April 26, 2024

Bhavana Tv

Its Your Channel

ಲಸಿಕೆ ಕೇಂದ್ರದ ಮುಂದೆ ಲಸಿಕೆ ” ನೋ ಸ್ಟಾಕ್ ” ಬೋರ್ಡ್, ಸರ್ಕಾರಗಳ ಹೊಣೆಗೇಡಿತನಕ್ಕೆ ವ್ಯಾಪಕ ಟೀಕೆ


ಮಳವಳ್ಳಿ : ಮೇ ೧ ರಿಂದ ದೇಶದ ಎಲ್ಲಾ ೧೮ ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕುವುದಾಗಿ ಪ್ರತಿಯೊಬ್ಬರು ತಪ್ಪದೇ ಹತ್ತಿರದ ಆಸ್ಪತ್ರೆಗಳಿಗೆ ಬಂದು ಕೋವಿಡ್ ಲಸಿಕೆ ಪಡೆಯುವಂತೆ ಬೊಬ್ಬೆ ಹೊಡೆದು ಬಿಟ್ಟಿ ಪ್ರಚಾರ ಗಿಟ್ಟಿಸಿ ಕೊಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಂದೋಲನ ಆರಂಭವಾದ ಎರಡೇ ದಿನಕ್ಕೆ ಲಸಿಕೆ ಕೇಂದ್ರದ ಮುಂದೆ ಲಸಿಕೆ “ನೋ ಸ್ಟಾಕ್” ಬೋರ್ಡ್ ನೇತುಹಾಕಿ ಹಾಕುವಂತೆ ಮಾಡಿರುವುದು ಸರ್ಕಾರಗಳ ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿ ಎಂಬ ವ್ಯಾಪಕ ಟೀಕಿಗೆ ಗುರಿಯಾಗಿದೆ.
ಕಳೆದ ಕೆಲ ದಿನಗಳಿಂದಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೇ ರಿಂದ ಎಲ್ಲಾ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವುದಾಗಿ ಹೇಳಿ ಅಬ್ಬರದ ಪ್ರಚಾರ ನಡೆಸಿದ್ದವು. ಜನ ಸಹ ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ ಮುಗಿ ಬಿದ್ದಿದ್ದರು. ಮೇ ೧ರಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಹಲವು ಗೊಂದಲಗಳ ನಡುವೆ ಬೆಂಗಳೂರಿನಲ್ಲಿ ಈ ಲಸಿಕೆ ಆಂದೋಲನಕ್ಕೆ ಚಾಲನೆ ನೀಡಿದ್ದರು. ಆದರೆ ಈ ಆಂದೋಲನ ಆರಂಭಕ್ಕೂ ಮೊದಲೇ ಕೆಲ ದಿನಗಳಿಂದ ಲಸಿಕೆ ಅಭಾವ ಉಂಟಾಗಿತ್ತು . ಮೊದಲ ಡೋಸ್ ಪಡೆದು ೨೮ ದಿನಕ್ಕೆ ಸರಿಯಾಗಿ ಬಂದು ೨ನೇ ಡೋಸ್ ಲಸಿಕೆ ಪಡೆಯಿರಿ ಎಂದು ವೈದ್ಯರ ಸೂಚನೆಯಂತೆ ಎರಡನೇ ಲಸಿಕೆ ಪಡೆಯಲು ಬಂದವರಿಗೆ ಈಗ ಲಸಿಕೆ ಲಭ್ಯವಿಲ್ಲ, ಮೊದಲು ಲಸಿಕೆ ಪಡೆಯುವವರಿಗೆ ಮಾತ್ರ ಆಧ್ಯತೆ ಇದ್ದು ೨ನೇ ಲಸಿಕೆ ಪಡೆಯುವವರು ೪೫ ದಿನಗಳ ನಂತರ ಬನ್ನಿ ಎಂದು ಹೇಳಿ ಜನರನ್ನು ಸಾಗಹಾಕಲಾಯಿತು.


ಈಗ ನೋಡಿದರೆ ಮೊದಲ ಲಸಿಕೆ ಪಡೆದವರಿಗೂ ಲಸಿಕೆ ಲಭ್ಯತೆ ಇಲ್ಲವಾಗಿದೆ. ಇಂದು ಮಳವಳ್ಳಿ ಆಸ್ಪತ್ರೆ ಕೇಂದ್ರಕ್ಕೆ ಲಸಿಕೆ ಪಡೆಯಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರಾದರೂ ಲಸಿಕೆ ಸ್ಟಾಕ್ ಇಲ್ಲ ಎಂಬ ಬೋರ್ಡ್ ಕೇಂದ್ರದ ಬಾಗಿಲ ಬಳಿ ರಾರಾಜಿಸುತ್ತಿರುವುದನ್ನು ಕಂಡು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತ ಮನೆಯ ದಾರಿ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವರದಿ ; ಮಲ್ಲಿಕಾರ್ಜುನಸ್ವಾಮಿ
ಮಳವಳ್ಳಿ ತಾಲೂಕು ವರದಿಗಾರರು, ಮಂಡ್ಯ ಜಿಲ್ಲೆ

error: