ಜಗತ್ತು ಮತ್ತು ದೇಶ ಕೊರೋನಾ ಸಂಕಷ್ಟದಲ್ಲಿರುವಾಗ ಸರ್ಕಾರದ ಆರೋಗ್ಯ ಇಲಾಖೆಯ ಎಲ್ಲ ಸೂಚನೆಗಳನ್ನು ಪಾಲಿಸುತ್ತ ನಮ್ಮ ಮನಸ್ಸನ್ನು ನಾವು ಸಂತೈಸಿಕೊಳ್ಳುತ್ತ ದೇಹದ ಆರೋಗ್ಯ ಕಾಪಾಡಿಕೊಂಡರೆ ರೋಗ ಹೆಚ್ಚು ಕಾಡಲಾರದು ಎಂದು ಮನೋ ವೈದ್ಯ ಡಾ. ವಿಶಾಲ ಹೇಳಿದ್ದಾರೆ.
ಪ್ರಸಿದ್ಧ ಮನೋವಿಜ್ಞಾನ ಸಂಸ್ಥೆ ನಿಮಾನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಾ. ವಿಶಾಲ ೫ವರ್ಷಗಳಿಂದ ನಗರದ ಸೇವಾ ಆಸ್ಪತ್ರೆ ಸೇಂಟ್ ಇಗ್ನೇಷಿಯಸ್‌ನಲ್ಲಿ ಮನೋವೈದ್ಯರಾಗಿ ಕೆಲಸಮಾಡುತ್ತಿದ್ದಾರೆ. ನೂರಾರು ಜನರಿಗೆ ಮದ್ಯಪಾನ ಬಿಡಿಸಿದ್ದು, ನಿತ್ಯ ನೂರಕ್ಕೂ ಹೆಚ್ಚು ಮನೋರೋಗಿಗಳಿಗೆ ಸಲಹೆ ನೀಡುತ್ತಾರೆ. ಜಿಲ್ಲೆಯಲ್ಲಿ ಎಲ್ಲ ಸಮಯದಲ್ಲಿ ಲಭ್ಯವಿರುವ ಏಕೈಕ ಮನೋವೈದ್ಯರಾದ ಇವರು ಮನವ ಸಂತೈಸಿಕೊಳ್ಳಿ, ತನುವ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.
ಅನಿರೀಕ್ಷಿತವಾಗಿ ಆಘಾತವಾದಾಗ ಬೇಸರ, ಗಾಬರಿ, ಕೋಪ, ಮತ್ತು ಆದೇಶಗಳ ವಿರುದ್ಧ ವರ್ತಿಸುವ ಮನೋಭಾವ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೇಸರವನ್ನು ಕಳೆಯಲು, ಗಾಬರಿ ಪಡದಿರಲು, ಕೋಪವನ್ನು ತಡೆದುಕೊಳ್ಳಲು ಮತ್ತು ಸರ್ಕಾರದ ಆದೇಶವನ್ನು ದಿಕ್ಕರಿಸಲು ಅಥವಾ ವಿರೋಧಿಸಲು ಮನಷ್ಯ ತೊಡಗುತ್ತಾನೆ. ಇದರಿಂದ ಹೊರಬರಬೇಕು. ಮನೋವಿಜ್ಞಾನಿಗಳು ಇದಕ್ಕೆ ಪರಿಹಾರ ಸೂಚಿಸಿದ್ದಾರೆ. ಮನೆಯಲ್ಲಿ ೨೧ ದಿನ ಉಳಿಯಬೇಕೆಂಬ ಬೇಸರ ಬೇಡ, ಜೀವನವಿಡೀ ದುಡಿದ ನಿಮಗೆ ಕುಟುಂಬದವರೊAದಿಗೆ ಕಾಲಕಳೆಯಲು ಇದೊಂದು ಅವಕಾಶವೆಂದುಕೊಳ್ಳಿ, ಏನೇನೋ ಆಗುತ್ತದೆ ಎಂದು ಸಾವುನೋವಿನ ಭೀತಿ ಬೇಕಾಗಿಲ್ಲ. ಯಾರೋ ರೋಗ ತಂದರೆAದು ಅವರ ಮೇಲೆ ಸಿಟ್ಟುಮಾಡಬೇಕಾಗಿಲ್ಲ. ಕರ್ಫ್ಯೂವನ್ನು ಉಲ್ಲಂಘಿಸಿ ನೋಡುತ್ತೇವೆ ಎಂಬ ಚಾಪಲ್ಯವು ಒಳ್ಳೆಯದಲ್ಲಿ. ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಮತ್ತು ವೈದ್ಯರು, ನರ್ಸ್ಗಳ ಮತ್ತು ಸ್ಥಳೀಯ ಆಡಳಿತದವರು ಶ್ರಮಪಟ್ಟು ದುಡಿಯುತ್ತಿದ್ದಾರೆ. ಅವರಿಂದ ಲೋಪವಾಗಬಹುದು ಸುಧಾರಿಸಿಕೊಳ್ಳಿ.
ದಿನವಿಡೀ ಟಿವಿ ನೋಡಬೇಡಿ, ಸಾವು ನೋವಿನ ಸುದ್ದಿಯನ್ನು ಪದೇಪದೇ ಕೇಳುತ್ತಿದ್ದರೆ, ನೋಡುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ಮಾನಸಿಕ ಆಯಾಸ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೋವಿಡ್೧೯ ವಿಷಯದಲ್ಲಿ ವಿಶ್ವಆರೋಗ್ಯ ಸಂಸ್ಥೆ ಹೇಳಿರುವುದನ್ನು ಕೇಳಿ, ನೋಡಿ. ಭಾರತ ಮತ್ತು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಯಾವುದನ್ನು ಹೇಳುತ್ತದೆಯೋ ಅದನ್ನು ಮಾತ್ರ ನಂಬಿ. ಫೇಸ್‌ಬುಕ್, ವಾಟ್ಸಪ್‌ಗಳಲ್ಲಿ ಬರುವ ಎಲ್ಲವನ್ನೂ ನಂಬಿದರೆ ಮನಸ್ಸಿಗೆ ಬೇಡದ ಆಲೋಚನೆಗಳು ಬರುತ್ತವೆ. ಮಾನಸಿಕ ಶಕ್ತಿ ಕುಂದಿದರೆ ದೈಹಿಕ ಶಕ್ತಿಯೂ ಕಡಿಮೆಯಾಗುತ್ತದೆ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿ. ಸಂಗೀತ ಕೇಳಿ, ಹಾಡು, ನರ್ತನ, ಭಜನೆ ಗೊತ್ತಿದ್ದರೆ ದಿನಕ್ಕೊಂದು ತಾಸು ಆ ಕೆಲಸಮಾಡಿ. ಪುಸ್ತಕಗಳನ್ನು ಓದಿ, ಪತ್ರಿಕೆಗಳನ್ನು ಓದಿ. ಮಕ್ಕಳೊಂದಿಗೆ ಕೆಲಹೊತ್ತು ಆಟ ಆಡಿ. ಮಕ್ಕಳನ್ನು ಹೊರಗೆ ಹೋಗಬೇಡಿ ಎಂದು ಹೆದರಿಸದೆ ಯಾಕೆ ಹೋಗಬಾರದು ಎಂದು ತಿಳಿಸಿ ಹೇಳಿ. ಭೀತಿ ಹುಟ್ಟಿಸುವುದಕ್ಕಿಂತ ಅವರ ಮನವೊಲಿಸಿ.
ವಿದ್ಯಾರ್ಥಿಗಳು ಪರೀಕ್ಷೆ ಮುಂದೆ ಹೋಗಿದೆ ಎಂದು ಚಿಂತಿಸಬೇಕಾಗಿಲ್ಲ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ನೀವು ಓದಿದ್ದನ್ನು ಅರ್ಧದಿನ ಪುನಃ ನೆನಪಿಸಿಕೊಳ್ಳಿ. ಉಳಿದ ಅರ್ಧದಿನ ಆಟವಾಡಿ. ಪರೀಕ್ಷೆಯ ದಿನ ನಿಗದಿಯಾದ ಮೇಲೆ ಇನ್ನಷ್ಟು ಸಮಯ ಓದಬಹುದು. ಅನಗತ್ಯವಾಗಿ ಸಾಮಾನುಗಳನ್ನು ಸಂಗ್ರಹಿಸಲು ಹೋಗಬೇಡಿ. ಸರ್ಕಾರ ನಿಮ್ಮ ಮನೆಗೇ ಆಹಾರ ವಸ್ತುಗಳನ್ನು ಪೂರೈಸಲಿದೆ. ಉದ್ಯೋಗ ಹಾಳಾಯಿತು, ಆದಾಯ ಕಡಿಮೆಯಾಯಿತು, ಮದುವೆ ನಿಂತು ಹೋಯಿತು, ಭವಿಷ್ಯದಲ್ಲಿ ಮುಂದೇನು ಎಂಬ ಚಿಂತೆ ಬೇಡ. ಆದದ್ದು ಆಗಿಯೇ ಆಗುತ್ತದೆ. ಎದುರಿಸುವಂತೆ ಮನಸ್ಸನ್ನು ಗಟ್ಟಿಮಾಡಿಕೊಳ್ಳಿ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯಕ್ಕೆ ಸಂಬAಧವಿದೆ. ಸಣ್ಣಪುಟ್ಟ ಸಮಸ್ಯೆಗಳಿಗೂ ನೊಂದುಕೊಳ್ಳುವ, ಚಿಂತೆಮಾಡುವ, ಗಾಬರಿಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ, ರೈತರಂತಹ ಮನಸ್ಥಿತಿ ತಂದುಕೊಳ್ಳಬೇಡಿ. ತಡೆಯಲಾರದ ಭಯವಿದ್ದರೆ ಮನೋವೈದ್ಯರಲ್ಲಿ ಚಿಕಿತ್ಸೆ ಲಭ್ಯವಿದೆ. ಅಂತೆ-ಕAತೆ, ಹಾಗಂತೆ-ಹೀಗAತೆ ಹೇಳಬೇಡಿ, ಕೇಳಬೇಡಿ. ಯಾರೋ ಹೇಳಿದ ವದಂತಿಗೆ ಕಿವಿಗೊಡಬೇಡಿ, ನಿದ್ದೆಗೆಡಬೇಡಿ. ಒಬ್ಬ ವ್ಯಕ್ತಿಗೆ ಕನಿಷ್ಠ ೮ತಾಸು ನಿದ್ದೆ ಬೇಕು, ೮ತಾಸು ನಿದ್ದೆ ಮಾಡಿ, ಮಧ್ಯಾಹ್ನವೂ ೨ತಾಸು ನಿದ್ದೆ ಮಾಡಿ, ನಿದ್ದೆ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯವಿದೆ. ಇಂತಹ ಸರಳ ಸಂಗತಿಗಳನ್ನು ಪಾಲಿಸಿ.
ಜಾಗತಿಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎಲ್ಲರ ಆರೋಗ್ಯದ ಮೇಲೆ ಕಣ್ಣಿಟ್ಟಿದೆ. ಕಾಲಕಾಲಕ್ಕೆ ಸೂಚನೆ ನೀಡುತ್ತಿದೆ. ಭಾರತ ಸರ್ಕಾರ, ವಿಷಯತಜ್ಞರೊಂದಿಗೆ ಸಮಾಲೋಚಿಸಿ ಕೊರೋನಾ ಸರಣಿಯನ್ನು ತುಂಡರಿಸುವುದಕ್ಕೆ ನಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು ಒಂದೇ ಮಾರ್ಗ ಎಂದು ಹೇಳಿದೆ. ನಿಮ್ಮನ್ನು ನೀವು ಮನೆಯಲ್ಲಿ ಉಳಿಯುವಂತೆ ಮಾಡಿಕೊಳ್ಳುವುದು, ಮನೆಯಲ್ಲಿಯೇ ಖುಷಿಯಾಗಿರಲು ಮಾರ್ಗ ಹುಡುಕಿಕೊಳ್ಳುವುದು, ಆ ಮುಖಾಂತರ ಒಂದು ಒಳ್ಳೆಯ ಅನುಭವವನ್ನಾಗಿ ಈ ದಿನಗಳನ್ನು ನೀವು ಸ್ವೀಕರಿಸಬೇಕು. ಧ್ಯಾನ, ಯೋಗ, ಪ್ರಾಣಾಯಾಮವನ್ನು ಈಗಾಗಲೇ ಮಾಡುತ್ತಿದ್ದರೆ ಮುಂದುವರಿಸಿ. ಇದನ್ನು ಹೊಸದಾಗಿ ಪ್ರಯೋಗ ಮಾಡಬೇಡಿ. ನಾವು ಮನಸ್ಸನ್ನು ಸರಿಯಾಗಿಟ್ಟುಕೊಂಡರೆ ಆರೋಗ್ಯವನ್ನು ಗಟ್ಟಿಯಾಗಿಟ್ಟುಕೊಂಡರೆ ಎಂತಹ ಕಠಿಣ ಸವಾಲನ್ನೂ ಎದುರಿಸಬಹುದು. ಅಂತಹ ಶಕ್ತಿ ಎಲ್ಲರಿಗೆ ಬರಬೇಕು. ಆದರೂ ಸಾಧ್ಯವಿಲ್ಲವಾದರೆ ಮನೋಚಿಕಿತ್ಸಕರನ್ನು ಭೇಟಿಯಾಗಬಹುದು ಎಂದು ಅವರು ಹೇಳಿದ್ದಾರೆ.
ಭಾವನಾ ಟಿವಿಗಾಗಿ ವಿಶೇಷ ವರದಿ ಜಿ ಯು ಭಟ್ ಹೊನ್ನಾವರ.
More Stories
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ