April 26, 2024

Bhavana Tv

Its Your Channel

ಕಲ್ಪತರು ಪ್ರಥಮದರ್ಜೆ ಕಾಲೇಜಿನಲ್ಲಿ ನೂತನವಾಗಿ ಆರಂಭವಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ

ಕೆ.ಆರ್.ಪೇಟೆ: ಯುವಜನರು ಹಾಗೂ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಗುರಿಸಾಧನೆಯತ್ತ ಹೆಜ್ಜೆ ಹಾಕಬೇಕು.. ಜೀವನದಲ್ಲಿ ಎದುರಾಗುವ ಸೋಲಿಗೆ ಹೆದರದೇ ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಳ್ಳಬೇಕು ಎಂದು ರಾಜ್ಯ ಯುವಜನ ತರಬೇತುದಾರ ವಿಠಲಾಪುರ ಜಯರಾಂ ಕರೆ ನೀಡಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಕಲ್ಪತರು ಪ್ರಥಮದರ್ಜೆ ಕಾಲೇಜಿನಲ್ಲಿ ನೂತನವಾಗಿ ಆರಂಭವಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು..

ಯುವಜನರು ಪಠ್ಯ ಚಟುವಟಿಕೆಗಳ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಒತ್ತು ನೀಡಿ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಿ ಮನನ ಮಾಡಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಸಾಧನೆ ಮಾಡಬೇಕು. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಒಂದು ಸರ್ಕಾರಿ ಕೆಲಸವನ್ನು ಪಡೆಯಬೇಕಾದರೆ ಏಕಾಗ್ರತೆ ಹಾಗೂ ಶ್ರದ್ಧೆಯಿಂದ ಅಭ್ಯಾಸ ಮಾಡಿ ಸ್ಪರ್ಧೆಯನ್ನು ಎದುರಿಸಿ ಸಾಧನೆಯನ್ನು ಮಾಡಬೇಕಾಗಿರುವುದರಿಂದ ಮೊಬೈಲ್ ಫೇಸ್ ಬುಕ್, ವ್ಯಾಟ್ಸಫ್, ವಿಡಿಯೋ ಗೇಮ್ ಎಂದು ತಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಳ್ಳದೇ ಏಕಾಗ್ರತೆಯಿಂದ ಇಷ್ಟಪಟ್ಟು ಅಭ್ಯಾಸ ಮಾಡಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಮುನ್ನಡೆಯಬೇಕು ಎಂದು ವಿಠಲಾಪುರ ಜಯರಾಂ ಕರೆ ನೀಡಿದರು..

ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಪಟ್ಟಣದ ಎಸ್.ಎಂ.ಲಿAಗಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸುರೇಶ್ ಮಾತನಾಡಿ ಯುವಜನರು ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಮೊಬೈಲ್ ಹುಳುಗಳಾಗದೇ ಪುಸ್ತಕದ ಹುಳುಗಳಾಗಿ ತಲೆತಗ್ಗಿಸಿ ಅಭ್ಯಾಸ ಮಾಡಿ ಜೀವನದಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಸುರೇಶ್ ಕರೆ ನೀಡಿದರು..

ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ಕೆಪಿಎಸ್ ಸ್ಕೂಲ್ ಪ್ರಾಂಶುಪಾಲರಾದ ಡಿ.ಬಿ.ಸತ್ಯ, ಸಾಹಿತಿ ಹಾಗೂ ಉಪನ್ಯಾಸಕರಾದ ಬಲ್ಲೇನಹಳ್ಳಿ ಮಂಜುನಾಥ್, ಸಂತೇಬಾಚಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಮಂಜುನಾಥ್, ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಮನಶಾಸ್ತ್ರಜ್ಞರಾದ ಬಸವಲಿಂಗಪ್ಪ, ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ಅಧ್ಯಕ್ಷ ಡಾ.ಕೆ.ಆರ್.ನೀಲಕಂಠ ಕಾರ್ಯಕ್ರಮದಲ್ಲಿ ಮಾತನಾಡಿದರು..
ಉಪನ್ಯಾಸಕರಾದ ಮಹೇಶ್ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ವರದಿ. ಸೈಯ್ಯದ್ ಖಲೀಲ್ .
ಕೃಷ್ಣರಾಜಪೇಟೆ . ಮಂಡ್ಯ.

error: