September 16, 2024

Bhavana Tv

Its Your Channel

ಕುಮಟಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಗುರಿ -ನಿವೇದಿತ್ ಆಳ್ವಾ

ಹೊನ್ನಾವರ : ಕ್ಷೇತ್ರದ ಒಳಗಿನವನು, ಹೊರಗಿನವನು ಎನ್ನುವ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೇ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವAತೆ ಜನತೆಗೆ ಮನವರಿಕೆ ಮಾಡಿಕೊಡುವಂತೆ ಹೊನ್ನಾವರ-ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿವೇದಿತ್ ಆಳ್ವಾರವರು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಅವರು ರವಿವಾರ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶೀಸಿ ಮಾತನಾಡುತ್ತಿದ್ದರು. ಕುಮಟಾ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಮೂಲ ಗುರಿ. ನನ್ನ ಕುಟುಂಬ ಕಾಂಗ್ರೆಸ್ ಪಕ್ಷ ಮತ್ತು ಜನರ ಸೇವೆಗೆ ಕಂಕಣ ಬದ್ಧರಾಗಿದ್ದು, ನನ್ನ ಅಜ್ಜ ಜೋಕಿಂ ಆಳ್ವಾ ಮೂರು ಬಾರಿ ಜಿಲ್ಲೆಯನ್ನು ಪ್ರತಿನಿದಿಸಿದ್ದರು. ನನ್ನ ತಾಯಿ ಶ್ರೀಮತಿ ಮಾರ್ಗರೇಟ್ ಆಳ್ವಾ ಸಂಸದೆಯಾಗಿ ಕೆನರಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದು ಕ್ಷೇತ್ರದ ಜನ ಇಂದಿಗೂ ಮರೆತಿಲ್ಲಾ ಎಂದರು. ನನ್ನ ಪೂರ್ವಜರ ನೆರಳಿನಲ್ಲಿಯೇ ನಾನು ಕೂಡಾ ಕಳೆದ ಹದಿನೆಂಟು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯ ಯುವ ಕಾಂಗ್ರೆಸ್ ಮತ್ತು ಕೆ.ಪಿ.ಸಿ.ಸಿ. ಪದಾಧಿಕಾರಿಯಾಗಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಜಿಲ್ಲೆಯಲ್ಲಿ ಅನೇಕ ತೂಗು ಸೇತುವೆಗಳನ್ನು ನಿರ್ಮಿಸಿ, ಕರ್ಕಿ ಮತ್ತು ಹಳದೀಪುರ ಭಾಗಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಿರುವುದು ಇಂದಿಗೂ ಜನ ನೆನಪಿಸುತ್ತಿದ್ದಾರೆ ಎಂದರು.

ಕುಮಟಾ ಕ್ಷೇತ್ರದ ಹೊರಗಿನವನು ಎನ್ನುವುದು ವಿರೋಧ ಪಕ್ಷಗಳ ಕುಹಕದ ಮಾತಾಗಿದ್ದು, ವಿರೋಧಿಗಳಿಗೆ ತಕ್ಕ ಉತ್ತರ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ ಮಾತನಾಡಿ ನಿವೇದಿತ್ ಆಳ್ವಾರವರು ಉನ್ನತ ಶಿಕ್ಷಣ ಪಡೆದಿದ್ದು, ಸರಕಾರದ ಮಟ್ಟದಲ್ಲಿ ಯಾವುದೇ ಕೆಲಸ ಮಾಡಿ, ಯಶಸ್ವಿಗೊಳಿಸುವಲ್ಲಿ ನಿಷ್ಣಾತರು ಎಂದರು. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ, ಸ್ನೇಹಪರ ನಡತೆಯ, ನಿವೇದಿತ್ ಆಳ್ವಾರವರು ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ನಮ್ಮೇಲ್ಲರ ಹೆಮ್ಮೆ ಎಂದರು.
ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ ಕಾಂಗ್ರೆಸ್ ಹೈಕಮಾಂಡ್ ಕುಮಟಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಅಳೆದು ತೂಗಿ, ದೀರ್ಘ ಸಮಯ ವಿಚಾರ ವಿನಿಮಯ ನಡೆಸಿ, ಕ್ಷೇತ್ರಕ್ಕೆ ಅನುಕೂಲಕರವಾಗುವಂತಹ ಯೋಗ್ಯ ಅಭ್ಯರ್ಥಿ ನೀಡಿದೆ ಎಂದರು.
ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಡಿ.ನಾಯ್ಕ ಮಾತನಾಡಿ ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಸೂರ್ಯ ಚಂದ್ರರಷ್ಟೇ ಸತ್ಯ. ಇಂತಹ ಸಂದರ್ಭದಲ್ಲಿ ಕುಮಟಾ ಕ್ಷೇತ್ರದ ಅಭಿವೃದ್ಧಿಗಾಗಿ ನಿವೇದಿತ್ ಆಳ್ವಾರಂತಹ ಉತ್ತಮ, ಕ್ರಿಯಾಶೀಲ ವ್ಯಕ್ತಿ ವಿಧಾನಸಭೆಗೆ ಆಯ್ಕೆಯಾಗುವುದು ಸೂಕ್ತ ಎಂದರು.
ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಟಿಕೇಟ್ ಕೋರಿ ಅರ್ಜಿ ಸಲ್ಲಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರದೀಪ್ ನಾಯಕ ದೇವರಬಾವಿ, ರತ್ನಾಕರ ನಾಯ್ಕ, ಹೊನ್ನಪ್ಪ ನಾಯಕ,ಕೃಷ್ಣ ಗೌಡ ಮಾತನಾಡಿ, ನಮಗೆ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡದಿರುವ ಬಗ್ಗೆ ನಾವು ಯಾರೂ ಕೂಡಾ ನಿರಾಶರಾಗಿಲ್ಲ. ಆದರೆ ಕಾಂಗ್ರೆಸ್ ಪಕ್ಷ ನಿವೇದಿತ್ ಆಳ್ವಾರಂತಹ ಉತ್ತಮ, ಸಜ್ಜನ, ಅತ್ಯಂತ ಕ್ರಿಯಾಶೀಲ ಯುವಕನಿಗೆ ಟಿಕೇಟ್ ನೀಡಿರುವುದು ನಮ್ಮೇಲ್ಲರಿಗೂ ಹೆಮ್ಮೆ ತಂದಿದೆ ಎಂದರು.
ಕೆ.ಪಿ.ಸಿ.ಸಿ.ಸದಸ್ಯ ಎಮ್.ಎನ್.ಸುಬ್ರಮಣ್ಯ, ಯುವ ನಾಯಕ ಭುವನ ಭಾಗ್ವತ್, ಕಾಂಗ್ರೆಸ್ ಸೇವಾದಳದ ಆರ್.ಎಚ್.ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್ ಮಾತನಾಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಬಾರಿ ಕುಮಟಾ ವಿಧಾನ ಸಭಾ ಕ್ಷೇತ್ರದಲ್ಲಿ ನಿವೇದಿತ್ ಆಳ್ವಾರವರ ಗೆಲುವು ನಿಶ್ಚಿತವಾಗಿದ್ದು, ಬುಧವಾರ ದಿ.19ರಂದು ನಿವೇದಿತ್ ಆಳ್ವಾರವರು ಕುಮಟಾದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು. ಕೊನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್ ಮೇಸ್ತ ವಂದಿಸಿದರು. ಸಭೆಯಲ್ಲಿ ನೂರಾರು ಕಾರ್ಯಕರ್ತರು, ಪಕ್ಷದ ಮುಖಂಡರು ಬಾಗವಹಿಸಿದ್ದರು.

ಹೆಚ್ಚಿನ ಸುದ್ಧಿ ಹಾಗೂ ವಿವರಗಳೀಗಾಗಿ ಭಾವನಾ ನ್ಯೂಸ್ ನೋಡಿ

error: