April 27, 2024

Bhavana Tv

Its Your Channel

ಜನರ ನೆಮ್ಮದಿ ಕಸಿದ ಕಲ್ಲುಗಣಿಗಾರಿಕೆ

ಬಾಗೇಪಲ್ಲಿ: ಬರಗಾಲ ಹಾಗೂ ಹಿಂದುಳಿದ ಪ್ರದೇಶವಾಗಿರುವ ತಾಲ್ಲೂಕಿನ ಮಾರಗಾನಕುಂಟೆ, ಕೊತ್ತಕೋಟೆ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಜನರ ನೆಮ್ಮದಿ ಹಾಳಾಗಿದೆ. ಆದರೆ ಜಿಲ್ಲಾಡಳಿತ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಾಗೇಪಲ್ಲಿ ತಾಲ್ಲೂಕು ಅನೇಕ ಬೆಟ್ಟ ಗುಡ್ಡಗಳಿಂದ ಕೂಡಿರುವ ಸುಂದರ ಪ್ರದೇಶ. ಆದರೆ ಈಗ ಆ ಸೌಂದರ್ಯವೆಲ್ಲಾ ಗಣಿಗಾರಿಕೆಗೆ ಕರಗಿದೆ. ನಿರಂತರ ಗಣಿಗಾರಿಕೆ ಪರಿಸರ ನಾಶಕ್ಕೆ ಕಾರಣವಾಗಿದೆ. ಇದರಿಂದ ಅಂತರ್ಜಲ ಪಾತಾಳ ಕಂಡಿದೆ. ವರುಣನ ಕೃಪೆಯಂತೂ ಇಲ್ಲವೇ ಇಲ್ಲ. ಈ ಪರಿಸ್ಥಿತಿಯಲ್ಲಿ ಜನರು ಕುರಿ, ಮೇಕೆಗಳು ಮಾರಿ ಜೀವನ ಸಾಗಿಸುವ ದುಸ್ಥಿತಿ ಎದುರಾಗಿದೆ.

ಗಣಿ ಇಲಾಖೆ ಇದೆಯೇ: ಒಂದೂವರೆ ದಶಕದಿಂದ ಮಾರಗಾನಕುಂಟೆ, ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರಿ ಜಾಗವನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಕೆಲವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಬೆಟ್ಟ ಗುಡ್ಡಗಳೆಲ್ಲ ಕಲ್ಲು ಗಣಿಗಾರಿಕೆಗೆ ಬಲಿಯಾಗಿವೆ. ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜೀವಂತವಾಗಿದೆಯೇ ಎನ್ನುವುದು ಗ್ರಾಮಸ್ಥರ ಪ್ರಶ್ನೆ.

ತಾಲ್ಲೂಕಿನಲ್ಲಿ ಪರಿಸರ ನಾಶಕ್ಕೆ ಕಾರಣವಾದ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದ್ದು, ಪ್ರಶ್ನಿಸುವವರೇ ಇಲ್ಲದಂತಾಗಿದೆ. ಗಣಿಗಾರಿಕೆಗೆ ಅನುಮತಿ ನೀಡಬೇಕಾದರೆ ಹಲವಾರು ಷರತ್ತುಗಳನ್ನು ವಿಧಿಸಿ ಪರವಾನಗಿ ನೀಡಿರುತ್ತಾರೆ. ಆದರೆ ಆ ಷರತ್ತುಗಳನ್ನು ಎಷ್ಟರ ಮಟ್ಟಿಗೆ ಕಲ್ಲುಗಣಿಗಾರಿಕೆ ನಡೆಸುವವರು ಪಾಲಿಸುತ್ತಿದ್ದಾರೆ ಎಂಬ ಪರಿಶೀಲನೆಯೂ ಮಾಡಲು ಯಾರೂ ಮುಂದಾಗುತ್ತಿಲ್ಲ. ಅದಕ್ಕೆ ತಾಜಾ ಉದಾಹರಣೆ ಇಂದು ಪಟ್ಟಣದಲ್ಲಿ ರಾಜಾರೋಷವಾಗಿ ಹತ್ತಾರು ಟನ್ ಗಳಷ್ಟು ಭಾರದ ಕಲ್ಲು ದಿಮ್ಮಿಗಳನ್ನು ಹೊತ್ತ ಲಾರಿಗಳು ಹಾದುಹೋದವು. ಯಾವುದೇ ಪೊಲೀಸರಾಗಲಿ, ಆರ್ ಟಿ ಓ ಕಚೇರಿಯವರಾಗಲಿ ಕ್ಯಾರೆ ಎನ್ನುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಮ್ಮ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಕಲ್ಲುಗಣಿಗಾರಿಕೆಯಿಂದಾಗಿ ಈ ಭಾಗದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಟ್ಟಗುಡ್ಡಗಳ ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ರೈತಾಪಿ ಜನರಿಗೆ ಮಾರಕವಾಗಿರುವ ಕಲ್ಲು ಗಣಿಗಾರಿಕೆ ನಿಷೇಧಿಸಬೇಕು ಎಂದು ಡಿವೈಎಫ್‌ಐ ನ ಮುಖಂಡ ಐವಾರಪಲ್ಲಿ ಹರೀಶ್ ರವರು ಆಗ್ರಹಿಸಿದರು. ಕಲ್ಲುಗಣಿಗಾರಿಕೆಗೆ ಬಳಸುತ್ತಿರುವ ಸ್ಫೋಟಕಗಳಿಂದ ಹೊನ್ನಂಪಲ್ಲಿ, ಮಾಡಪ್ಪಲ್ಲಿ ಗ್ರಾಮಗಳ ಕೆಲ ಮನೆ, ಕಟ್ಟಡಗಳು ಬಿರುಕು ಬಿಟ್ಟಿವೆ. ಅನೇಕರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.

ಗಣಿ ದೂಳು ರೈತರ ಬೆಳೆಗಳಿಗೂ ಮಾರಕವಾಗಿದೆ. ಹುಣಸೆ, ನೇರಳೆ, ಕಕ್ಕೆ ಸೇರಿದಂತೆ ಬಗೆ ಬಗೆಯ ಗಿಡ ಮರಗಳು ನಶಿಸುತ್ತಿವೆ. ರಸ್ತೆ ಪಕ್ಕದಲ್ಲಿನ ಗಿಡ ಮರಗಳು ದೂಳಿನಿಂದ ಆವೃತವಾಗಿವೆ ಯಾವಾಗ ಮುಕ್ತ ಕಾಣುತ್ತೋ ಕಾದು ನೋಡಬೇಕು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: