May 18, 2024

Bhavana Tv

Its Your Channel

ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯ ತಿರುಚಿ ಬರೆದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಗ್ರಹ.

ಶಿರಸಿ: ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿದವರ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ , ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲೂಕು ಘಟಕಗಳು ಒತ್ತಾಯಿಸಿವೆ.

ಈ ಬಗ್ಗೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಗೌರವ ಕಾರ್ಯದರ್ಶಿ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಪಟೇಲ ಪಾಂಡು, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜೊರ್ಜ್ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಹಾಗೂ ತಾಲೂಕು ಘಟಕದವರು ಜಂಟಿ ಪ್ರಕಟಣೆ ನೀಡಿ ಒತ್ತಾಯಿಸಿದ್ದಾರೆ.

ಜಗದ ಕವಿ, ಯುಗದ ಕವಿ, ನಾಡು ಕಂಡ ಅಪ್ರತಿಮ ಮಹಾಕವಿ, ದಾರ್ಶನಿಕ, ರಸಋಷಿ ಕುವೆಂಪು ಅವರಿಗೆ ಅತ್ಯಂತ ಗೌರವ ಸಲ್ಲಿಸುವ ಸಂಸ್ಥೆ ಕರ್ನಾಟಕದಲ್ಲಿ ಯಾವುದಾದರೂ ಇದೆ ಅಂದರೆ, ಅದು ಕನ್ನಡ ಸಾಹಿತ್ಯ ಪರಿಷತ್ತು. ಕುವೆಂಪು ವಿರಚಿತ “ಜಯಭಾರತ ಜನನಿಯ ತನುಜಾತೆ” ಗೀತೆಯನ್ನು “ನಾಡಗೀತೆ” ಮಾಡಬೇಕೆಂದು ಮೊದಲ ಅಳವಡಿಸಿಕೊಂಡಿದ್ದು ಸಾಹಿತ್ಯ ಪರಿಷತ್ತು. 1971ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಪರಿಷತ್ತು ನಾಡಗೀತೆಯನ್ನು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲು ಆರಂಭಿಸಿತ್ತು.

ಈ ಮೂಲಗೀತೆ 1924ರಲ್ಲಿ ರಚನೆಯಾಗಿ, ಇಂದಿಗೆ 98 ವರ್ಷವಾಯಿತು. ಎರಡು ಸಲ ಪರಿಷ್ಕರಣೆಗೊಂಡು ಮೈಸೂರಿನ ಸಂಪದಭ್ಯುದಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರ ಮತ್ತೆ ಪರಿಷ್ಕರಣೆಗೊಂಡು ಕುವೆಂಪು ಅವರ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಯಿತು. ಇದು ಭಾರತದ ಅಖಂಡತೆಯನ್ನೂ, ಭಾವೈಕ್ಯತೆಯನ್ನೂ ಎತ್ತಿ ಹಿಡಿಯುವ ಗೀತೆ. ಭಾರತಾಂತರ್ಗತ ಕರ್ನಾಟಕ, ಕರ್ನಾಟಕಾಂತರ್ಗತ ಭಾರತ ಎಂಬುದನ್ನು ಆವೇಶವಿಲ್ಲದೆ, ಘೋಷಣೆಗಳಿಲ್ಲದೆ ಸಾರುವ ಭಾವನಾತ್ಮಕ ಗೀತೆಯಿದು. ಇಂತಹ ಅಪರೂಪದ ಗೀತೆಯನ್ನು ಪರಿಷತ್ತು ನಾಡಗೀತೆಯಾಗಿ ಆರಿಸಿತು. ಅದರ ಅನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು ಅಂಗೀಕರಿಸಿ, ಪರಿಷತ್ತಿನ ಆಯ್ಕೆಯನ್ನು ದೃಢಗೊಳಿಸಿ, 6-1-2004ರಂದು ಕರ್ನಾಟಕದ ನಾಡಗೀತೆಯನ್ನಾಗಿ ಆದೇಶ ಹೊರಡಿಸಿತು.

ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಹಾಗೂ ಇತರೆ ಮಾದ್ಯಮಗಳಲ್ಲಿ ನೋಡುವ,
ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ.

“ಮನುಜ ಮತ ವಿಶ್ವಪಥ” ಎಂಬ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಪ್ರಕೃತಿಯಲ್ಲಿ ದೇವರನ್ನು ಕಾಣುವ, ದೇವರಲ್ಲಿ ಪ್ರಕೃತಿಯನ್ನು ಕಾಣುವ ದೈವಿಕ ಸಂಬAಧಗಳನ್ನು ಪ್ರತಿಪಾದಿಸಿದ ಸರ್ವೋದಯ ತತ್ವಪ್ರತಿಪಾದಕರು ಕುವೆಂಪು ಅವರು. ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ಜಗತ್ತು “ಸರ್ವಜನಾಂಗದ ಶಾಂತಿಯ ತೋಟ”ವಾಗಬೇಕೆಂದು ಕನಸು ಕಂಡ ಶ್ರೇಷ್ಠ ದಾರ್ಶನಿಕರು. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿಗಳು. ಅವರ ಸಾಹಿತ್ಯವನ್ನು ಓದಿದವರ್ಯಾರೂ ಸಹ ಕುವೆಂಪು ಅವರ ಕುರಿತು ಮಾತನಾಡಲಾರರು. ಯಾರು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿಯನ್ನು ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ.

ಕುವೆಂಪು ಅವರ ಪುಸ್ತಕಗಳನ್ನು ಬಹಳ ಗೌರವದಿಂದ, ಭಕ್ತಿಯಿಂದ ಓದುವ ನಾವು, ಅವರ ಪ್ರಕೃತಿ ವರ್ಣನೆಗೆ ಮಾರುಹೋಗುವುದರ ಜೊತೆಗೆ, ಅವರ ಶ್ರೇಷ್ಠ ಚಿಂತನೆಗಳಿAದ ಪ್ರೇರಿತರಾಗಿ “ಮನುಜ ಮತದಲ್ಲಿ” ನಂಬಿಕೆ ಇಟ್ಟಂಥವರು. ಕುವೆಂಪು ಅವರ ಚಿಂತನೆಯ ಮಾರ್ಗದಲ್ಲಿಯೇ, ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ತಿಳಿದುಕೊಳ್ಳದೇ ಮಾತನಾಡುವುದು ಶೋಭೆಯಲ್ಲ. ಹಿನ್ನೆಲೆ ತಿಳಿದುಕೊಳ್ಳದೇ ಮಾತನಾಡುವುದು, ಅವರ ಬೇಜವಾಬ್ದಾರಿತನವನ್ನು ಹಾಗೂ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಹಾಗಾಗಿ ಕುವೆಂಪು ಅವರನ್ನು ನಿಂದಿಸಿದವರ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ , ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.

error: