April 26, 2024

Bhavana Tv

Its Your Channel

ಮಿಶ್ರಬೆಳೆ ಪದ್ದತಿಯಲ್ಲಿ ಸಾರ್ಥಕತೆ ಕಂಡುಕೊಂಡ ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡ

ಮಲೆನಾಡಿನ ಅಪರೂಪದ ಬೆಳೆಗಳು ಹಾಗೂ ಸಾಂಬಾರ ಪದಾರ್ಥಗಳನ್ನು ಬಯಲು ಸೀಮೆಯ ತಮ್ಮ ಜಮೀನಿನಲ್ಲಿ ಬೆಳೆದು ಸೈ ಎನಿಸಿಕೊಂಡ ಶ್ರಮಜೀವಿ, ಇತರರಿಗೆ ಮಾದರಿಯಾದ ಅನ್ನದಾತ ಸುಬ್ಬೇಗೌಡ.

ಕೃಷ್ಣರಾಜಪೇಟೆ ತಾಲ್ಲೂಕಿನ ಕಾಳೇಗೌಡನಕೊಪ್ಪಲು ಸಮೀಪದ ಹಂಗರಹಳ್ಳಿಯ ತಮ್ಮ 24ಎಕರೆ ಜಮೀನಿನಲ್ಲಿ 34 ವಿವಿಧ ಬಗೆಯ ತೋಟಗಾರಿಕೆ ಬೆಳೆಗಳಾದ ಕಾಫಿ, ಏಲಕ್ಕಿ, ಕರಿ ಮೆಣಸು, ಚಕ್ಕೆ, ಜಾಯಿಕಾಯಿ, ಸಪೋಟ, ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ತೆಂಗು, ಅಡಿಕೆ, ಕೋಕ್, ಮೋಸಂಬಿ, ಕಿತ್ತಳೆ, ಶುಂಠಿ, ಏಲಕ್ಕಿ ಬಾಳೆ, ಪಚ್ಚಬಾಳೆ, ಶ್ರೀಗಂಧ, ಕಬ್ಬು, ಅಂಜೂರ, ಜ್ಯೂಸ್ ಫ್ರೂಟ್, ಮಾವು, ನೇರಳೆ ಸೇರಿದಂತೆ 35 ವಿವಿಧ ಬಗೆಯ ಬೆಳೆಗಳನ್ನು ಬೆಳೆದು ಕೃಷಿಯನ್ನು ಲಾಭದಾಯಕ ಉಧ್ಯಮವನ್ನಾಗಿಸಿಕೊಂಡು ವಾರ್ಷಿಕ 20ಲಕ್ಷ ರೂಗಳಿಗೂ ಹೆಚ್ಚಿನ ಆದಾಯ ಗಳಿಸಿ ರೈತಕುಲಕ್ಕೆ ಮಾದರಿಯಾಗಿರುವ ಸುಬ್ಬೇಗೌಡರು ಕೃಷಿಗಾಗಿ ತಮ್ಮ ಜೀವಿತವನ್ನೇ ಮುಡುಪಾಗಿಟ್ಟಿದ್ದಾರೆ.. ತಮ್ಮ ಮಗ ಸುರೇಶ್ ಅವರೊಂದಿಗೆ ಸೇರಿಕೊಂಡು ಬೇಸಾಯ ಮಾಡುತ್ತಿರುವ ಗೌಡರು ತಾಲ್ಲೂಕಿನ ರೈತರಿಗೆ ಹೆಸರು ಮತ್ತು ಗೌರವವನ್ನು ತಂದುಕೊಟ್ಟಿದ್ದಾರೆ…

ರಸಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಕೆಮಾಡದೇ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಾಟಿ ಹಸುವಿನ ಗಂಜಲ ಬಳಸಿಕೊಂಡು ಜೀವಾಮೃತ ತಯಾರಿಸಿ, ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ಮೂಲಕ ಕಡಿಮೆ ನೀರನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಮಾಡುತ್ತಿದ್ದಾರೆ..
ತಮ್ಮ ಜಮೀನಿನಲ್ಲಿಯೇ ಹೊಂಗೆಮರಗಳು, ಸಿಲ್ವರ್, ತೇಗ, ರಕ್ತಚಂದನ ಹಾಗೂ ಬೇವಿನ ಮರಗಳನ್ನು ಬೆಳಿಸಿ ಕಾಡನ್ನು ಅಭಿವೃದ್ಧಿ ಪಡಿಸಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾಧೆ ಮಾತಿಗೆ ಅನ್ವರ್ಥವಾದರೇ ನಮ್ಮ ಪ್ರಗತಿಪರ ರೈತರಾದ ಸುಬ್ಬೇಗೌಡರು..

ಸುಬ್ಬೇಗೌಡರ ಕೃಷಿ ಪದ್ಧತಿಯನ್ನು ಗಮನಿಸಿ ರಾಜ್ಯ ಸರ್ಕಾರವು ತೋಟಗಾರಿಕೆ ಬೆಳೆಗಳ ಸಾಧನೆಯನ್ನು ಗಮನಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ…

ಬೇಸಾಯ ಮಾಡುವವರು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿರುವ ಸುಬ್ಬೇಗೌಡರು ಭೂಮಿತಾಯಿಯನ್ನು ನಂಬಿಕೊಂಡು ವೈಜ್ಞಾನಿಕವಾಗಿ ಬೇಸಾಯ ಮಾಡಿದರೆ ಭೂಮಿತಾಯಿ ಎಂದಿಗೂ ರೈತನ ಕೈಬಿಟ್ಟ ಉದಾಹರಣೆಯಿಲ್ಲ..ನಾವು ಭೂಮಿತಾಯಿಯನ್ನು ನಂಬಬೇಕು. ಬೇಸಾಯವನ್ನು ಪ್ರೀತಿಸಬೇಕು, ಆಗ ಮಾತ್ರ ಬೇಸಾಯ ನಮ್ಮ ಕೈಹಿಡಿಯುತ್ತದೆ. ಇಂದಿನ ಕೊರೋನಾ ಸಂದರ್ಭದಲ್ಲಿ ನಗರವಾಸಿಗಳು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಬೇಸಾಯವನ್ನೇ ನಂಬಿಕೊಂಡು ಬೆವರುಹರಿಸಿ ದುಡಿದರೆ ಕೊರೋನಾ ಸೇರಿದಂತೆ ಯಾವುದೇ ರೋಗಗಳು ಮತ್ತು ವೈರಾಣುಗಳು ನಮ್ಮ ಹತ್ತಿರ ಸುಳಿಯಲ್ಲ ಎನ್ನುವುದು ಸುಬ್ಬೇಗೌಡರ ಆತ್ಮವಿಶ್ವಾಸದ ನುಡಿಯಾಗಿದೆ….
ಬಯಲು ಸೀಮೆಯಲ್ಲಿ ಮಲೆನಾಡಿನ ತಂಪಿನ ಅನುಭಾವವನ್ನು ನೀಡುತ್ತಿರುವ ಸುಬ್ಬೇಗೌಡರ ಹೇಮಾವತಿ ಫಾರಂ ಅನ್ನು ಒಮ್ಮೆ ನೋಡಿದರೆ ಸಾಕು ಗೌಡರ ಬಗ್ಗೆ ಧನ್ಯತಾ ಮನೋಭಾವ ಮೂಡುತ್ತದೆ…

ವಿಶೇಷ ವರದಿ. ಕೆ.ಆರ್.ನೀಲಕಂಠ ,
ಕೃಷ್ಣರಾಜಪೇಟೆ. ಮಂಡ್ಯ ಜಿಲ್ಲೆ .

error: