May 3, 2024

Bhavana Tv

Its Your Channel

ಹೆಸರಿಗಷ್ಟೆ ಸಕ್ರಮ ಕಲ್ಲುಗಣಿಗಾರಿಕೆ, ಗಣಿಗಾರಿಕಾ ನಿಯಮಗಳು ಕಾಗದಕ್ಕೆ ಸೀಮಿತ!

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಸರ್ಕಾರದಿಂದ ಅನುಮತಿ ಪಡೆದು ಕಲ್ಲುಗಣಿಕಾರಿಕೆ ನಡೆಸುತ್ತಿರುವ ಪ್ರದೇಶಗಳಲ್ಲಿ ಗಣಿಗಾರಿಕಾ ನಿಯಮಗಳು ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತಾಲ್ಲೂಕಿನ ಬಹುದೊಡ್ಡ ಕಲ್ಲುಗಣಿಗಾರಿಕಾ ಪ್ರದೇಶವಾದ ಹೊನ್ನಂಪಲ್ಲಿ ಸಮೀಪದ ಮಾಡಪಲ್ಲಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯವರು ಸರ್ಕಾರದಿಂದ ಅನುಮತಿ ಪಡೆದಿದ್ದಾರೆ. ಆದರೆ ಗಣಿಗಾರಿಕೆ ನಡೆಸಲು ಹಾಕಿದ ಷರತ್ತುಗಳನ್ನು ಸಮರ್ಪಕ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಮಾಡಪಲ್ಲಿ ಗ್ರಾಮದಿಂದ ಅಣತಿ ದೂರದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿಕಾರಿಕಾ ಬೆಟ್ಟದ ಸುತ್ತಲೂ ರೈತರ ಜಮೀನುಗಳಿವೆ. ನಿತ್ಯವೂ ರೈತರು ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಗಣಿಕಾರಿಕೆಯವರು ಸ್ಪೋಟಿಸುವ ಸ್ಪೋಟಕಗಳು ಹಾಗೂ ಅವರು ಉರುಳಿಸುವ ಬೃಹತ್ ಕಲ್ಲುಬಂಡೆಗಳು ಅಡೆತಡೆ ಇಲ್ಲದೆ ನೇರವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ರೈತರು ಪ್ರಾಣಭೀತಿಯಲ್ಲೇ ಕೃಷಿ ಚಟುವಟಿಗಳು ನಡೆಸುಂತಾಗಿದೆ. ಹಾಗೂ ಜಮೀನುಗಳಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ.

ಯಾವುದೇ ಗಣಿಗಾರಿಕೆಗೆ ಅನುಮತಿ ನೀಡುವಾಗ ಪರಿಸರ ಮಾಲಿನ್ಯ, ರೈತರಿಗೆ ಹಾನಿ, ಜಲಮೂಲಗಳಿಗೆ ಹಾನಿಯುಂಟಾಗದAತೆ ಹಾಗೂ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡು ಗಣಿಗಾರಿಕೆ ನಡೆಸುವಂತೆ ಷರತ್ತುಗಳನ್ನು ವಿಧಿಸಿರುತ್ತಾರೆ. ಆದರೆ ಮಾಡಪಲ್ಲಿ ಬೆಟ್ಟದಲ್ಲಿ ಗಣಿಗಾರಿಕಾ ಪ್ರದೇಶದ ಸುತ್ತಲೂ ಬೇಲಿಯಾಗಲಿ, ಕಲ್ಲುಬಂಡೆಗಳು ಅತಿಕ್ರಮವಾಗಿ ಉರುಳದಂತೆ ತಡೆಯುವ ಯಾವ ಕ್ರಮವೂ ಕೈಗೊಂಡಿಲ್ಲ. ಅಪಾರವಾದ ಸಸ್ಯ ಸಂಪತ್ತಿರುವ ಈ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಅನುಮತಿ ನೀಡಿರುವುದೇ ಸೋಜಿಗವೆನಿಸಿದೆ.

ನಮ್ಮ ಜಮೀನು ಬೆಟ್ಟದ ತಪ್ಪಲಲ್ಲೆ ಇರುವುದರಿಂದ ಬೃಹತ್ ಬಂಡೆಗಳು ಉರುಳಿ ಬೀಳುತ್ತಿರುತ್ತವೆ. ಅದೇ ರೀತಿಯಲ್ಲಿ ಕಲ್ಲುಗಣಿಗಾರಿಕಾ ಲಾರಿಗಳ ಓಡಾಟಕ್ಕೆ ನಿರ್ಮಿಸಿಕೊಂಡ ರಸ್ತೆಯಿಂದಾಗಿ ಬೆಟ್ಟದ ಮಣ್ಣು ಆ ರಸ್ತೆಯ ಮೂಲಕ ಕೊಚ್ಚಿಕೊಂಡು ಬಂದು ನಮ್ಮ ಜಮೀನಿನಲ್ಲಿ ಮಣ್ಣಿನ ದಿಬ್ಬಗಳನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಬಿತ್ತಿದ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ರೈತ ಈಶ್ವರಪ್ಪರವರು ನೋವನ್ನು ತೋಡಿಕೊಂಡರು.

ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದಾಗಿ ಬೆಟ್ಟದಲ್ಲಿ ನಿರ್ಮಾಣವಾಗಿರುವ ಬೃಹತ್ ಹೊಂಡಗಳಲ್ಲಿ ಶೇಖರಣೆಯಾದ ಮಳೆ ನೀರು ನಮ್ಮ ಜಮೀನುಗಳಲ್ಲಿ ಜಿನುಗುತ್ತಿದೆ. ಇದರಿಂದಾಗಿ ನಮ್ಮ ಜಮೀನು ಪೂರ್ತಿ ಜೌಗು ಹಿಡಿದು ಬೆಳೆ ನಾಶವಾಗಿದೆ. ಈ ಬಗ್ಗೆ ನಮ್ಮ ನೋವಿಗೆ ಯಾವೊಬ್ಬ ರಾಜಕಾರಣಿಯಾಗಲಿ, ಅಧಿಕಾರಿಯಾಗಲಿ ಕಿವಿಗೊಡದಿರುವುದು ನಮ್ಮ ದುರದೃಷ್ಟವೇ ಸರಿ ಎಂದು ರೈತ ಲಕ್ಷ್ಮೀನರಸಪ್ಪರವರು ಆಕ್ರೋಶ ವ್ಯಕ್ತಪಡಿಸಿದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: