December 22, 2024

Bhavana Tv

Its Your Channel

ಮೋಟಾರ್ ಅಪಘಾತ ವಿಮಾ ಪರಿಹಾರ ನೀಡಲು ವಿಫಲ; ಬಾಗಲಕೋಟ ವಿಭಾಗದ ಬಸ್ಸ್ ಜಪ್ತಿಪಡಿಸಿಕೊಂಡ ನ್ಯಾಯಾಲಯ

ಹೊನ್ನಾವರ :- ಮೋಟಾರ್ ಅಪಘಾತ ವಿಮಾ ಪರಿಹಾರವನ್ನು ನ್ಯಾಯಾಲಯದ ಆದೇಶದ ಅನ್ವಯ ನೊಂದ ಕುಟುಂಬಕ್ಕೆ ನೀಡಲು ವಿಫಲವಾದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ಸನ್ನು ಹೊನ್ನಾವರ ನ್ಯಾಯಾಲಯದ ಸಿಬ್ಬಂದಿಗಳು ಜಪ್ತಿಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2014 ರ ಫೆಬ್ರವರಿ 4 ರಂದು ಮಂಗಳೂರು ಕಡೆಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಶ್ರೀದೇವಿ ಆಸ್ಪತ್ರೆಯ ತಿರುವಿನ ಬಳಿ ಬೈಕ ಸವಾರ ಗಣಪತಿ ಮೇಸ್ತ ಎನ್ನುವವರಿಗೆ ಅಪಘಾತಪಡಿಸಿತ್ತು. ಅಪಘಾತದಿಂದ ಗಣಪತಿ ಮೇಸ್ತ ಮೃತರಾಗಿದ್ದರು. ಗಣಪತಿ ಮೇಸ್ತ ಇವರ ಕುಟುಂಬವು ಅಪಘಾತ ವಿಮಾ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಹೊನ್ನಾವರ ಎಂ.ಎ.ಸಿ.ಟಿ ನ್ಯಾಯಾಲಯವು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪರಿಹಾರ ಹಣವನ್ನು ನೀಡಲು ಆದೇಶ ಮಾಡಿತ್ತು. ಆದರೆ ನ್ಯಾಯಾಲಯದ ತೀರ್ಪಿನ ಪ್ರಕಾರ ಸಂಸ್ಥೆಯ ಬಾಗಲಕೋಟೆ ವಿಭಾಗವು ನ್ಯಾಯಾಲಯಕ್ಕೆ ಹಣವನ್ನು ಭರಣ ಮಾಡಿರಲಿಲ್ಲ. ಮೃತನ ಕುಟುಂಬವು ಪರಿಹಾರ ಹಣವನ್ನು ತುಂಬದ ಸಾರಿಗೆ ಸಂಸ್ಥೆಯ ವಿರುದ್ದ ಮತ್ತೆ ಅಮಲ್ಜಾರಿ ಪ್ರಕರಣವನ್ನು ದಾಖಲಿಸಿ ರೂ. 18,97,797/- ಹಾಗೂ ಅದರ ಮೇಲಿನ ಬಡ್ಡಿ ಸಹಿತ ನೀಡುವಂತೆ ಕೋರಿದ್ದರು.
ಅಮಲ್ಜಾರಿ ಪ್ರಕರಣವನ್ನು ವಿಚಾರಿಸಿದ ಎಂ.ಎ.ಸಿ.ಟಿ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಜಿ. ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ ಜಪ್ತ ಪಡಿಸಲು ಆದೇಶ ನೀಡಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರದ ಕೋರ್ಟ ಸಿಬ್ಬಂದಿಗಳು ಬಸ್ಸನ್ನು ಸೋಮವಾರ ನ್ಯಾಯಾಲಯಕ್ಕೆ ಜಪ್ತ ಪಡಿಸಿ ಹಾಜರುಪಡಿಸಿದ್ದಾರೆ.

error: