May 6, 2024

Bhavana Tv

Its Your Channel

ಯಲ್ಲಾಪುರ ಪತಂಜಲಿ ಯೋಗ ಸಮಿತಿಯಿಂದ ಗುರು ಪೂರ್ಣಿಮಾ ದಿನ ಆಚರಣೆ

ಯಲ್ಲಾಪುರ:- ಮನುಷ್ಯನ ಆತ್ಮೋದ್ಧಾರವಾಗಲು ಪ್ರತಿಯೊಬ್ಬರಲ್ಲಿಯೂ ಋಷಿ ಪ್ರಜ್ಞೆ ಜಾಗೃತವಾಗಬೇಕು. ಡಾ.ವೆಂಕಟರಮಣ ಭಟ್ಟ
ಇಂದು ಮನುಷ್ಯನಿಗೆ ಬೇಕಾಗಿರುವುದು ಋಷಿ ಪ್ರಜ್ಞೆ ಇದರಿಂದ ಜೀವನ ಉದ್ಧಾರವಾಗಲು ಸಾಧ್ಯ. ಪ್ರಾಣಿ ಸಹಜ ವಾಗಿರುವುದು ಪ್ರಕೃತಿ ಸಂಸ್ಕರಣ ಪೂರಕವಾದ ಜೀವನ ಪದ್ಧತಿಯೇ ನಿಜವಾದ ಸಂಸ್ಕೃತಿ. ಮನುಷ್ಯ ಸಂಸ್ಕಾರವನ್ನು ರೂಢಿಸಿಕೊಂಡಾಗ ಮಾತ್ರ ಮನುಷ್ಯನಾಗುತ್ತಾನೆ ಇಲ್ಲವೇ ಪ್ರಾಣಿ ಸಹಜನಾಗುತ್ತಾನೆ. ಇದು ಡಾ. ವೆಂಕಟರಮಣ ಭಟ್ಟ ಅಷ್ಟಾವಧಾನಿಗಳು ಹಾಗೂ ಸಂಸ್ಕೃತ ಪ್ರಾಧ್ಯಾಪಕರು ರಾಮಕೃಷ್ಣ ಮಠ, ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಕೋಲ್ಕತಾ ಅವರ ನುಡಿ.
ಶ್ರೀಯುತರು ಯಲ್ಲಾಪುರದ ಅಡಿಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ಜರುಗಿದ ಗುರು ಪೂರ್ಣಿಮೆ ಆಚರಣೆಯ ವಿಶೇಷ ಉಪನ್ಯಾಸಕರಾಗಿ ಪ್ರವಚನ ನೀಡಿದರು. ಗುರು ತತ್ವವನ್ನು ವರ್ಣಿಸುವುದು ಮಾತಿನಲ್ಲಿ ಸಾಧ್ಯವಿಲ್ಲದ್ದು ಇದರಲ್ಲಿ ವೇದಗಳೂ ಸೋತಿವೆ. ದತ್ತಾತ್ರೇಯನ ಎದುರು ನಮ್ಮನ್ನು ಪಾಲನೆ ಮಾಡುವ ಚತುರ್ವೇದಗಳು ಮೂಕವಾಗಿ ಕುಳಿತಿರುವಾಗ ಆದಿ ಗುರುವಿನ ದಿವ್ಯತೆ ಊಹಿಸಲಸಾಧ್ಯವಾದುದು. ಅಂತೆಯೇ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದ ಮಹಾತ್ಮರೂ ಕೂಡ ತಾವು ಕಂಡ ಪರಮಾತ್ಮನನ್ನು ಲೋಕದ ಮುಂದೆ ವರ್ಣಿಸಿದರೇ ವಿನಹ ಅವನನ್ನು ಇಡಿಯಾಗಿ ವರ್ಣಿಸಿದವರಿಲ್ಲ. ಸತ್ಯಂ ಜ್ಞಾನಂ ಅನಂತA ಪರಮಾತ್ಮ ಎಂದಿರುವುದು ಇದೇ ಕಾರಣಕ್ಕೆ ಅದೇ ಗುರುತತ್ವ.
ಚಕ್ರ ಪರಿವರ್ತನಾ ಎಂದು ಉಲ್ಲೇಖವಿರುವಂತೆ ಬುದ್ಧನು ಗುರುವಾಗಿ ಪರಮಾತ್ಮನ ಪ್ರಾಪ್ತಿಗಾಗಿ ಅನುಸರಿಸುವ ತತ್ವವನ್ನು ಬೋಧಿಸಿದ. ಇಂದು ದೇಶ ವಿದೇಶಗಳಲ್ಲಿ ಜೈನ ಬೌದ್ಧ ಧರ್ಮಗಳಲ್ಲಿಯೂ ಗುರುಪೂರ್ಣಿಮೆಗೆ ವಿಶಿಷ್ಟ ಸ್ಥಾನವಿದೆ. ವೈದಿಕ ಪರಂಪರೆಯಲ್ಲಿ ವ್ಯಾಸ ಮಹರ್ಷಿಗಳ ಜನ್ಮದಿನ ಗುರುಪೂರ್ಣಿಮೆ. ವ್ಯಾಸ ಎಂಬುದು ಪದವಿ ಇದು ಪ್ರತಿ ಕಲ್ಪಾಂತ್ಯದಲ್ಲಿಯೂ ಮತ್ತೆ ಜನ್ಮ ತಾಳುತ್ತದೆ. ವಿಸ್ಯತಿ ಇತಿ ವ್ಯಾಸ ಅಂದರೆ ವಿಂಗಡಿಸಿ ಹೇಳುತ್ತಾನೆ ಎಂದು ಅರ್ಥ. ಕಲಿಕಾಲ ಪ್ರಾರಂಭದಲ್ಲಿ ಜನರಿಗೆ ಅರ್ಥವಾಗುವಂತೆ ಚತುರ್ವೇದಗಳನ್ನು ವಿಂಗಡಿಸಿ ಅರ್ಥೈಸಿದವರು ವ್ಯಾಸರು. ೧೮ಪುರಾಣ ಮತ್ತು ಮಹಾಭಾರತ ಎಂಬ ಸ್ಮ್ರತಿಗಳನ್ನು ಬರೆದರು. ಬ್ರಹ್ಮಸೂತ್ರದಂತಹ ಪ್ರಮಾಣ ಗ್ರಂಥವನ್ನು ನೀಡಿ ಜೀವನದಲ್ಲಿ ಯಾವುದು ಸಾರವತ್ತಾದದ್ದು ಯಾವುದು ಜೊಳ್ಳು ಎಂದು ತಿಳಿಸಿ ನಮ್ಮ ಜೀವನ ತತ್ವವನ್ನೇ ವಿಂಗಡಿಸಿದ್ದರಿAದ ಅವರು ವ್ಯಾಸರಾದರು.
ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ ಅದರ ಉದ್ದೇಶವು ಒಳ್ಳೆಯದೇ ಆದರೆ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರ ದಿನ ಎಂದಿದ್ದರೆ ಅದು ಗುರುಪೂರ್ಣಿಮೆ ಎನ್ನಬಹುದಾಗಿದೆ.
ಕೃಷ್ಣನನ್ನು ಜಗದ್ಗುರು ಎಂದು ಕರೆದು ಆ ಜಗದ್ಗುರುವಿನ ಲೋಕೋದ್ಧಾರಕ ಲೀಲೆಗಳನ್ನು ಗುರುತಿಸಲು ವ್ಯಾಸ ದೃಷ್ಟಿಯೇ ಬೇಕಾಗುತ್ತದೆ ಅದು ಸರ್ವಜ್ಞ ದೃಷ್ಟಿ ಅಂತೆಯೇ ವ್ಯಾಸಾಯ ವಿಷ್ಣುರೂಪಾಯ ಎಂದು ಕರೆಯಲಾಗಿದೆ. ತಮಸೋಮ ಜ್ಯೋತಿರ್ಗಮಯ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸನ್ಮಾರ್ಗದಲ್ಲಿ ನಡೆಸುವವನು ಗುರು. ಲೌಕಿಕ ಆಧ್ಯಾತ್ಮಿಕ ಮಾರ್ಗದಲ್ಲಿ ಗುರುವಿನ ಮಾರ್ಗದರ್ಶನ ಬೇಕೇ ಬೇಕು ಎಂದು ಮಾರ್ಮಿಕವಾಗಿ ಸೋಹುದಾರಣವಾಗಿ ವಿಶ್ಲೇಷಿಸಿದರು.
ಕಾರ್ಯಕ್ರಮವನ್ನು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ ಹೆಗಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ ಅಗ್ನಿಹೋತ್ರಿ ನೆರವೇರಿಸಿದರು. ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ ಭಟ್ಟ ಶಿಗೇಪಾಲ, ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಮಾರುತಿ ಘಟ್ಟಿ, ಮಹಿಳಾ ಪತಂಜಲಿ ಪ್ರಭಾರಿ ಶೈಲಜಾ ಭಟ್ಟ ಜಿ.ಎಸ್ ಭಟ್ಟ ವಕೀಲರು, ನಾಗೇಶ ರಾಯಕರ, ಕಾರ್ಯದರ್ಶಿ ಸತೀಶ್ ಹೆಗಡೆ ಹಾಗೂ ಎಲ್ಲಾ ಸದಸ್ಯರು ಇದ್ದರು ಪತಂಜಲಿ ಯೋಗ ಸಮಿತಿ ಎಲ್ಲಾ ಯೋಗ ಬಂಧುಗಳು ಸಾರ್ವಜನಿಕರು ಭಾಗವಹಿಸಿದ್ದರು. ಪತಂಜಲಿ ಜಿಲ್ಲಾ ಯುವ ಪ್ರಭಾರಿ ದಿವಾಕರ ಮರಾಠಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಸ್ವಾತಿ ಪ್ರಣತಿ ಗುರು ಅಷ್ಟಕ ಹೇಳಿದರು. ಶಿಕ್ಷಕ ಸುಬ್ರಾಯ ಭಟ್ಟ ನಿರ್ವಹಿಸಿ ವಂದಿಸಿದರು. ಗುರುಪೂರ್ಣಿಮೆ ನಿಮಿತ್ತ ಪತಂಜಲಿ ಗುರುಪೀಠ ಹರಿದ್ವಾರಕ್ಕೆ ಎಲ್ಲಾ ಯೋಗ ಬಂಧುಗಳು ಗುರುಕಾಣಿಕೆಯನ್ನು ಸಮರ್ಪಿಸಿದರು.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ.

error: