April 28, 2024

Bhavana Tv

Its Your Channel

ತಾಲ್ಲೂಕಿನಲ್ಲಿ ನಿಲ್ಲದ ನರೇಗಾ ಅಕ್ರಮಗಳು; ಕಣ್ಮುಚ್ಚಿ ಕುಳಿತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು?

ಬಾಗೇಪಲ್ಲಿ: ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಯರಯ್ಯಗಾರಪಲ್ಲಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕಾಲುವೆ ಕಾಮಗಾರಿಯನ್ನು ಕೂಲಿಕಾರರಿಂದ ಕಾಮಗಾರಿ ನಡೆಸದೇ, ರಾತ್ರೋರಾತ್ರಿ ಜೆಸಿಬಿ ಯಂತ್ರಗಳಿAದ ಮಾಡಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆರೋಪಿಸಿದರು.

ಕೊರೋನಾ ಲಾಕ್ಡೌನ್ ನಿಂದಾಗಿ ಜನರ ಜೀವನ ಅಸ್ತವ್ಯಸ್ತವಾಯಿತು. ಇಂತಹ ಸಂದರ್ಭದಲ್ಲಿ ಗ್ರಾಮೀಣ ಕೂಲಿಕಾರರಿಗೆ ನರೇಗಾ ಯೋಜನೆಯು ಊರುಗೋಲಾಗಿದೆ ನಿಂತಿತ್ತು. ಆದರೆ ಈ ಊರುಗೋಲನ್ನು ಪಾಳ್ಯಕೆರೆ ಗ್ರಾಮ ಪಂಚಾಯತಿಯ ಪಿಡಿಓ, ಡೇಟಾ ಆಪರೇಟರ್, ಬಿಲ್ ಕಲೆಕ್ಟರ್ ಗಳ ಭ್ರಷ್ಟವ್ಯವಸ್ಥೆಯಿಂದಾಗಿ ಕಸಿದುಕೊಂಡಿದೆ ಎಂದು ಸಂಸದ ಸಂಚಾಲಕ ನರಸಿಂಹಪ್ಪರವರು ಆಕ್ರೋಶ ವ್ಯಕ್ತಪಡಿಸಿದರು .

ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೂಲಿಕಾರರಿಂದ ಮಾಡಿಸಬೇಕಾದ ನರೇಗಾ ಯೋಜನೆಯ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ನಡೆಸಲಾಗುತ್ತಿದೆ. ಕೊರೋನಾ ಲಾಕ್ಡೌನ್ ನಿಂದಾಗಿ ಕೂಲಿಕಾರರಿಗೆ ವರದಾನವಾಗಬೇಕಿದ್ದ ನರೇಗಾ ಯೋಜನೆಯು ಭ್ರಷ್ಟರಿಂದಾಗಿ ಕೂಲಿಕಾರರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಬೆಂಗಳೂರಿನಲ್ಲಿ ಖಾಸಗೀ ಕಂಪನಿಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದವರು, ಲಾಕ್ಡೌನ್ ನಿಂದ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಸ್ವಗ್ರಾಮಗಳಲ್ಲಿ ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ನರೇಗಾ ಯೋಜನೆಯ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಅವರು ಕೂಲಿಕಾರರಿಂದ ಕಾಮಗಾರಿ ಕೆಲಸಗಳನ್ನು ಮಾಡಿಸದೇ ಜೆಸಿಬಿ ಯಂತ್ರಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಬಡ ಕೂಲಿಕಾರರ ಕೆಲಸವನ್ನು ಕಿತ್ತುಕೊಂಡAತಾಗಿದೆ ಎಂದು ಸಿಪಿಐಎಂ ಮುಖಂಡ ಮಂಜುನಾಥರವರು ಅಭಿಪ್ರಾಯ ವ್ಯಕ್ತಪಡಿಸಿದರು .

ತಾಲ್ಲೂಕಿನಲ್ಲಿ ಬಡವರಿಗೆ ಕೂಲಿ ನೀಡಿ, ಹಸಿವು ನೀಗಿಸುವ ನರೇಗಾ ಯೋಜನೆಯು ಭ್ರಷ್ಟರಿಂದಾಗಿ ಗುತ್ತಿಗೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಇಂತಹ ದುರುಪಯೋಗಗಳನ್ನು ಶೀಘ್ರವೇ ತಡೆಯಬೇಕಿದೆ ಎಂದರು.

ತಾಲ್ಲೂಕಿನ ಗ್ರಾಮ ಪಂಚಾಯತಿ ಕಚೇರಿಗಳ ವ್ಯಾಪ್ತಿಯಲ್ಲಿ ಕಂಪ್ಯೂಟರ್ ಆಪರೇಟರ್, ಪಿಡಿಓಗಳು, ಗುತ್ತಿಗೆದಾರರೊಂದಿಗೆ ಸೇರಿ ಅಕ್ರಮವೆಸಗಿದ್ದಾರೆ. ಈ ರೀತಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಡಿವೈಎಫ್ ನ ಮುಖಂಡ ಐವಾರಪಲ್ಲಿ ಹರೀಶ್ ಒತ್ತಾಯಿಸಿದರು.

ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಜೊತೆಗೆ ಕೆಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಿಬ್ಬಂದಿಯು ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಮತ್ತು ಕಳಪೆ ಕಾಮಗಾರಿ ನಡೆಸುವವರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದಸಂಸ ತಾಲ್ಲೂಕು ಸಂಚಾಲಕರಾದ ಎಂ.ವಿ ಲಕ್ಷ್ಮೀನರಸಿಂಹಪ್ಪ, ಜಲಿಪಿಗಾರಪಲ್ಲಿ ನರಸಿಂಹಪ್ಪ, ಜಯಂತ್, ಹೊಸಹುಡ್ಯ ಗೋಪಿ, ಕೋಟಪ್ಪ, ಎಲ್ ಎನ್ ನರಸಿಂಹಯ್ಯ, ಡಿಕೆ ರಮೇಶ್, ರವಿಕುಮಾರ್ ಹೋಬಳಿ ಪದಾಧಿಕಾರಿಗಳಾದ ಬತ್ತಲವಾರಪಲ್ಲಿ ನರಸಿಂಹಪ್ಪ, ಗೊಲ್ಲಪಲ್ಲಿ ಮಂಜುನಾಥ, ಡಿವಿ ವೆಂಕಟೇಶ್ ಮತ್ತಿತರರು ಆಗ್ರಹಿಸಿದರು.

ವರದಿ: ಗೋಪಾಲರೆಡ್ಡಿ ಬಾಗೇಪಲ್ಲಿ

error: