ್ತಿ ಬಂದಿರುವುದು ಯಕ್ಷಗಾನ ಕ್ಷೇತ್ರಕ್ಕೆ ಸಂದ ಗೌರವವಾಗಿದೆ ಎಂದರು.

ಯಕ್ಷಗಾನ ಕಲಾವಿದ ಕೂಜಳ್ಳಿಯ ಮೋಹನ ನಾಯ್ಕ ಮಾತನಾಡಿ, ಲಕ್ಷ್ಮೀನಾರಾಯಣ ಭಾಗವತರು ನನ್ನ ಗುರುಗಳಾಗಿ ಸುಪ್ತವಾಗಿ ನನ್ನಲ್ಲಿ ಅಡಗಿರುವ ಕಲೆಗೆ ಪ್ರೋತ್ಸಾಹಿಸಿ ಬೆಳೆಸಿದವರು. ಅನೇಕ ಯಕ್ಷಗಾನದಲ್ಲಿ ಅವರ ಮಾರ್ಗದರ್ಶನದಿಂದ ನಾನು ಕಲಾಸೇವೆಗೆ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಹಾಗೂ ಕಲಾವಿದ ಡಾಕ್ಟರ್ ಎಸ್.ಡಿ.ಹೆಗಡೆ ಮಾತನಾಡಿ, ಬದುಕನ್ನು ಪ್ರೀತಿಸುವ ಕಲೆ ವ್ಯಾಪಾರಿ ಕೇಂದ್ರಿತವಾಗಿದೆ. ಆಧುನಿಕರಣಕ್ಕೆ ಒಗ್ಗಿಹೋದ ಯಕ್ಷಗಾನ ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಂಡು ಬದುಕಿನ ದಿಕ್ಕನ್ನೇ ಬದಲಾಯಿಸಿದೆ ಎಂದರು.

ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಯಕ್ಷಗಾನ ಅಕಾಡೆಮಿ ಒಬ್ಬ ಪರಿಪೂರ್ಣ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲು ಮುಂದಾಗಿರುವುದಕ್ಕೆ ಅಕಾಡೆಮಿ ಅಧ್ಯಕ್ಷರು ಅಭಿನಂದನಾರ್ಹರು. ಡಾ.ಜಿ.ಎಲ್.ಹೆಗಡೆಯವರು ಪ್ರಬುದ್ಧ ಕಲಾವಿದರಾಗಿ,ಸಾಧಕರಾಗಿ ಇನ್ನೊವ9 ಸಾಧಕನನ್ನು ಗುರುತಿಸುವಂತಾಗಿರುವುದು ಯಕ್ಷ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಲಕ್ಷ್ಮಿ ನಾರಾಯಣ ಭಾಗವತರು ಮಾತನಾಡಿ, ಸನ್ಮಾನಿಸಿದ ಸರ್ವರನ್ನು ಅಭಿನಂದಿಸಿ ಇಂತಹ ಸಮಾಜಮುಖಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು.

ಶಿಕ್ಷಕ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ಕಸಾಪ ಘಟಕದ ಅಧ್ಯಕ್ಷ ಎಸ್.ಎಚ್.ಗೌಡ, ಪತ್ರಕರ್ತ ಶಂಕರನಾರಾಯಣ ಭಟ್, ಶಿಕ್ಷಕಿ ಶಾರದಾ ಶರ್ಮ ಮಾತನಾಡಿ ಭಾಗವತರ ಸೇವೆ ಶ್ಲಾಘನೀಯ ಎಂದರು.

ಸಭೆಯಲ್ಲಿ ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ರಾಮಚಂದ್ರ ಭಾಗವತ, ವಿನಾಯಕ ಹೆಗಡೆ, ಪತ್ರಕರ್ತ ವಿದ್ಯಾಧರ ಕಡತೋಕ, ಕಲಾವಿದರಾದ ಶ್ರೀಪಾದ ಭಟ್ಟ ಸತೀಶ್ ಭಟ್ಟ, ಭಾಸ್ಕರ ಭಟ್ಟ, ಗಜಾನನ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು

ಪ್ರಾರಂಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ. ಆರ್. ನಾಯ್ಕ ಸ್ವಾಗತಿಸಿದರೆ, ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತರು ವಂದಿಸಿದರು. ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ ನಿರೂಪಿಸಿದರು.

error: