May 19, 2024

Bhavana Tv

Its Your Channel

ಶಿಕ್ಷಕರು ಮಾರ್ಗದರ್ಶನ ನೀಡುವಲ್ಲಿ ಎಡವಿದರೆ ಮಕ್ಕಳ ಮುಂದಿನ ಭವಿಷ್ಯಕ್ಕೆ ಧಕ್ಕೆ ಉಂಟಾಗುತ್ತದೆ- ಪ್ರೊ.ವಿಜಯಾ ನಾಯ್ಕ.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಕಾರವಾರ: ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಒಬ್ಬ ವೈದ್ಯನ ತಪ್ಪಿನಿಂದ ಒಂದು ಜೀವ ಮಾತ್ರ ಹೋಗಬಹುದು ಅದೇ ಶಿಕ್ಷಕನ ಬೋಧನೆಯಲ್ಲಿ ದೋಷ ಉಂಟಾದರೆ ನೂರಾರು ಮಕ್ಕಳ ಭವಿಷ್ಯ ಹಾಳಾಗಬಹುದು. ಹಾಗಾಗಿ ಪ್ರತಿಯೊಬ್ಬ ಶಿಕ್ಷಕರೂ ತಮ್ಮನ್ನು ಅವಲಂಬಿಸಿ ಬಂದoತಹ ಮಕ್ಕಳನ್ನು ಜವಾಬ್ದಾರಿಯಿಂದ ಬೋಧಿಸುವುದರ ಮೂಲಕ ಜ್ಞಾನಾರ್ಜನೆ ನೀಡಬೇಕು. ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು. ಉಜ್ವಲ ಭವಿಷ್ಯವನ್ನು ರೂಪಿಸುವ ಪ್ರಜೆಗಳನ್ನಾಗಿ ಮಾರ್ಪಾಡು ಮಾಡಬೇಕು. ಹಿಂದೆ ಗುರು ಮುಂದೆ ಗುರಿ ಸದಾ ಇರಬೇಕು. ಶಿಕ್ಷಕರು ಮಾರ್ಗದರ್ಶನ ನೀಡುವಲ್ಲಿ ಎಡವಿದರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಎಂದು ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ವಿಜಯಾ ನಾಯ್ಕ ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಆಝಾದ ಯುಥ್ ಕ್ಲಬ್ ಕಾರವಾರದವರು ಸರ್ವಪಳ್ಳಿ ರಾಧಾಕೃಷ್ಣನರವರ ಜನ್ಮದಿನವಾದ ‘ಶಿಕ್ಷಕರ ದಿನಾಚರಣೆಯ’ ನಿಮಿತ್ತ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕರಾದ ಆರ್.ಜಿ.ಪ್ರಭು ಮಾತನಾಡಿ ಜಗತ್ತಿನಲ್ಲಿ ತಾಯಿ ಮತ್ತು ಗುರುವಿಗೆ ಗೌರವಾನ್ವಿತ ಸ್ಥಾನವಿದೆ. ಮಕ್ಕಳು ಗುರುವಿನಿಂದ ಒಳ್ಳೆಯ ಸಂಸ್ಕಾರವನ್ನು ಪಡೆಯುತ್ತಾರೆ ಹಾಗೂ ಅವರನ್ನೇ ಅನುಕರಿಸುತ್ತಾರೆ. ತಂದೆ ತಾಯಿಗಳಿಗಿಂತ ಹೆಚ್ಚಿನ ಜವಾಬ್ದಾರಿ ಗುರುವಿನ ಮೇಲೆ ಇದೆ. ಗುರುವನ್ನು ಸದಾ ಗೌರವದಿಂದ ಕಾಣಬೇಕು ಎಂದು ಹೇಳಿದರು.
ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಒಬ್ಬ ಶಿಕ್ಷಕರು ಪ್ರಭಾವ ಬೀರಿರುತ್ತಾರೆ. ಅವರನ್ನು ಸದಾ ಸ್ಮರಿಸುತ್ತಿರುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಾಡ ಶಿವಾಜಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಎ.ಜಿ.ಕೆರಳೀಕರ ಮಾತನಾಡಿ ಸಂಪೂರ್ಣವಾಗಿ ಗ್ರಾಮೀಣ ವಿಭಾಗದಲ್ಲಿ ಸೇವೆಯನ್ನು ಸಲ್ಲಿಸುವುದು ಬಹಳ ಕಷ್ಟ. ಸೂರ್ಯ ಚಂದ್ರ ಇರುವವರೆಗೂ ಶಿಕ್ಷಕರ ಶ್ರಮ ಇದ್ದೇ ಇರುತ್ತದೆ. ಶಿಕ್ಷಕರು ತಮಗೆ ಇರುವ ಸ್ಥಾನಮಾನವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.
ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ ಯು.ಶೇಖ ಮಾತನಾಡಿ ಶಿಕ್ಷಕರು ನಮ್ಮ ಬಾಳನ್ನು ರೂಪಿಸಿದ ಶಿಲ್ಪಿಗಳು. ನಾವು ಯಾವಾಗಲೂ ಅವರ ಉಪಕಾರವನ್ನು ಸ್ಮರಿಸುತ್ತಿರಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಕ್ಲಬ್‌ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ ಶೇಖ ಸಂಘಟಿಸಿದ್ದರು.
ಇದೇ ಸಂದರ್ಭದಲ್ಲಿ ೩೦ ವರ್ಷ ಸಂಪೂರ್ಣವಾಗಿ ಗ್ರಾಮೀಣ ವಿಭಾಗದಲ್ಲಿಯೇ ಸೇವೆಯನ್ನು ಸಲ್ಲಿಸಿ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ನಾಯ್ತಿಸಾವರ ಕಾರವಾರದಿಂದ ನಿವೃತ್ತರಾದ ಆದರ್ಶ ಶಿಕ್ಷಕ ನಾರಾಯಣ ಟಿ.ಗುನಗಿ ಹಾಗೂ ರಹೀಂಖಾನ ಯುನಿಟಿ ಪ್ರೌಢ ಶಾಲೆಯ ಉರ್ದು ಮಾಧ್ಯಮದಲ್ಲಿ ಉರ್ದು ವಿಷಯದಲ್ಲಿ ೧೨೫ ಕ್ಕೆ ೧೨೦ ಅಂಕ ಗಳಿಸಿ ತಾಲೂಕಿಗೆ ಪ್ರಥಮ ಬಂದAತಹ ವಿದ್ಯಾರ್ಥಿನಿ ಮಿಸ್ಬಾ ಮೈನೋದ್ದೀನ್ ಶೇಖ್ ಇವರಿಬ್ಬರಿಗೂ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಮಾಜಿ ವಕ್ಫ್ ಛೇರಮೆನ ದಿವಂಗತ ಹಸನ ಉಸ್ಮಾನ್ ಶೇಖ್‌ರ ಸ್ಮರಣಾರ್ಥ ಹಾಗೂ ದಿವಂಗತ ಮೊಹಿದ್ದೀನ ಶೇಖ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿತ್ತು. ಪ್ರಾರಂಭದಲ್ಲಿ ಕ.ಸಾ.ಪ.ಸದಸ್ಯರಾದ ಫೈರೋಜಾ ಬೇಗಂ ಶೇಖ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಕ್ಲಬ್‌ನ ಅಧ್ಯಕ್ಷ ರೋಹನ ಭುಜಲೆ ವಂದಿಸಿದರು. ನಿಧಿ ನಾಯಕ, ವಕಾಸ ಇಸ್ಮಾಯಿಲ ಶೇಖ, ಕೆನರಾ ಬ್ಯಾಂಕ್‌ನ ಅಬ್ದುಲ್ ಅಜೀಜ ಶೇಖ್ ಮತ್ತಿತರರು ಉಪಸ್ಥಿತರಿದ್ದರು

error: