April 29, 2024

Bhavana Tv

Its Your Channel

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖರ್ವಾ-ನಾಥಗೇರಿ ಶತಮಾನೋತ್ಸವ ಕಾರ್ಯಕ್ರಮ

ಹೊನ್ನಾವರ ; ತಾಲೂಕಿನ ಖರ್ವಾ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖರ್ವಾ-ನಾಥಗೇರಿ ಇದರ ಶತಮಾನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸರ್ಕಾರಿ ಶಾಲೆಯಾದರು ಸಂಭ್ರಮಕ್ಕೆ ಕೊರತೆ ಇಲ್ಲವಾಗಿತ್ತು.ಹಬ್ಬದ ರೀತಿಯಲ್ಲಿ ಊರಿನ ಜನತೆ ಶತಮಾನೋತ್ಸವವನ್ನು ಆಚರಿಸಿದರು.
ಸೆಂಟ್ ಮದರ್ ತೆರೆಸಾ ಬ್ರಾಸ್ ಬ್ಯಾಂಡ್, ಚಂಡೆ ವಾದನ,ಪೂರ್ಣಕುಂಭದದ ಮೂಲಕ ಅತಿಥಿಗಳ ಮೆರವಣಿಗೆ ನಡೆಸಿರುವುದು ವಿಶೇಷವಾಗಿತ್ತು.ಶಾಲಾ ಮಕ್ಕಳಿಂದ ಸ್ವಾಗತ ನೃತ್ಯದ ಮೂಲಕ ವೇದಿಕೆಗೆ ಆಹ್ವಾನಿಸಿರುವುದು ಸಚಿವರ ಹಾಗೂ ಇನ್ನುಳಿದ ಅತಿಥಿಗಳ ಕಣ್ಮನ ಸೆಳೆಯಿತು. ನಂತರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ವಸ್ತು ಪ್ರದರ್ಶನ ಹಾಗೂ ಶಾಲಾ ಮಕ್ಕಳ ಜತೆಗೂಡಿ ಧ್ವಜಸ್ತಂಭ ಉದ್ಘಾಟಿಸಿದರು.ಶಾಲಾ ಆವಾರವನ್ನು ವೀಕ್ಷಿಸಿ ದಾನಿಗಳ ಕೊಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟಿಸಿ ಜತೆಗೆ ‘ಶತಶೃಂಗ ಸ್ಮರಣ ಸಂಚಿಕೆ ಹಾಗೂ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಶಾಲೆಗೆ ಸ್ಥಳ ದಾನ ನೀಡಿದ ನಾಥಗೇರಿಯ ದಿವಂಗತ ನಾಗಪ್ಪ ನಾಯ್ಕರ ಕಾರ್ಯ ಶ್ಲಾಘನೀಯ.ನಾವು ಒಳಿತು ಮಾಡಿದ್ದು ಮಾತ್ರ ಜೀವಂತ ಇರುತ್ತದೆ ಎನ್ನುವುದಕ್ಕೆ ನಾಗಪ್ಪ ನಾಯ್ಕರ ಕುಟುಂಬ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಆಂಗ್ಲ ಮಾಧ್ಯಮದ ಪ್ರಭಾವದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ವಿನಃ ಶಿಕ್ಷಣದಿಂದ ವಂಚಿತರಾಗಿ ಕಡಿಮೆಯಾಗುತ್ತಿಲ್ಲ.ಇಂದು ಪ್ರತಿಯೊಬ್ಬ ಪಾಲಕ-ಪೋಷಕರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ನಮ್ಮ ಪ್ರಥಮ ಆದ್ಯತೆಯು ಶಿಕ್ಷಣವಾಗಿದೆ.ಶಾಲೆ ಎನ್ನುವುದು ದೇವಾಲಯವಿದ್ದಂತೆ ಅದಕ್ಕೆ ನನ್ನ ಪ್ರಥಮ ಆಧ್ಯತೆ.ಶಿಕ್ಷಣಕ್ಕೆ ಕೊರತೆ ಆದರೆ ದೇಶಕ್ಕೆ ಕೊರತೆ ಆದಂತೆ.ನನ್ನ ಕ್ಷೇತ್ರದಲ್ಲಿ ಯಾವಾಗಲೂ ಶಿಕ್ಷಣಕ್ಕೆ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ. ಎಂದರು.

ಶಾಲೆಗೆ ಸ್ಮಾರ್ಟ್ ಕ್ಲಾಸ್ ದೇಣಿಗೆ ನೀಡಿದ ಸ್ಥಳದಾನಿ ದಿವಂಗತ ನಾಗಪ್ಪ ನಾಯ್ಕರ ಕುಟುಂಬಸ್ಥರನ್ನು,ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳನ್ನು,ಅನ್ನದಾಸೋಹ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿಗಳು,ಎಮ್ ಪಿ ಇ ಸೊಸೈಟಿಯ ಅಧ್ಯಕ್ಷ ರಾದ ಕೃಷ್ಣಮೂರ್ತಿ ಭಟ್ ಶಿವಾನಿ ಅವರು ಶಾಲೆಗೆ ಗ್ರಿನ್ ಬೊರ್ಡ ಕೊಡುಗೆ ನೀಡಿದ್ದು ಸಾಂಕೇತಿಕವಾಗಿ ವೇದಿಕೆಯಲ್ಲಿ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಶಾಲೆಗೆ ಸಭಾಭವನ ಮಂಜೂರು ಮಾಡಿಸಿಕೊಡುವಂತೆ ಸಚಿವ ಮಂಕಾಳ ವೈದ್ಯ ರಿಗೆ ಶಾಲೆಯ ಪರವಾಗಿ ಮನವಿ ಸಲ್ಲಿಸಿದರು. ಶೀಘ್ರದಲ್ಲೇ ಸಭಾಭವನಕ್ಕೆ ಅನುದಾನ ಒದಗಿಸಿ,ನಿರ್ಮಿಸಿಕೊಡುತ್ತೇನೆ ಎಂದು ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲತಾ ನಾಯಕ ಮಾತನಾಡಿ ಇದೊಂದು ಅಪರೂಪದ ಕಾರ್ಯಕ್ರಮ. ಈ ಕಾರ್ಯಕ್ರವನ್ನು ನೋಡಿ ತುಂಬಾ ಸಂತೋಷವಾಗಿ, ನನಗೆ ಬಾಲ್ಯದ ನೆನಪಾಗುತ್ತಿದೆ. ಇಲ್ಲಿನ ಶಿಕ್ಷಣ ಪ್ರೇಮಿಗಳು ಶಿಕ್ಷಣದ ಶಕ್ತಿಯನ್ನು ಅರಿತು 100 ವರ್ಷದ ಹಿಂದೆಯೆ ದುಡಿದಿದ್ದಾರೆ ಅಂದರೆ ಶಿಕ್ಷಣದ ಬಗ್ಗೆ ಈ ಊರಿನಲ್ಲಿ ಎಷ್ಟು ಅಭಿಮಾನ ಇದೆ, ಅಭಿಮಾನಿಗಳು ಇದ್ದಾರೆ ಎಂದು ಅರ್ಥವಾಗುತ್ತದೆ. ಈ ಊರಿನ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಪರಿಶ್ರಮದಿಂದ ಇಂದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಶೈಕ್ಷಣಿಕ ಕಾಳಜಿ ಮೆರೆದು ಸಹಾಯ,ಸಹಕಾರ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.
ವೇದಿಕೆಯಲ್ಲಿ ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ತಾಲೂಕಾ ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ ನಾಯ್ಕ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಭಟ್ಟ, ಕೃಷ್ಣಮೂರ್ತಿ ಭಟ್ ಶಿವಾನಿ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷೆ ಚೇತನಾ ನಾಯ್ಕ, ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಹಳ್ಳೇರ್, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಜಿ ನಾಯ್ಕ, ಎಸ್ ಎಮ್ ಹೆಗಡೆ, , ಶಿಕ್ಷಕಿ ಸುನೀತಾ ಪಟಗಾರ, ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಮತ್ತಿತರರು ಇದ್ದರು.ಶಾಲಾ ಮುಖ್ಯಾಧ್ಯಾಪಕಿ ಸುಧಾ ಭಂಡಾರಿ ಸ್ವಾಗತಿಸಿದರು.ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರೂಪಿಸಿದರು.ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಪ್ಪ ನಾಯ್ಕ ವಂದಿಸಿದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: