May 19, 2024

Bhavana Tv

Its Your Channel

ಬಂಗಾರಪೇಟೆ ತಹಶೀಲ್ದಾರ್ ಬರ್ಬರವಾಗಿ ಹತ್ಯೆ ಮಾಡಿರುವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹ.

ಮಂಡ್ಯ: ಕೋಲಾರ ಜಿಲ್ಲೆ ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕಿಡಿಗೇಡಿಯನ್ನು ನೇಣಿಗೆ ಹಾಕಬೇಕು. ರಾಜ್ಯದಾದ್ಯಂತ ಕರ್ತವ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಗಳಿಗೆ ಗನ್ ಮ್ಯಾನ್ ಭದ್ರತೆ ನೀಡಬೇಕೆಂದು ಆಗ್ರಹಿಸಿ ಕೃಷ್ಣರಾಜಪೇಟೆ ಮಿನಿವಿಧಾನಸೌಧದ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ರಾಜ್ಯ ನೌಕರರು ಹಾಗೂ ಕಂದಾಯ ಇಲಾಖಾ ನೌಕರರು ತಹಶೀಲ್ದಾರ್ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಬಂಗಾರಪೇಟೆ ತಾಲ್ಲೂಕು ತೊಪ್ಪನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ಅವರ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಅಳತೆ ಕಾರ್ಯಕ್ಕೆ ಹೋಗಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಏಕಾಏಕಿ ಚಾಕುವಿನಿಂದ ತಿವಿದು ಹತ್ಯೆ ಮಾಡಿರುವ ಆರೋಪಿ ವೆಂಕಟಾಚಲಪತಿ ಅವರನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕು. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ಉದ್ಯೋಗ ನೀಡುವ ಜೊತೆಗೆ ೫೦ಲಕ್ಷರೂ ಸಹಾಯಧನವನ್ನು ನೀಡಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು. ಸದಾ ಕಾಲವೂ ಒತ್ತಡಗಳ ಮಧ್ಯದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ಗಳ ಜೀವಕ್ಕೆ ಅಪಾಯ ಇರುವುದರಿಂದ ತಾಲ್ಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಗಳಿಗೆ ಗನ್ ಮ್ಯಾನ್ ಭದ್ರತೆ ನೀಡಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎನ್.ಜಯರಾಂ ಮತ್ತು ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಹರೀಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಕೈಗೆ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಮೃತ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ನಡೆಸಿದರು.

ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸಿ.ಕೆ.ಶಿವರಾಮೇಗೌಡ, ಪಿ.ಜೆ.ಕುಮಾರ್, ಮಂಜುನಾಥ, ಪದ್ಮೇಶ್, ಆನಂದ್, ಎಸ್.ಕೆ.ಹೇಮಣ್ಣ, ಎಸ್.ಕೆ.ರವಿಕುಮಾರ್, ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಡಾ.ನರಸಿಂಹರಾಜು ಮತ್ತಿತರರು ಮಾತನಾಡಿ ಮೃತ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು ..

ಕೃಷ್ಣರಾಜಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಂ ಮತ್ತು ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷರಾದ ಹರೀಶ್ ಪ್ರಭಾರ ತಹಶೀಲ್ದಾರ್ ಉದಯಶಂಕರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು…

ವರದಿ . ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ .ಮಂಡ್ಯ ಜಿಲ್ಲೆ .

error: