May 17, 2024

Bhavana Tv

Its Your Channel

ಕವಿಯನ್ನು ಮಹಾಕವಿಯನ್ನಾಗಿಸುವ ಶಕ್ತಿ ಛಂದಸ್ಸಿಗಿದೆ -ಎಂ ಮುತ್ತುಸ್ವಾಮಿ

ವರದಿ:ವೇಣುಗೋಪಾಲ ಮದ್ಗುಣಿ

ಸಿರ್ಸಿ : “ಮುಕ್ತಕ ರಚನೆಯು ಛಂದಸ್ಸಿನ ಒಂದು ಪ್ರಕಾರವಾಗಿದ್ದು 4 ಸಾಲುಗಳಲ್ಲಿ ವಿಷಯವನ್ನು ರಸಾನುಭವದೊಂದಿಗೆ ಮನೋಜ್ಞವಾಗಿ ಚಿತ್ರಿಸಿ ವ್ಯಕ್ತಪಡಿಸಬಹುದಾಗಿದೆ. ಡಿವಿಜಿಯವರ ಮುಕ್ತಕಗಳೇ ಇದಕ್ಕೆ ಸಾಕ್ಷಿ. ಕವಿಯನ್ನು ಮಹಾಕವಿಯನ್ನಾಗಿಸುವ ಶಕ್ತಿ ಛಂದಸ್ಸಿಗಿದೆ. ಹಳೆಗನ್ನಡದ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಹರಿಹರ, ಕುಮಾರವ್ಯಾಸ, ಲಕ್ಷ್ಮೀಶ, ನಾಗಚಂದ್ರ ಮುಂತಾದವರು ಛಂದೋಬದ್ಧ ರಚನೆಗಳಿಂದಲೇ ಪ್ರಖ್ಯಾತರಾದವರು.” ಎಂದು ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತಿನ ರಾಜ್ಯಾಧ್ಯಕ್ಷರು, ಖ್ಯಾತ ಮುಕ್ತಕ ಕವಿಗಳಾದ ಎಂ ಮುತ್ತುಸ್ವಾಮಿಯವರು ಮುಕ್ತಕ ಸಿರಿ ಕೃಷ್ಣ ಪದಕಿಯವರ ಸಂಪಾದಿತ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಕರ್ನಾಟಕ ರಾಕ್ಯ ಮುಕ್ತಕ ಕವಿ ಪರಿಷತ್ತು ಮೈಸೂರು, ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಸಾಹಿತ್ಯ ಸಂಚಲನ ಶಿರಸಿಯ ಸಂಯುಕ್ತಾಶ್ರಯದಲ್ಲಿ ನಡೆದ ಮುಕ್ತಕ ಸಿರಿ ಕೃತಿ ಲೋಕಾರ್ಪಣೆ ಮತ್ತು ಮುಕ್ತಕ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
“ಮುಕ್ತಕವೆಂದರೆ ಮುತ್ತು ಎಂದರ್ಥ ಆಭರಣಗಳಲ್ಲಿ ಬಳಸಿದಾಗ ಅಂದವನ್ನು ಹೆಚ್ಚಿಸುವಂತೆ ಸಾಹಿತ್ಯದ ಅಂದವನ್ನು ವೃದ್ಧಿಸುವಂಥ ಮುತ್ತುಗಳೇ ಮುಕ್ತಕಗಳು. ಮುಕ್ತಕ ಗೋಷ್ಠಿಯಲ್ಲಿ ವಾಚಿಸಿರುವ ಕವಿಗಳೆಲ್ಲರ ಮುಕ್ತಕಗಳು ಪ್ರಬುದ್ಧತೆಯಿಂದ ಕೂಡಿದ್ದು. ಮುಕ್ತಕ ಸಿರಿ ಕೃತಿಯಲ್ಲಿರುವ ರಚನೆಗಳು ಸಹ ಉತ್ತಮವಾಗಿವೆ. ಸಂಪಾದಕರ ಶ್ರಮ ಸಾರ್ಥಕವಾಗಿದೆ.” ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲೆಯ ಖ್ಯಾತ ಸಾಹಿತಿ, ಮಧುರಕವಿ, ಸ್ವರ್ಣವಲ್ಲೀ ಪ್ರಭಾ ಮಾಸಿಕ ಸಂಪಾದಕರಾದ ವನರಾಗ ಶರ್ಮಾವರು ಕಾವ್ಯ ರಚನೆಗಳ ಬಗ್ಗೆ ವಿವರಿಸುತ್ತಾ ಅಭಿಪ್ರಾಯ ವ್ಯಕ್ತ ಪಡಿಸಿದರು.
ಉಪಾಧ್ಯಕ್ಷರಾದ ಕೆ.ಟಿ ಶ್ರೀಮತಿ ಯವರು
ಸಾಂದರ್ಭಿಕವಾಗಿ ಮಾತನಾಡಿ ಕವಿಗಳನ್ನು ಹುರಿದುಂಬಿಸಿದರು. ಮುಕ್ತಕ ಕವಿ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಮನೋಹರ ಮಲ್ಮನೆಯವರು ಆಶಯ ನುಡಿಗಳನ್ನಾಡಿದರು, ಜಂಟಿ ಕಾರ್ಯದರ್ಶಿ ಗಣಪತಿ ಭಟ್ ವರ್ಗಾಸರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಜಗದೀಶ ಭಂಡಾರಿಯವರು ಕೃತಿ ಪರಿಚಯವನ್ನು ಸೊಗಸಾಗಿ ಮಾಡಿದರು. ಸಾಹಿತ್ಯ ಸಂಚಲನದ ಸಂಚಾಲಕರಾದ ದತ್ತಗುರು ಕಂಠಿ ಮತ್ತು ಮುಕ್ತಕ ಕವಿ ಕೃಷ್ಣ ಪದಕಿ, ಕವಿ ಅನಂತ ತಾಮ್ಹನಕರ ವೇದಿಕೆಯಲ್ಲಿ, ಉಪಸ್ಥಿತರಿದ್ದರು. ಉತ್ತರ ಕನ್ನಡ ಜಿಲ್ಲಾ ಘಟಕದಲ್ಲಿ ಉಪಾಧ್ಯಕ್ಷೆಯಾಗಿ ಶೋಭಾ ಭಟ್, ಕಾರ್ಯದರ್ಶಿಯಾಗಿ ದಾಕ್ಷಾಯಿಣಿ ಪಿ ಸಿ, ಸಹ ಕಾರ್ಯದರ್ಶಿಯಾಗಿ ವಿಮಲಾ ಭಾಗ್ವತ ಮತ್ತು ಖಜಾಂಚಿಯಾಗಿ ಮಂಗಳಗೌರಿ ಭಟ್ ಅವರನ್ನು ನಿಯುಕ್ತಿಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಾ ಸೇವಾ ನಿರತ ಮನೋಜ ಪಾಲೇಕರ, ಸಮಾಜ ಸೇವಾ ನಿರತ ಸತೀಶ ಎಮ್ ನಾಯ್ಕ ಮತ್ತು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರದೀಪ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕವಿಗೋಷ್ಠಿಯಲ್ಲಿ ಮಹೇಶಕುಮಾರ ಹನಕೆರೆ, ದೀಪಾಲಿ ಸಾಮಂತ, ಶೋಭಾ ಭಟ್, ದಾಕ್ಷಾಯಿಣಿ ಪಿ ಸಿ, ನಿರ್ಮಲಾ ಹೆಗಡೆ, ಶರಾವತಿ ಭಟ್, ಅನಂತ ತಾಮ್ಹನಕರ, ಮಂಗಳಗೌರಿ ಭಟ್, ವಿಮಲಾ ಭಾಗ್ವತ, ಕಲಾವತಿ ಮಧುಸೂದನ್, ವಿದ್ಯಾ ಭಾವೆ, ರೇವತಿ ಭಟ್, ಶರಾವತಿ ಪಟಗಾರ, ವಿಜಯಾ. ಗ. ಶೆಟ್ಟಿ, ಲತಾ. ರಾ. ಹೆಗಡೆ ಅವರುಗಳು ಭಾಗವಹಿಸಿ ಮೆರಗು ತುಂಬಿದರು. ಕೊನೆಯಲ್ಲಿ ಕೃಷ್ಣ ಪದಕಿಯವರು ವಂದಿಸಿದರು. ಯಶಸ್ವಿ ನಿರೂಪಣೆಯಲ್ಲಿ ಹೆಸರು ಗಳಿಸಿರುವ ಕವಯತ್ರಿ ಕಥೆಗಾರ್ತಿ ಪ್ರತಿಭಾ ಎಂ, ನಾಯ್ಕ ಮತ್ತು ಕಥೆಗಾರ ರಾಜು ಉಗ್ರಾಣಕರ ಅವರು ಸಭಾ ಕಾರ್ಯಕ್ರಮವನ್ನು ಶಿಸ್ತಿನಿಂದ ನಡೆಸಿಕೊಟ್ಟರು. ತದನಂತರ ನಡೆದ ತಾಳಮದ್ದಳೆಯಲ್ಲಿ ಶರಸೇತು ಬಂಧನ ಆಖ್ಯಾನ ಪ್ರದರ್ಶಿತವಾಯಿತು. ಹಿಮ್ಮೇಳದಲ್ಲಿ ಆರ್ ಎಲ್ ಹೆಗಡೆ ಸೋಂದಾ, ಆದರ್ಶ ಮಾರುತಿಪುರ ಭಾಗವತರಾಗಿ ಶ್ರೀಪತಿ ಹೆಗಡೆ ಕಂಚಿಮನೆ ಮದ್ದಳೆಯಲ್ಲಿದ್ದರು. ಮುಮ್ಮೇಳದಲ್ಲಿ ಅರ್ಜುನನಾಗಿ ರೋಹಿಣಿ ಹೆಗಡೆ, ಹನುಮಂತನಾಗಿ ಗಣಪತಿ ಭಟ್ ವರ್ಗಾಸರ, ಕೃಷ್ಣನಾಗಿ ದಾಕ್ಷಾಯಿಣಿ ಪಿ ಸಿ ಅರ್ಥವನ್ನು ಹೇಳಿದರು. ಕಾರ್ಯಕ್ರಮದ ಯಶಸ್ಸು ಉಪಸ್ಥಿತರ ನುಡಿಗಳಲ್ಲಿ ವ್ಯಕ್ತವಾಗುತ್ತಿದ್ದವು.

error: