April 27, 2024

Bhavana Tv

Its Your Channel

ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ೧೧೬ನೇ ವರ್ಷದ ಜನ್ಮದಿನ ಆಚರಣೆ

ಮಂಡ್ಯ(ಡಿ.೨೯): ಕೃಷ್ಣರಾಜಪೇಟೆ ಪಟ್ಟಣದ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ೧೧೬ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕುವೆಂಪು ಪ್ರಶಸ್ತಿ ಪ್ರಧಾನ ಮಾಡಿ, ವಿವಿಧ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು…

ಕುವೆಂಪು ಅವರು ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ವೈಚಾರಿಕಾ ಕ್ರಾಂತಿಗೆ ಆಹ್ವಾನ ನೀಡಿ ಮೂಡನಂಬಿಕೆಗಳು ಹಾಗೂ ಕಂದಾಚಾರದ ವಿರುದ್ಧ ಧ್ವನಿಯೆತ್ತಿದರು. ಸಾಮಾಜಿಕ ಅಸಮಾನತೆ ಹಾಗೂ ಮೌಢ್ಯಗಳ ವಿರುದ್ಧ ಸಮರ ಸಾರಿದ ಕುವೆಂಪು ಜಾತಿ, ಮತ ಪಂಥಗಳಿoದ ಮುಕ್ತವಾದ ವಿಶ್ವಮಾನವ ಸಂದೇಶವನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಕುವೆಂಪು ಅವರ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿವೆ.ಆದ್ದರಿಂದ ಯುವಜನರು ಆಡಂಬರದ ಜೀವನ ನಡೆಸದೇ ಕಷ್ಟಪಟ್ಟು ದುಡಿದು ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಚಂದ್ರಶೇಖರ್ ಕರೆ ನೀಡಿದರು ..

ಉಪನ್ಯಾಸಕ ಹರಿಚರಣತಿಲಕ್ ಮಾತನಾಡಿ ಕುವೆಂಪು ಅವರು ಕನ್ನಡ ಭಾಷೆಗೆ ವೈಚಾರಿಕ ಸ್ಪರ್ಷ ನೀಡಿ ಸಾಹಿತ್ಯ ಕೃಷಿ ನಡೆಸಿದ್ದಾರೆ. ಕುವೆಂಪು ಅವರು ಬ್ರಾಹ್ಮಣರ ವಿರೋಧಿಯಲ್ಲ ಅವರು ಪುರೋಹಿತಶಾಹಿ ವ್ಯವಸ್ಥೆಯನ್ನು ತಮ್ಮ ಸಾಹಿತ್ಯದ ಮೂಲಕ ತೀವ್ರವಾಗಿ ವಿರೋಧಿಸಿದ್ದಾರೆ. ಆದ್ದರಿಂದ ಯುವಜನರು ಕುವೆಂಪು ಅವರ ಕಾದಂಬರಿಗಳು ಹಾಗೂ ಜೀವನ ಸಂದೇಶವನ್ನು ಪಾಲಿಸುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು…

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅವರ ಜೀವನ ಸಂದೇಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಗುಣಗಾನ ಮಾಡಿದರು …

ಕುವೆಂಪು ಪ್ರಶಸ್ತಿ ಪ್ರಧಾನ: ನಿವೃತ್ತ ಉಪನ್ಯಾಸಕರಾದ ಹೆಚ್.ಎನ್.ಬಸವೇಗೌಡ, ವೈದ್ಯರಾದ ಡಾ.ಎನ್.ದಿವಾಕರ್, ನೋಟರಿ ಎನ್.ಆರ್.ರವಿಶಂಕರ್, ಸರ್ಕಾರಿ ಆಸ್ಪತ್ರೆಯ ಆಂಬ್ಯಲೆನ್ಸ್ ಚಾಲಕ ಆದಿಲ್ ಅಹಮದ್, ಪಿ.ಎಫ್.ಐ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಫೀ ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು …

ಕೃಷಿ ವಿಶ್ವವಿದ್ಯಾಲಯದ ವಾರ್ಷಿಕ ಪರೀಕ್ಷೆಯಲ್ಲಿ ಚಿನ್ನದಪದಕ ಪಡೆದ ತಾಲ್ಲೂಕಿನ ಗ್ರಾಮೀಣ ಪ್ರತಿಭೆ ಪಿ.ಎಸ್.ಶೀಲಾ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪವಿತ್ರ ಚಿಕ್ಕಣ್ಣ, ಯುವಕವಿ ಮಹಮದ್ ಅಜರುದ್ಧೀನ್, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಪೂಜಾಸದಾಶಿವ, ಸೋನಂ ರೆಬಲ್ ಜಬೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತಾಲ್ಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಪುರಸಭೆಯ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಸ್ನೇಹಿತ ರಮೇಶ್, ಹಾಫಿಜುಲ್ಲಾಷರೀಫ್, ಸುಗುಣ, ಕೆ.ಟಿ.ಚಕ್ರಪಾಣಿ, ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಚೇತನಾ ಮಹೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ಸೈ ಸ್ಕೂಲ್ ಆಫ್ ಡ್ಯಾನ್ಸ್ ನ ಶಶಿಕುಮಾರ್, ಸಾನ್ವಿ ಡ್ಯಾನ್ಸ್ ಅಕಾಡೆಮಿಯ ಸತೀಶ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಅವರನ್ನು ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಅಧ್ಯಕ್ಷ ಕೆಬಿಸಿ ಮಂಜು, ಗೌರವ ಸಲಹೆಗಾರ ಡಾ.ಕೆ.ಎಸ್.ಚಂದ್ರು ಸನ್ಮಾನಿಸಿ ಗೌರವಿಸಿದರು …
ಮಕ್ಕಳು ನೀಡಿದ ನೃತ್ಯ ಪ್ರದರ್ಶನ ಕಾರ್ಯಕ್ರಮವು ನೆರೆದಿದ್ದ ಸಭಿಕರು ಹಾಗೂ ಅತಿಥಿಗಳನ್ನು ರಂಜಿಸಿತು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: