November 14, 2024

Bhavana Tv

Its Your Channel

ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ನೀಡಬೇಕು; ಡಿ.ಟಿ.ನಾಯ್ಕ

ಕುಮಟಾ/ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಮಹತ್ವ ನೀಡಬೇಕಾಗಿದೆ ಎಂದು ಸರ್ಕಾರಿ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ಡಿ.ಟಿ.ನಾಯ್ಕ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಮತ್ತು ಪ್ಲೆಸ್‍ಮೆಂಟ್ ಸೆಲ್ ಅಡಿಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಕಾರವಾರ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕಾರವಾರದ ಕೌಶಲ್ಯಾಭಿವೃದ್ಧಿ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿರುವ ಯುವ ಕೌಶಲ್ಯ ತರಬೇತಿ ಮತ್ತು ಮೌಲ್ಯಮಾಪನಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಇಂದಿನ ಶಿಕ್ಷಣ ಪದ್ಧತಿ ಕೇವಲ ಅಂಕಗಳಿಕೆಗೊಂದೇ ಸೀಮಿತವಾಗಿದೆ. ಇದರಿಂದ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವಿಪರೀತವಾಗುತ್ತಿದ್ದು, ಪದವಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಪದವಿ ಗಳಿಸಿದವರೇ ಸೈಬರ್ ಕ್ರೈಂನಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ವಿಷಾದನೀಯ. ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಮಾನವೀಯ ಗುಣಗಳ ಜೊತೆಗೆ, ಸಂಸ್ಕøತಿ ಮತ್ತು ಸಂಸ್ಕಾರಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಅಲ್ಲದೇ, ನಮ್ಮ ಸನಾತ ಧರ್ಮಗ್ರಂಥವಾದ ಭಗವದ್ಗೀತೆ ವಿಶ್ವಗ್ರಂಥವಾಗಿದ್ದು, ವಿದೇಶಿಗರೂ ಸಹ ಅದರಲ್ಲಿರುವ ಅಂಶಗಳನ್ನು ಮೆಚ್ಚಿಕೊಂಡಿದ್ದಾರೆ. ಅವುಗಳನ್ನು ಹೆಚ್ಚು ಅಧ್ಯಯನ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಗೀತಾ ವಾಲೀಕಾರ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಶೀಕ್ಷಣ ಕ್ಷಣಿಕವಾಗುತ್ತಿದೆ ಎಂಬುದು ಬೇಸರದ ಸಂಗತಿ. ಉತ್ತಮ ಜ್ಞಾನ ದೊರೆಯಲು ಇಂತಹ ಶಿಬಿರಗಳು ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕೌಶಲ್ಯ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಯುವ ಕೌಶಲ್ಯ ತರಬೇತಿ ಮತ್ತು ಮೌಲ್ಯಮಾಪನಾ ಕುರಿತು ವಿದ್ಯಾರ್ಥಿಗಳಿಗೆ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗ ಅಭಿವೃದ್ಧಿ ಕಾರ್ಯನಿರ್ವಾಹಕ ಸಾಯಿಪ್ರಸಾದ ಸಾತಕರ್ ಉಪನ್ಯಾಸ ನೀಡಿದರು.

ಸರ್ಕಾರಿ ಐ.ಟಿ.ಐ ಕಾಲೇಜಿನ ಯುವ ಕೌಶಲ್ಯ ಅಧಿಕಾರಿ ಮಂಜುಳಾ ವೇದಿಕೆಯಲ್ಲಿದ್ದರು. ಉಪನ್ಯಾಸಕಿ ನಾಗಮಣಿ ಸಿ.ಜಿ ಸ್ವಾಗತಿಸಿದರು. ಕಾಲೇಜಿನ ಉದ್ಯೋಗ ಕೋಶದ ಸಂಚಾಲಕಿ ಡಾ.ರಮ್ಯಶ್ರೀ ಎಂ.ಜಿ ನಿರೂಪಿಸಿದರು. ಉಪನ್ಯಾಸಕ ಚಂದ್ರಶೇಖರ ಕಾಳೆ ವಂದಿಸಿದರು

error: